ಅಂಬೇಡ್ಕರ್ ಜಯಂತಿ ಆಚರಿಸಿದ್ದಕ್ಕೆ ಮಹಾರಾಷ್ಟ್ರದಲ್ಲಿ ದಲಿತ ಯುವಕನ ಹತ್ಯೆ, 7 ಮಂದಿ ಬಂಧನ
ಮುಂಬೈ, ಜೂನ್. 04: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ಮಾಡಿದ ಕಾರಣಕ್ಕೆ 24 ವರ್ಷದ ದಲಿತ ಯುವಕರನ್ನು ಹತ್ಯೆ ಮಾಡಿರುವ ಅಮಾನವೀಯ ಘಟನೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಬೋಂಧರ್ ಹವೇಲಿ ಗ್ರಾಮದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರು ಶನಿವಾರ ಏಳು ಮಂದಿಯನ್ನು ಬಂಧಿಸಿದ್ದಾರೆ.
ಎರಡು ದಿನಗಳ ಹಿಂದೆ ನಾಂದೇಡ್ ಜಿಲ್ಲೆಯ ಬೋಂಧರ್ ಹವೇಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತರನ್ನು 24 ವರ್ಷದ ಅಕ್ಷಯ್ ಭಲೇರಾವ್ ಎಂದು ಗುರುತಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಗುರುವಾರ ಸಂಜೆ ಆರೋಪಿಗಳು ಮೇಲ್ಜಾತಿ ಸಮುದಾಯದ ವ್ಯಕ್ತಿಯೊಬ್ಬರ ವಿವಾಹ ಸಂದರ್ಭದಲ್ಲಿ ಈ ದುರಂತ ನಡೆದಿದೆ.

ಮೇಲ್ಜಾತಿ ಸಮುದಾಯದ ಮದುವೆ ಕಾರ್ಯಕ್ರಮದ ವೇಳೆ ಅಲ್ಲಿಯೇ ಅಕ್ಷಯ್ ಭಲೇರಾವ್ ತನ್ನ ತಮ್ಮನ ಜೊತೆಗೆ ಹೋಗುತ್ತಿದ್ದರು, ಅವರನ್ನು ನೋಡಿದ ಗುಂಪು ಹಲ್ಲೆ ಮಾಡಿದೆ. ಅವರಲ್ಲಿ ಕೆಲವರು ಕತ್ತಿಗಳನ್ನು ಹಿಡಿದಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಬ್ಬರುನ್ನು ನೋಡಿದ ಆರೋಪಿಗಳಲ್ಲಿ ಒಬ್ಬರು ಅವರ ಕೊಲೆಗೆ ಘೋಷಣೆ ಕೂಗಿದ್ದಾರೆ.
ಅಕ್ಷಯ್ ಭಲೇರಾವ್ ಮತ್ತು ಅವರ ಸಹೋದರ ಆಕಾಶ್ ಅವರನ್ನು ನೋಡಿದ ನಂತರ "ಗ್ರಾಮದಲ್ಲಿ ಭೀಮ ಜಯಂತಿ (ಏಪ್ರಿಲ್ 14 ರಂದು ಅಂಬೇಡ್ಕರ್ ಅವರ ಜನ್ಮದಿನ) ಆಚರಿಸಿದ್ದಕ್ಕಾಗಿ ಈ ಜನರನ್ನು ಕೊಲ್ಲಬೇಕು ಎಂದು ಕೂಗಿದ್ದಾರೆ. ಇದು ತೀವ್ರ ಮಾತಿನ ಚಕಮಕಿಗೆ ಕಾರಣವಾಯಿತು. ಬಳಿಕ ಅಕ್ಷಯ್ ಭಲೇರಾವ್ ಅವರನ್ನು ಹೊಡೆದಿದ್ದಾರೆ. ಹಾಗೆಯೇ ಅವರನ್ನು ಇರಿದು ಕೊಲ್ಲಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ವೇಳೆ ಜೊತೆಗೆ ಇದ್ದ ಮೃತರ ಸಹೋದರನಿಗೂ ಥಳಿಸಲಾಗಿದೆ. ಭಾರೀ ಹಲ್ಲೆಗೆ ಒಳಗಾಗಿ ಗಂಭಿರ ಸ್ಥಿತಿಯಲ್ಲಿದ್ದ ಅಕ್ಷಯ್ ಭಲೇರಾವ್ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆಸ್ಪತ್ರೆಗೆ ದಾಖಲಿಸುವ ಮೊದಲೇ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಕೊಲೆ, ಕೊಲೆ ಯತ್ನ, ಗಲಭೆ ಮತ್ತು ಹಲ್ಲೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಏಳು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ.












Click it and Unblock the Notifications