ಕಾಂಗ್ರೆಸ್‌ಗೆ ಈ ಬಾರಿಯೂ ಅಧಿಕೃತ ವಿರೋಧ ಪಕ್ಷ ಮಾನ್ಯತೆ ಇಲ್ಲ
ನವದೆಹಲಿ, ಮೇ 24: ಕಾಂಗ್ರೆಸ್ ಪಕ್ಷಕ್ಕೆ ಈ ಲೋಕಸಭೆ ಚುನಾವಣೆಯಲ್ಲಿ ಹೀನಾಯವಾದ ಸೋಲಾಗಿದೆ. ಕಾಂಗ್ರೆಸ್ ಮಿತ್ರಪಕ್ಷಗಳೆಲ್ಲಾ ಸೇರಿದರೂ ಸಹ 100 ಸ್ಥಾನವನ್ನೂ ಗೆಲ್ಲಲಾಗಿಲ್ಲ.
ಕಾಂಗ್ರೆಸ್ ಪಕ್ಷ ಏಕಾಂಗಿಯಾಗಿ ಗೆದ್ದಿರುವುದು ಕೇವಲ 52 ಕ್ಷೇತ್ರಗಳಲ್ಲಿ ಮಾತ್ರ. ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿದ್ದು 44 ಕ್ಷೇತ್ರಗಳಲ್ಲಿ ಈ ಬಾರಿ ಕೇವಲ 8 ಕ್ಷೇತ್ರಗಳನ್ನಷ್ಟೆ ಹೆಚ್ಚಿಸಿಕೊಂಡಿದೆ.
ಕಳೆದ ಬಾರಿ ವಿರೋಧ ಪಕ್ಷವೇ ಇಲ್ಲದಂತೆ ಎನ್‌ಡಿಎ ವಿಜಯ ಸಾಧಿಸಿತ್ತು. ಈ ಬಾರಿಯೂ ಸಹ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತ ವಿರೋಧ ಪಕ್ಷ ಸ್ಥಾನ-ಮಾನ ಸಿಗುವ ಸಾಧ್ಯತೆ ಬಹಳ ಕಡಿಮೆ ಇದೆ.

ನಿಯಮದ ಪ್ರಕಾರ ಒಟ್ಟು ಲೋಕಸಭೆ ಕ್ಷೇತ್ರದ 10% ಕ್ಷೇತ್ರದಲ್ಲಾದರೂ ಗೆದ್ದ ಪಕ್ಷಕ್ಕೆ ವಿರೋಧ ಪಕ್ಷ ಸ್ಥಾನ ದೊರೆಯುತ್ತದೆ. ಆದರೆ ಕಾಂಗ್ರೆಸ್ ಗೆದ್ದಿರುವುದು 52 ಕ್ಷೇತ್ರಗಳಲ್ಲಿ ಮಾತ್ರ. ವಿರೋಧ ಪಕ್ಷವಾಗಲು 55 ಸ್ಥಾನಗಳಲ್ಲಿ ಗೆಲ್ಲಬೇಕಿತ್ತು. ಆದರೆ ಕಾಂಗ್ರೆಸ್‌ಗೆ ಮೂರು ಸ್ಥಾನಗಳು ಕಡಿಮೆ ಇದೆ.
ಆದರೆ ಆಡಳಿತ ಪಕ್ಷವು ಮನಸ್ಸು ಮಾಡಿದರೆ ಹೆಚ್ಚು ಸ್ಥಾನ ಪಡೆದಿರುವ ವಿರೋಧ ಪಕ್ಷಗಳ ಮುಖಂಡರಿಗೆ ಸಂಖ್ಯೆ ಕಡಿಮೆ ಇದ್ದರೂ ಸಹ ಅಧಿಕೃತ ವಿರೋಧ ಪಕ್ಷ ಸ್ಥಾನ ನೀಡಬಹುದು. ಆದರೆ ಕಳೆದ ಬಾರಿ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಧಿಕೃತ ವಿರೋಧ ಪಕ್ಷ ಸ್ಥಾನವನ್ನು ಬಿಜೆಪಿ ಸರ್ಕಾರ ನೀಡಿರಲಿಲ್ಲ, ಈ ಬಾರಿಯೂ ಅದೇ ಪುನರಾವರ್ತನೆ ಆಗುವ ಸಾಧ್ಯತೆ ಇದೆ.
ನಿನ್ನೆಯಷ್ಟೆ ಹೊರಬಿದ್ದ ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ಪಕ್ಷವು ಏಕಾಂಗಿಯಾಗಿ 52 ಕ್ಷೇತ್ರದಲ್ಲಿ ಮಾತ್ರವೇ ಗೆದ್ದಿದೆ. ಬಿಜೆಪಿ ಪಕ್ಷವು ಏಕಾಂಗಿಯಾಗಿ 303 ಕ್ಷೇತ್ರಗಳಲ್ಲಿ ಗೆದ್ದಿದೆ. ಎನ್‌ಡಿಎ ಗೆ 353 ಕ್ಷೇತ್ರಗಳಲ್ಲಿ ಗೆಲುವು ಸಿಕ್ಕಿದ್ದರೆ, ಯುಪಿಎಗೆ 92 ಕ್ಷೇತ್ರಗಳಲ್ಲಿ ಗೆಲುವು ದಕ್ಕಿದೆ.












Click it and Unblock the Notifications