27 ವರ್ಷಗಳ ಶ್ರಮದಿಂದ ಕೆರೆ ನಿರ್ಮಿಸಿ ಹಳ್ಳಿಯ ಬರ ನೀಗಿಸಿದ ಸಾಧಕ
ಛತ್ತೀಸ್ ಗಢ, ಸೆಪ್ಟೆಂಬರ್ 1: ಇಲ್ಲಿನ ಕೊರಿಯಾದಲ್ಲಿರುವ ಚಿರ್ಮಿ ಊರಿಗೆ ಯಾರಾದರೂ ಭೇಟಿ ನೀಡಿದರೆ ಇಲ್ಲೊಂದು ಸುಂದರ ಕೆರೆ ಕಣ್ಸೆಳೆಯುತ್ತದೆ. ಇದೀಗ ಮಳೆ ಬಂದು ಕೆರೆ ತುಂಬಿಕೊಂಡಿದೆ. ಕೆರೆ ಸುತ್ತ ಹಸಿರು ಬೆಳೆದು ನಿಂತಿದೆ. ಇದರ ನೀರಿನಲ್ಲಿ ಹಲವು ಜಲಚರಗಳೂ ಜೀವನ ನಡೆಸುತ್ತಿವೆ.
ನಾವು ಹೇಳಲು ಹೊರಟಿರುವ ಕಥೆ ಕೆರೆಯದ್ದಲ್ಲ. ಇಂಥಹದ್ದೊಂದು ಅತ್ಯದ್ಭುತ ಕೆರೆ ನಿರ್ಮಿಸಿದ ಆಧುನಿಕ ಭಗೀರಥ ಶಾಮ್ಲಾಲ್ ರಾಜ್ವಾಡರದ್ದು.
ಸದ್ಯ ಶಾಮ್ಲಾಲ್ ರಾಜ್ವಾಡರಿಗೆ 42 ವರ್ಷ ವಯಸ್ಸು. ಅವರು ಈ ಕೆರೆ ತೆಗೆಯಲು ಆರಂಭಿಸಿದಾಗ ಅವರಿಗೆ ಕೇವಲ 15 ವರ್ಷ ವಯಸ್ಸು.

27 ವರ್ಷಗಳ ನಿರಂತರ ಕಾಯಕ
ಅವತ್ತಿಂದ ಗುದ್ದಲಿ ಹಿಡಿದು ಕೆರೆ ತೆಗೆಯಲು ಆರಂಭಿಸಿದವರು, ನಿರಂತರ 27 ವರ್ಷ ಅದೇ ಕಾಯಕ ಮುಂದುವರಿಸಿದ್ದಾರೆ. ಇದೀಗ ಕೊನೆಗೂ ಅವರ ಕನಸಿನ ಸುಂದರ ಕೆರೆ ಚಿರ್ಮಿಯಲ್ಲಿ ನಿರ್ಮಾಣವಾಗಿದೆ.

ಬರಗಾಲದಿಂದ ಬೇಗೆಗೆ ಮುಕ್ತಿ
"ನನ್ನ ಊರಿನಲ್ಲಿ ಬರದ ಬೇಗೆ ಜೋರಾಗಿತ್ತು. ಅದಕ್ಕಾಗಿ ಕೆರೆ ಅಗೆಯಲು ಆರಂಭಿಸಿದೆ. 27 ವರ್ಷ ನಾನು ಶ್ರಮಪಟ್ಟಿದ್ದಕ್ಕೆ ಇವತ್ತು ಕೆರೆ ನಿರ್ಮಾಣವಾಗಿದೆ. ಇದಕ್ಕೆ ನನಗೆ ಯಾರೂ ಸಹಾಯ ಮಾಡಿಲ್ಲ. ಕೆರೆ ನಿರ್ಮಿಸುವ ಈ ಕೆಲಸವನ್ನು ಜೀವ ಇರುವವರೆಗೂ ಮುಂದುವರೆಸುತ್ತೇನೆ," ಎಂದು ಹೆಮ್ಮೆಯಿಂದ ಹೇಳುತ್ತಾರೆ ಶ್ಯಾಮ್ಲಾಲ್ ರಾಜ್ವಾಡ್.

ಆಧುನಿಕ ಭಗೀರಥನಿಗೆ ಸರಕಾರಿ ಗೌರವ
ಶ್ಯಾಮ್ಲಾಲ್ ರಾಜ್ವಾಡ್ ಏಕಾಂಗಿಯಾಗಿ ಕೆರೆ ನಿರ್ಮಿಸಿದ್ದು ಸರಕಾರಿ ಅಧಿಕಾರಿಗಳ ಗಮನವನ್ನೂ ಸೆಳೆದಿದೆ. ಇದೀಗ ಅಲ್ಲಿನ ಜಿಲ್ಲಾಧಿಕಾರಿ ನಾವು ಅವರಿಗೆ ಸರಕಾರಿ ಸೌಲಭ್ಯಗಳನ್ನು ನೀಡುತ್ತಿವೆ. ನಾವು ಅವರ ಹೆಸರನ್ನು ತಕ್ಷಣ ಸರಕಾರಕ್ಕೆ ಶಿಫಾರಸ್ಸು ಮಾಡುತ್ತೇನೆ ಎಂದಿದ್ದಾರೆ.

ಆಗದು ಎಂದು ಕೈಕಟ್ಟಿ ಕುಳಿತರೆ
ಎಲ್ಲವೂ ಸರಕಾರವೇ ಮಾಡಬೇಕು ಎಂದು ಆಶಿಸುತ್ತಾ ಕೂರುವವರಿಗೆ ಶ್ಯಾಮ್ಲಾಲ್ ರಾಜ್ವಾಡ್ ಬಿಸಿ ಮುಟ್ಟಿಸಿದ್ದಾರೆ. ಏಕಾಂಗಿಯಾಗಿ ಕೆರೆ ನಿರ್ಮಸಿ ಸಾಧನೆ ಮೆರೆದಿದ್ದಲ್ಲದೆ, ಕೈಕಟ್ಟಿ ಕೂತರೆ ಏನೂ ಆಗುವುದಿಲ್ಲ ಎಂಬ ಸಂದೇಶವನ್ನೂ ಸಾರಿದ್ದಾರೆ.












Click it and Unblock the Notifications