ಸಂಜೆ ತ್ರಿಪುರಾ ಮುಖ್ಯಮಂತ್ರಿ ಆಯ್ಕೆ: ರಾಮ್ ಮಾಧವ್
ಅಗರ್ತಲಾ, ಮಾರ್ಚ್ 3: ಎಡಪಕ್ಷಗಳ ಭದ್ರ ಕೋಟೆ ತ್ರಿಪುರಾದಲ್ಲಿ ಬಿಜೆಪಿ ಇದೇ ಮೊದಲ ಬಾರಿಗೆ ತನ್ನ ಝಂಡಾ ಊರಿದೆ. ರಾಜ್ಯದಲ್ಲಿ ಭರ್ಜರಿ ಜಯಗಳಿಸಿರುವ ಕೇಸರಿ ಪಕ್ಷ ಸಂಜೆ ತ್ರಿಪುರಾದ ನೂತನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಿದೆ.
"ಸಂಜೆ ನಮ್ಮ ಬಿಜೆಪಿ ಸಂಸದೀಯ ಮಂಡಳಿ ಸಭೆ ನಡೆಯಲಿದೆ. ಸಭೆಯಲ್ಲಿ ಈ ಬಗ್ಗೆ (ತ್ರಿಪುರಾ ಮುಖ್ಯಮಂತ್ರಿ) ತೀರ್ಮಾನ ತೆಗೆದುಕೊಳ್ಳುತ್ತೇವೆ," ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅಗರ್ತಲಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಬಿಜೆಪಿ ಮತ್ತು ಮಿತ್ರಪಕ್ಷ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (ಐಪಿಎಫ್ ಟಿ) 41ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು 60 ಸದಸ್ಯ ಬಲದ ತ್ರಿಪುರಾ ವಿಧಾನಸಭೆಯಲ್ಲಿ ಅಭೂತಪೂರ್ವ ಜಯದತ್ತ ಹೆಜ್ಜೆ ಹಾಕಿದೆ. ಇಲ್ಲಿ ಬಿಜೆಪಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿರಲಿಲ್ಲ. ಇದೀಗ ಸಂಸದೀಯ ಮಂಡಳಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಿದೆ.

ಸಂಸದೀಯ ಮಂಡಳಿ ಬಿಜೆಪಿಯ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಮಂಡಳಿಯಾಗಿದ್ದು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ನಿತಿನ್ ಗಡ್ಕರಿ ಮತ್ತಿತರರು ಇದ್ದಾರೆ.












Click it and Unblock the Notifications