2023-24ನೇ ಸಾಲಿನ ಕೇಂದ್ರ ಬಜೆಟ್: ವಿಪಕ್ಷಗಳ ಪ್ರತಿಕ್ರಿಯೆ ಏನು?
ಇಂದು ಬಹುನಿರೀಕ್ಷೆತ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಿದರು. ಬಿಜೆಪಿ ಇದೊಂದು ಪರಿಪೂರ್ಣ ಬಜೆಟ್ ಎಂದು ಶ್ಲಾಘಿಸಿದರೆ, ವಿಪಕ್ಷಗಳು ಬಜೆಟ್ ಬಗ್ಗೆ ಅಸಮಧಾನಗೊಂಡಿವೆ.
ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡನೆ ಮಾಡಿದರು. ವಿಪಕ್ಷಗಳು ಬಜೆಟ್ ಬಗ್ಗೆ ಅಸಮಧಾನ ವ್ಯಕ್ತಪಡಿಸಿವೆ. ಈ ಬಾರಿ ಬಜೆಟ್‌ನಲ್ಲಿ ತೆರಿಗೆ ಪದ್ದತಿಯಲ್ಲಿ ಬದಲಾವಣೆಯನ್ನು ತರಲಾಗಿದೆ. ಇದು ಈ ಬಾರಿಯ ಬಜೆಟ್‌ನ ಪ್ರಮುಖ ವಿಷಯಗಳಲ್ಲಿ ಒಂದಾಗಿದೆ. ಹೊಸ ತೆರಿಗೆ ಪದ್ದತಿಯಲ್ಲಿ 7 ಲಕ್ಷದವರೆಗೆ ಆದಾಯವನ್ನು ಹೊಂದಿದ್ದರೆ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ. ಈ ವಿಚಾರವಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಇಂದಿನ ಬಜೆಟ್ ಬಗ್ಗೆ ಅರವಿಂದ್ ಕೇಜ್ರಿವಾಲ್ ಅವರು, 'ಲಕ್ಷ ಕೋಟಿ ಆದಾಯ ತೆರಿಗೆ ಕಟ್ಟಿದ್ದೇವೆ. ಆದರೆ ಬಜೆಟ್‌ನಲ್ಲಿ 325 ಕೋಟಿ ರೂ. ಮಾತ್ರ ನಿಗದಿ ಮಾಡಲಾಗಿದೆ' ಎಂದು ಕಿಡಿ ಕಾರಿದರು. ಇಂದಿನ ಬಜೆಟ್ ಬಗ್ಗೆ ವಿಪಕ್ಷಗಳ ಸದಸ್ಯರು ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇಂದಿನ ಬಜೆಟ್ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಟೀಕೆ
'ಮುಂಬರುವ 3-4 ರಾಜ್ಯಗಳ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮೋದಿ ಸರ್ಕಾರ ಬಜೆಟ್ ಮಂಡಿಸಿದೆ. ಬಡವರಿಗೆ ಮತ್ತು ಹಣದುಬ್ಬರವನ್ನು ನಿಯಂತ್ರಿಸಲು ಬಜೆಟ್‌ನಲ್ಲಿ ಏನೂ ಇಲ್ಲ. ಸರ್ಕಾರಿ ಖಾಲಿ ಹುದ್ದೆಗಳು ಮತ್ತು MNREGA ಭರ್ತಿಗೆ ಯಾವುದೇ ಕ್ರಮಗಳಿಲ್ಲ' ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
|
ಅಖಿಲೇಶ್ ಯಾದವ್, ರಾಜೀವ್ ರಂಜನ್ ಕಿಡಿ
ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಬಜೆಟ್ ಜನರಿಗೆ ಆಶಾ ಬದಲು ನಿರಾಶಾ ನೀಡಿದೆ ಎಂದಿದ್ದಾರೆ. 2023-24ನೇ ಸಾಲಿನ ಕೇಂದ್ರ ಬಜೆಟ್ ದೇಶದ ಜನರಿಗೆ "ಆಶಾ" (ಭರವಸೆ) ಬದಲಿಗೆ "ನಿರಾಶಾ" (ಹತಾಶೆ) ನೀಡಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಬುಧವಾರ ಹೇಳಿದ್ದಾರೆ. ಬಜೆಟ್ ಹಣದುಬ್ಬರ ಮತ್ತು ನಿರುದ್ಯೋಗವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಅವರು ಹೇಳಿದ್ದಾರೆ.
2023ರ ಬಜೆಟ್ನಲ್ಲಿ ಏನೂ ಇಲ್ಲ. ಇದು 'ಕನಸಿನ ವ್ಯಾಪಾರಿ'ಯಂತೆ. ಕನಸಿನ ನಂತರ ನೀವು ಎಚ್ಚರಗೊಂಡಾಗ ಏನೂ ನನಸಾಗುವುದಿಲ್ಲ. ಅಲ್ಲದೆ, ಹಣದುಬ್ಬರ ಮತ್ತು ನಿರುದ್ಯೋಗವನ್ನು ಹೇಗೆ ನಿಯಂತ್ರಿಸುವುದು ಎಂಬುದರ ಕುರಿತು ಏನನ್ನೂ ಉಲ್ಲೇಖಿಸಲಾಗಿಲ್ಲ ಎಂದು ಜೆಡಿಯು ಸಂಸದ ರಾಜೀವ್ ರಂಜನ್ ಬಜೆಟ್ ಬಗ್ಗೆ ಅಸಮಧಾನಗೊಂಡರು.
