ನೆರೆಯ ದೇಶಗಳಿಗೆ ಹೋಲಿಸಿದ್ರೆ ಭಾರತದಲ್ಲಿ ಬಿಪಿಎಲ್ ಕುಟುಂಬಳಿಗೆ LPG ಸಿಲಿಂಡರ್ ಎಷ್ಟು ರೂಪಾಯಿಗೆ ಸಿಗುತ್ತದೆ ಗೊತ್ತಾ?
ನವದೆಹಲಿ, ಡಿಸೆಂಬರ್, 12: ಬಿಪಿಎಲ್ ಕಾರ್ಡುದಾರರಿಗೆ ಆಗಾಗಾ ಸರ್ಕಾರ ಗುಡ್‌ನ್ಯೂಸ್ ಕೊಡುತ್ತಲೇ ಬಂದಿದೆ. ಹಾಗೆಯೇ ಉಜ್ವಲ ಯೋಜನೆಯಡಿ ಎಲ್.ಪಿ.ಜಿ. ಸಿಲಿಂಡರ್ ದರ ನೆರೆಯ ದೇಶಗಳಿಗಿಂತ ಕಡಿಮೆ ಇದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಅದರಲ್ಲೂ ಬಿಪಿಎಲ್ ಕುಟುಂಬಗಳಿಗೆ ನೀಡುತ್ತಿರುವ ಅಡುಗೆ ಅನಿಲ ಸಿಲಿಂಡರ್ ದರ ನೆರೆ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರಿ ಕಡಿಮೆಯಿದೆ ಎಂದು ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರ ತಿಳಿಸಿದೆ.
ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಈ ಬಗ್ಗೆ ಮಾತನಾಡಿದ್ದು, ಪಾಕಿಸ್ತಾನದಲ್ಲಿ ಪ್ರತಿ ಸಿಲಿಂಡರ್ ದರ 1,059 ರೂಪಾಯಿ, ಶ್ರೀಲಂಕಾದಲ್ಲಿ 1033 ರೂಪಾಯಿ, ನೇಪಾಳದಲ್ಲಿ 1,198 ರೂಪಾಯಿ ಇದ್ದು, ಇನ್ನು ನಮ್ಮ ಭಾರತದಲ್ಲಿ ಉಜ್ವಲ ಯೋಜನೆ ಅಡಿಯಲ್ಲಿ 14.2 ಕೆಜಿ ಸಿಲಿಂಡರ್ ಅನ್ನು ಕೇವಲ 603 ರೂಪಾಯಿಗೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರ ಹೆಚ್ಚಳ
ಕೆಲವು ತಿಂಗಳುಗಳ ಹಿಂದೆಯಷ್ಟೇ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಿದ್ದವು. ಈ ಪ್ರಕಾರ ಅಕ್ಟೋಬರ್ 1ರಂದು ಜಾರಿಗೆ ಬರುವಂತೆ 19 ಕೆ.ಜಿ.ಯ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರವನ್ನು 209 ರೂಪಾಯಿ ಹೆಚ್ಚಿಸಲಾಗಿತ್ತು.
ಆಗ ನವದೆಹಲಿಯಲ್ಲಿ 19 ಕೆ.ಜಿ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ 1731.50 ರೂಪಾಯಿಗೆ ಮಾರಾಟ ಆಗುತ್ತಿತ್ತು.
ಒಂದು ತಿಂಗಳ ಹಿಂದೆ, ಸರ್ಕಾರವು ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಗಳನ್ನು 200 ರೂಪಾಯಿಗಳಷ್ಟು ಕಡಿತಗೊಳಿಸಿತ್ತು. ಆದರೆ ನಂತರ ತೈಲ ಕಂಪನಿಗಳು ವಾಣಿಜ್ಯ ಸಿಲಿಂಡರ್ ದರವನ್ನು ದಿಢೀರ್ 209 ರೂಪಾಯಿನಷ್ಟು ಏರಿಕೆ ಮಾಡಿದ್ದು, ಇದರಿಂದ ದಿನಸಿ ಧಾನ್ಯಗಳ ಬೆಲೆ ಏರಿಕೆಯಿಂದ ಸಂಕಷ್ಟಕ್ಕೀಡಾಗಿರುವ ಹೋಟೆಲ್ ಹಾಗೂ ಇತರ ಆಹಾರೋದ್ಯಮ ನಡೆಸುತ್ತಿರುವವರಿಗೆ ಮತ್ತಷ್ಟು ಸಂಕಷ್ಟ ಆಗಿತ್ತು.
