ಕೇರಳದಲ್ಲಿ ಕರ್ನಾಟಕ ಸರ್ಕಾರದಿಂದ ಭೂಮಿ ಖರೀದಿ ಪ್ರಕ್ರಿಯೆಗೆ ಬಿಜೆಪಿ ಗರಂ, ಹಿನ್ನೆಲೆ ಏನು ?
ಕೇರಳದಲ್ಲಿ ಕರ್ನಾಟಕ ಸರ್ಕಾರವು ಭೂಮಿ ಖರೀದಿ ಮಾಡುವುದಕ್ಕೆ ಮುಂದಾಗಿದ್ದು, ಇದನ್ನು ರಾಜ್ಯ ಬಿಜೆಪಿ ವಿರೋಧಿಸಿದೆ. ರಾಜ್ಯದಲ್ಲಿ ಬಾಣಂತಿಯರು ಹಾಗೂ ನವಜಾತ ಶಿಶುಗಳು ಸಾವನ್ನಪ್ಪುತ್ತಿದ್ದಾರೆ. ಸಾಲು ಸಾಲು ಸಮಸ್ಯೆಗಳನ್ನು ಪರಿಹರಿಸಲು ವಿಫಲವಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು ಇದೀಗ ಕೇರಳದಲ್ಲಿ ಭೂಮಿ ಖರೀದಿ ಮಾಡುವುದಕ್ಕೆ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರೆದಿರುವ ಪತ್ರವನ್ನು ಉಲ್ಲೇಖಿಸಿ ಬಿಜೆಪಿ ವಾಗ್ದಾಳಿ ನಡೆಸಿದೆ.
ಕರ್ನಾಟಕ ಹಾಗೂ ಕೇರಳದ ನಡುವೆ ವಯನಾಡ್ ಸಂತ್ರಸ್ತರಿಗೆ ನೆರವು ನೀಡುವ ವಿಚಾರವಾಗಿ ಭಿನ್ನಾಭಿಪ್ರಾಯ ಮೂಡಿದೆ. ವಯನಾಡ್‌ನಲ್ಲಿ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡುವ ವಿಚಾರವು ಇದೀಗ ರಾಜಕೀಯ ವಾಕ್ಸಮರಕ್ಕೆ ದಾರಿ ಮಾಡಿಕೊಟ್ಟಿದೆ. ಕೇರಳದಲ್ಲಿ ಈ ವರ್ಷ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಸಾವಿರಾರು ಜನ ಮನೆ ಕಳೆದುಕೊಂಡಿದ್ದು, ನೂರಾರು ಜನ ಮೃತಪಟ್ಟಿದ್ದಾರೆ. ಕೇರಳದಲ್ಲಿ ಸಂಭವಿಸಿದ ಈ ದುರಂತಕ್ಕೆ ದಕ್ಷಿಣ ಭಾರತದ ರಾಜ್ಯಗಳು ಸ್ಪಂದಿಸಿದ್ದವು. ಕರ್ನಾಟಕದ ಕಾಂಗ್ರೆಸ್ ಸರ್ಕಾರವು 100 ಮನೆಗಳನ್ನು ನಿರ್ಮಾಣ ಮಾಡಿಕೊಡುವುದಾಗಿ ಹೇಳಿತ್ತು. ಆದರೆ, ಇದಕ್ಕೆ ಕೇರಳ ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎಂದು ಹೇಳಲಾಗಿದೆ. ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಈ ಸಂಬಂಧ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದರು.

ಕೇರಳದ ವಯನಾಡ್ ಜಿಲ್ಲೆಯಲ್ಲಿರುವ ಸಂತ್ರಸ್ತರಿಗೆ 100 ಮನೆಗಳನ್ನು ನಿರ್ಮಾಣ ಮಾಡಿಕೊಡುವುದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ಕೇರಳದಲ್ಲಿ ಭೂಮಿ ಖರೀದಿ ಮಾಡುವುದಕ್ಕೆ ಮುಂದಾಗಿರುವುದಾಗಿ ಹೇಳಿದೆ. ಆದರೆ, ಈ ವಿಚಾರಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಬಿಜೆಪಿ ತರಾಟೆಗೆ ತೆದುಕೊಂಡಿದೆ.
ಹಗರಣಗಳ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕರ್ನಾಟಕದಲ್ಲಿ ಸಂಪೂರ್ಣ ವಿಫಲವಾಗಿದೆ. ಕರ್ನಾಟಕದಲ್ಲಿ 350 ಕ್ಕೂ ಹೆಚ್ಚು ಶಿಶುಗಳ ಮರಣವಾಗಿದೆ. ಅಲ್ಲದೆ 40 ಜನ ತಾಯಂದಿರು ಸಾವನ್ನಪ್ಪಿದ್ದಾರೆ. ರೈತರು ವಕ್ಫ್ ಜಿಹಾದ್‌ನಿಂದ ಭೂಮಿಯನ್ನು ಕಳೆದುಕೊಳ್ಳುತ್ತಿದ್ದಾರೆ. ವೇತನ ಸಿಗದೆ ಆಂಬ್ಯುಲೆನ್ಸ್ ಚಾಲಕರು ಹಾಗೂ ಆಶಾ ಕಾರ್ಯಕರ್ತೆಯರು ಸಮಸ್ಯೆ ಎದುರಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಮೂಲಸೌಕರ್ಯಗಳು ಕುಸಿದಿದ್ದು, ರಾಜ್ಯವು ಹೀನಾಯ ಸ್ಥಿತಿಯಲ್ಲಿದೆ. ಆದರೂ, ತೆರಿಗೆದಾರರ ಹಣವನ್ನು ಕೇರಳದಲ್ಲಿ ಭೂಮಿ ಖರೀದಿಸಲು ಮತ್ತು ಮನೆಗಳನ್ನು ನಿರ್ಮಿಸಲು ಸರ್ಕಾರ ಮುಂದಾಗಿದೆ. "ಕಿರೀಟ ರಾಜಕುಮಾರ" (ರಾಹುಲ್ ