ಛತ್ ಭಕ್ತರಿಗೆ ಸ್ವಚ್ಛ ಘಾಟ್‌ಗಳು, ನೊರೆ ಮುಕ್ತ ಯಮುನಾ: ಎಎಪಿ ಭರವಸೆ
ನವದೆಹಲಿ, ಅ.28: ಛತ್ ಪೂಜೆಯಲ್ಲಿ ಭಾಗಿಯಾಗುವ ಭಕ್ತರಿಗೆ ನೊರೆ ಮುಕ್ತ ಯಮುನಾ ಭರವಸೆಯನ್ನು ಆಮ್ ಆದ್ಮಿ ಪಾರ್ಟಿ ನೀಡಿದೆ.
ದಿಲ್ಲಿ ಜಲ ಮಂಡಳಿಯ (ಡಿಜೆಬಿ) ಯಮುನಾ ಸ್ವಚ್ಛತಾ ಕಾರ್ಯಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರದ ವಿರುದ್ಧ ಶುಕ್ರವಾರ ದಿಲ್ಲಿ ಜಲ ಮಂಡಳಿ ಉಪಾಧ್ಯಕ್ಷ ಸೌರಭ್ ಭಾರದ್ವಾಜ್ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ನಾಯಕರು 'ವಿಜ್ಞಾನ ಮತ್ತು ತಂತ್ರಜ್ಞಾನ'ದ ಬಗ್ಗೆ ಏನನ್ನಾದರೂ ಕಲಿಯಬೇಕು ಎಂದು ಹೇಳಿದ್ದಾರೆ.
'ಬಿಜೆಪಿ ನಾಯಕರು ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಒಂದಿಷ್ಟು ಕಲಿಯಬೇಕು. ಡಿಜೆಬಿಯ ಆ್ಯಂಟಿ ಫೋಮಿಂಗ್ ಕೆಮಿಕಲ್ ತಂತ್ರಜ್ಞಾನವನ್ನೂ (anti-foaming chemical technology) ಕೇಂದ್ರ ಸರ್ಕಾರದ ಎನ್‌ಎಂಸಿಜಿ ಶಿಫಾರಸು ಮಾಡಿದೆ' ಎಂದರು.
'ದೆಹಲಿ ಜಲ ಮಂಡಳಿಯು ಯಮುನಾ ನದಿಯಲ್ಲಿ ನೊರೆಯನ್ನು ಕಡಿಮೆ ಮಾಡಲು ಒಂದು ತಿಂಗಳ ಹಿಂದೆಯೇ ಛತ್ ಪೂಜೆಗಾಗಿ ಸಿದ್ಧತೆಗಳನ್ನು ಪ್ರಾರಂಭಿಸಿದೆ. ಛತ್ ಪೂಜೆ ಮಾಡುವ ಭಕ್ತರು ಸೂರ್ಯ ದೇವರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ. ಯಮುನಾದಲ್ಲಿ ಫೋಮಿಂಗ್ ಅನ್ನು ತಡೆಗಟ್ಟಲು ಡಿಜೆಬಿ ಅಳವಡಿಸಿಕೊಂಡ ರೀತಿಯ ಕ್ರಮಗಳನ್ನು ಕೇಂದ್ರ ಸರ್ಕಾರದ ಅಡಿಯಲ್ಲಿ ಶುದ್ಧ ಗಂಗಾ ರಾಷ್ಟ್ರೀಯ ಮಿಷನ್ (NMCG) ಶಿಫಾರಸು ಮಾಡಿದೆ" ಎಂದು ಸೌರಭ್ ಭಾರದ್ವಾಜ್ ಹೇಳಿದರು.