|
ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅಸಮಧಾನ
ಹಣದುಬ್ಬರ, ನಿರುದ್ಯೋಗಕ್ಕೆ ಬಜೆಟ್‌ನಲ್ಲಿ ಪರಿಹಾರವಿಲ್ಲ. ಬಜೆಟ್‌ನಲ್ಲಿ ಕೇವಲ ಪದಗಳು ಮತ್ತು ವಾಕ್ಚಾತುರ್ಯಗಳು ಕಂಡುಬಂದಿವೆ. ಬೃಹತ್ ಕೈಗಾರಿಕೋದ್ಯಮಿಗಳಿಗೆ ಮಾತ್ರ ಬಜೆಟ್‌ನಿಂದ ಲಾಭ ಸಿಕ್ಕಿದೆ. ಹಣದುಬ್ಬರ ಮತ್ತು ಬೆಲೆ ಏರಿಕೆಯನ್ನು ಪರಿಗಣಿಸಿ 7 ಲಕ್ಷದವರೆಗಿನ ತೆರಿಗೆ ವಿನಾಯಿತಿ ಅತ್ಯಲ್ಪವಾಗಿದೆ. ಮಧ್ಯಮ ವರ್ಗದವರ ಪಾಲಿಗೆ ನೀರ ಹನಿ ಇದ್ದಂತೆ ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಬಜೆಟ್ ಬಗ್ಗೆ ಬೇಸರ ವ್ಯಕ್ತಪಡಿಸಿದರು.
|
ಬಜೆಟ್ ಕುರಿತು ಕಾಂಗ್ರೆಸ್ ಸಂಸದ ಶಶಿ ತರೂರ್
2023 ರ ಕೇಂದ್ರ ಬಜೆಟ್‌ನಲ್ಲಿ "ಕೆಲವು ಒಳ್ಳೆಯ ವಿಷಯಗಳಿವೆ" ಎಂದು ಒಪ್ಪಿಕೊಂಡ ಕಾಂಗ್ರೆಸ್ ಸಂಸದ ಶಶಿ ತರೂರ್, ಬಜೆಟ್‌ನಲ್ಲಿ MNREGA, ಬಡ ಗ್ರಾಮೀಣ ಕಾರ್ಮಿಕರು, ಉದ್ಯೋಗ ಮತ್ತು ಹಣದುಬ್ಬರದ ಬಗ್ಗೆ ಯಾವುದೇ ಉಲ್ಲೇಖವನ್ನು ಮಾಡಿಲ್ಲ ಎಂದು ಹೇಳಿದರು. "ಕೆಲವು ಮೂಲಭೂತ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ" ಎಂದು ತರೂರ್ ಹೇಳಿದರು.
'ಕಳೆದ 8-9 ವರ್ಷಗಳಿಂದ ಬರುತ್ತಿದ್ದ ಬಜೆಟ್ ಇದೇ ಆಗಿದೆ. ಹೆಚ್ಚಿದ ತೆರಿಗೆ, ಕಲ್ಯಾಣ ಯೋಜನೆಗಳು ಮತ್ತು ಸಬ್ಸಿಡಿಗಳಿಗೆ ಹಣ ಖರ್ಚು ಮಾಡುತ್ತಿಲ್ಲ. ಕೆಲವು ನೆಕ್ಸಸ್ ಬಂಡವಾಳಶಾಹಿಗಳು ಮತ್ತು ದೊಡ್ಡ ಉದ್ಯಮಿಗಳಿಗೆ ತೆರಿಗೆ ಸಂಗ್ರಹಿಸಲಾಗುತ್ತಿದೆ. ತೆರಿಗೆಯಿಂದ ಸಾರ್ವಜನಿಕರಿಗೆ ಲಾಭವಾಗಬೇಕಿದೆ' ಎಂದು ಪಿಡಿಪಿಯ ಮೆಹಬೂಬಾ ಮುಫ್ತಿ ಹೇಳಿದರು.
|
ಬಜೆಟ್ ಬಗ್ಗೆ ಕೆ.ಸಿ.ವೇಣುಗೋಪಾಲ್ ಪ್ರತಿಕ್ರಿಯೆ
'ಈ ಬಜೆಟ್ ದೇಶದ ನೈಜತೆಯನ್ನು ತಿಳಿಸುತ್ತಿಲ್ಲ. ಇದು ಕೇವಲ ಅಲಂಕಾರಿಕ ಘೋಷಣೆಗಳನ್ನು ಹೊಂದಿದೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಿಂದ ವಿಮಾ ಕಂಪನಿಗಳು ಮಾತ್ರ ಲಾಭ ಪಡೆದಿವೆ. ರೈತರಲ್ಲ' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ತಿಳಿಸಿದರು.
'ಈ ಬಜೆಟ್ ಮೋದಿ ಸರ್ಕಾರದ ವೈಫಲ್ಯವನ್ನು ದೃಢಪಡಿಸುತ್ತದೆ. ಇದು ಕೆಲವು ರಾಜ್ಯಗಳ ಬಜೆಟ್ ಮಾತ್ರ ಎಂದು ತೋರುತ್ತದೆ. 10 ಲಕ್ಷದವರೆಗೆ ತೆರಿಗೆ ವಿನಾಯಿತಿಯನ್ನು ನಿರೀಕ್ಷಿಸಿದ್ದೆವು. ನಾವು ತೆಲಂಗಾಣದ ಜನರಿಗೆ ಉತ್ತಮ ಸಂಬಳ ನೀಡುತ್ತೇವೆ, ಆದ್ದರಿಂದ ಈ ವಿನಾಯಿತಿ ನಮಗೆ ಯಾವುದೇ ಪ್ರಯೋಜನವಿಲ್ಲ' ಎಂದು ಬಿಆರ್‌ಎಸ್ ಮುಖಂಡರಾದ ಕವಿತಾ ಕಲ್ವಕುಂಟ್ಲ ಹೇಳಿದರು.












Click it and Unblock the Notifications