ಅಕ್ಟೋಬರ್ 1 ರಿಂದ ಅಂದರೆ ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ದರಗಳು ಸ್ಥಿರವಾಗಿತ್ತು. ಪ್ರಮುಖ ನಗರಗಳಲ್ಲಿ 14.20 ಕೆಜಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ದರಗಳನ್ನು ನೋಡುವುದಾದರೆ, ನವದೆಹಲಿಯಲ್ಲಿ 903 ರೂಪಾಯಿ, ಕೋಲ್ಕತ್ತಾದಲ್ಲಿ 929 ರೂಪಾಯಿ, ಮುಂಬೈನಲ್ಲಿ 902.50 ರೂಪಾಯಿ ಮತ್ತು ಚೆನ್ನೈನಲ್ಲಿ 918.50 ರೂಪಾಯಿ ಆಗಿತ್ತು.
ಇನ್ನು ತೈಲ ಕಂಪನಿಗಳು ಸೆಪ್ಟೆಂಬರ್ 2023ರಲ್ಲಿ ದೇಶೀಯ ಮತ್ತು ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ದತವನ್ನು ಕಡಿಮೆ ಮಾಡಿದ್ದು, ನವದೆಹಲಿಯಲ್ಲಿ 19 ಕೆ.ಜಿ.ಸಿಲಿಂಡರ್ ಬೆಲೆ 1,522 ರೂಪಾಯಿಗೆ ಇಳಿಸಲಾಗಿತ್ತು. ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳ ಹಿನ್ನೆಲೆ ಹೋಟೆಲ್ ರೆಸ್ಟೋರೆಂಟ್‌ಗಳಲ್ಲಿ ಊಟದ ದರವನ್ನು ಹೆಚ್ಚಿಸಲಾಗಿತ್ತು
ಕೇಂದ್ರ ಸಚಿವ ಸಂಪುಟವು ಉಜ್ವಲ ಯೋಜನೆಯಡಿ ಹೆಚ್ಚುವರಿ 75 ಲಕ್ಷ ಹೊಸ ಎಲ್‌ಪಿಜಿ ಸಂಪರ್ಕಗಳನ್ನು ಅನುಮೋದಿಸಿತು, ಇದನ್ನು ಮುಂದಿನ ಮೂರು ವರ್ಷಗಳಲ್ಲಿ ನೀಡಲಾಗುವುದು. ಈ ಸಂಪರ್ಕಗಳ ಒಟ್ಟು ವೆಚ್ಚ 1,650 ಕೋಟಿ ರೂಪಾಯಿ ಆಗಿರಲಿದೆ.
ಉಜ್ವಲ ಯೋಜನೆಯಡಿ ನೀಡಲಾಗುತ್ತಿರುವ ಅಸ್ತಿತ್ವದಲ್ಲಿರುವ ಠೇವಣಿ-ಮುಕ್ತ ಸಂಪರ್ಕಗಳ ಮುಂದುವರಿಕೆಯಲ್ಲಿ ಈ ಹೊಸ ಸಂಪರ್ಕಗಳನ್ನು ನೀಡಲಾಗುವುದು ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಹೇಳಿದ್ದರು.
ಗ್ರಾಮೀಣ ಕುಟುಂಬಗಳ ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮ ಬೀರುವ ಅಡುಗೆಗಾಗಿ ಮರವನ್ನು ಅವಲಂಬಿಸಿರುವ ಕುಟುಂಬಗಳಿಗೆ 75 ಲಕ್ಷ ಹೊಸ ಸಂಪರ್ಕಗಳನ್ನು ನೀಡಲಾಗುವುದು ಎಂದು ಅವರು ಹೇಳಿದ್ದರು. ಈ ಠೇವಣಿ-ಮುಕ್ತ ಸಂಪರ್ಕಗಳನ್ನು ನೀಡುವ ವೆಚ್ಚವನ್ನು ಕೇಂದ್ರ ಸರ್ಕಾರವು ಭರಿಸಲಿದೆ, ನಂತರ ಅದನ್ನು ತೈಲ ಮಾರುಕಟ್ಟೆ ಕಂಪನಿಗಳು ಮರುಪಾವತಿ ಮಾಡುತ್ತವೆ ಎಂದು ಹೇಳಿದ್ದರು.












Click it and Unblock the Notifications