ಆಪ್, ಬಿಜೆಪಿಯ ರಾಜಕೀಯಕ್ಕೆ ಯಮುನೆ ಬಲಿ!
ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಸೌರಭ್ ಭಾರದ್ವಾಜ್, "ಯಮುನಾ ನದಿಯಲ್ಲಿ ನೊರೆಯನ್ನು ಹತ್ತಿಕ್ಕಲು ವಿಷಕಾರಿ ರಾಸಾಯನಿಕವನ್ನು ಬಳಸಲಾಗುತ್ತಿದೆ ಎಂದು ಹೇಳುವುದು ಸಂಪೂರ್ಣವಾಗಿ ಮೂರ್ಖತನ ಮತ್ತು ತಪ್ಪು" ಎಂದರು.
"ರಾಸಾಯನಿಕಗಳು ವಿಷವಲ್ಲ, ನೀರನ್ನು ಸ್ವಚ್ಛಗೊಳಿಸಲು ಬಳಸುವ ಕ್ಲೋರಿನ್ ಮತ್ತು ಆಲಂ ಕೂಡ ರಾಸಾಯನಿಕಗಳಾಗಿವೆ" ಎಂದು ಹೇಳಿದರು.
"ISO ಮತ್ತು NABL ಮಾನ್ಯತೆ ಪಡೆದ ಪ್ರಯೋಗಾಲಯವಾಗಿರುವ ಓಖ್ಲಾ ಕೊಳಚೆನೀರಿನ ಪರೀಕ್ಷಾ ಪ್ರಯೋಗಾಲಯದ ಮೂಲಕ ಡಿಜೆಬಿ ನಿಯಮಿತವಾಗಿ ಓಖ್ಲಾ ಬ್ಯಾರೇಜ್ ಮೇಲ್ವಿಚಾರಣೆ ಮಾಡುತ್ತಿದೆ. ಲ್ಯಾಬ್‌ನಲ್ಲಿ ನಡೆಸಿದ ಪರೀಕ್ಷೆಗಳ ವರದಿಗಳ ನಂತರ ಯಮುನಾ ನೀರಿನ ಗುಣಮಟ್ಟ ಸುಧಾರಿಸಿದೆ ಎಂಬುದನ್ನು ಬಹಿರಂಗಪಡಿಸುತ್ತದೆ" ಎಂದರು.

ಅನುಮೋದಿತ ರಾಸಾಯನಿಕಗಳ ಸಿಂಪಡಣೆ ಬಳಿಕ ಯಮುನೆ ಸುಧಾರಣೆ!
ಕರಗಿದ ಆಮ್ಲಜನಕದ (ಡಿಒ) ಮಟ್ಟವು 4.42 ಮಿಗ್ರಾಂ/ಲೀಟರ್‌ಗೆ ತಲುಪಿದೆ ಎಂದು ವರದಿಗಳು ಬಹಿರಂಗಪಡಿಸುತ್ತವೆ. ಇದು ರಾಸಾಯನಿಕವು ವಿಷಕಾರಿಯಲ್ಲ ಎಂದು ದೃಢೀಕರಿಸುತ್ತದೆ ಎಂದು ಮಾಹಿತಿ ನೀಡಿದರು. "ಅನುಮೋದಿತ ದುರ್ಬಲಗೊಳಿಸಿದ ರಾಸಾಯನಿಕವನ್ನು ಸಿಂಪಡಿಸಿದ ನಂತರ ಯಮುನಾ ನೀರಿನ ಗುಣಮಟ್ಟವನ್ನು ಸುಧಾರಿಸಿದೆ" ಎಂದು ತಿಳಿಸಿದರು.
ದೆಹಲಿ ಸರ್ಕಾರದ ಅಡಿಯಲ್ಲಿ ಯಮುನಾ ನೀರಿನ ಗುಣಮಟ್ಟವು ಸ್ಥಿರವಾಗಿ ಮತ್ತು ನಿರಂತರವಾಗಿ ಸುಧಾರಿಸಿದೆ ಎಂದು ವಿವಿಧ ಪರೀಕ್ಷೆಗಳ ಎಲ್ಲಾ ಡೇಟಾ ತೋರಿಸುತ್ತದೆ ಎಂದು ದಿಲ್ಲಿ ಜಲ ಮಂಡಳಿ ಉಪಾಧ್ಯಕ್ಷ ಸೌರಭ್ ಭಾರದ್ವಾಜ್ ಹೇಳಿದರು.

ಸಿಎಂ ಮಾತಿನಂತೆ 2025 ರ ವೇಳೆಗೆ ನದಿ ಸ್ವಚ್ಛ
"ನಮ್ಮ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಾಗ್ದಾನದಂತೆ 2025 ರ ವೇಳೆಗೆ ನದಿಯನ್ನು ಸ್ವಚ್ಛಗೊಳಿಸಲು ನಾವು ಬದ್ಧರಾಗಿದ್ದೇವೆ. ಹಾಗೇಯೇ ಎಲ್ಲರ ಧಾರ್ಮಿಕ ಹಕ್ಕುಗಳನ್ನು ಗೌರವಿಸುತ್ತೇವೆ ಮತ್ತು ರಕ್ಷಿಸುತ್ತೇವೆ" ಎಂದು ಸೌರವ್ ಭಾರದ್ವಾಜ್ ಹೇಳಿದರು.
"ಬಿಜೆಪಿ ನಾಯಕರು ವ್ಯಸನಕಾರಿ ಅಭ್ಯಾಸಗಳನ್ನು ಬಿಟ್ಟು, ನಡೆಯಲಿರುವ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗೆ ಸಂಬಂಧಿಸಿದ ನೈಜ ಪ್ರಶ್ನೆಗಳಿಗೆ ಉತ್ತರಿಸಬೇಕು" ಎಂದರು.

ದೆಹಲಿಯ ಸ್ವಚ್ಛತೆಗಾಗಿ ಆಪ್‌ಗೆ ಮತ ಹಾಕಿ; ಕೇಜ್ರಿವಾಲ್
'ಕಳೆದ 15 ವರ್ಷಗಳಲ್ಲಿ ಕಸ ಮತ್ತು ಸ್ವಚ್ಛತೆಯಂತಹ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪ್ರಸ್ತುತ ಸ್ಥಳೀಯ ಸಂಸ್ಥೆ ಏನು ಮಾಡಿದೆ ಎಂದು ಜನರು ತಿಳಿದುಕೊಳ್ಳಬೇಕು' ಎಂದರು.
ದೆಹಲಿಯಲ್ಲಿ ಅತಿ ದೊಡ್ಡ ಕಸದ ಘನತ್ಯಾಜ್ಯ ಸ್ಥಳವಾದ ಗಾಜಿಪುರದ ಸ್ಯಾಚುರೇಟೆಡ್ ಲ್ಯಾಂಡ್‌ಫಿಲ್‌ಗೆ ವಿಷಯವಾಗಿ ಬಿಜೆಪಿ ಹಾಗೂ ಎಎಪಿ ನಡುವೆ ಕಸದ ಗುದ್ದಾಟ ಶುರುವಾಗಿದೆ. ಅರವಿಂದ್ ಕೇಜ್ರಿವಾಲ್ ಭೇಟಿಗೂ ಮುನ್ನ ಗಾಜಿಪುರದಲ್ಲಿ ಬಿಜೆಪಿ ಕಾರ್ಯಕರ್ತರು ಎಎಪಿ ವಿರುದ್ಧ ಪ್ರತಿಭಟನೆ ನಡೆಸಿದ್ದರು.
ಅಲ್ಲಿಗೆ ಭೇಟಿ ನೀಡಿದ ಬಳಿಕ "ಕಳೆದ 15 ವರ್ಷಗಳಲ್ಲಿ ಬಿಜೆಪಿ ಇಡೀ ದೆಹಲಿಯನ್ನು ಕಸದ ರಾಶಿ ಮಾಡಿದೆ. ಇಂದು ನಾನು ಅವರ ಗಾಜಿಪುರದ ಕಸದ ಪರ್ವತವನ್ನು ನೋಡಲು ಬಂದಿದ್ದೇನೆ. ಈ ಬಾರಿಯ ಮುನ್ಸಿಪಲ್ ಚುನಾವಣೆಯಲ್ಲಿ ದೆಹಲಿಯ ಸ್ವಚ್ಛತೆಗಾಗಿ ಮತ ಚಲಾಯಿಸಿ ಎಂಬುದು ದೆಹಲಿಯ ಜನತೆಗೆ ನನ್ನ ಮನವಿ. ನಾವೆಲ್ಲರೂ ಸೇರಿ ದೆಹಲಿಯನ್ನು ಸ್ವಚ್ಛ ಮತ್ತು ಸುಂದರವಾಗಿ ಮಾಡಬೇಕು" ಎಂದು ಕೇಜ್ರಿವಾಲ್ ಹೇಳಿದ್ದಾರೆ.












Click it and Unblock the Notifications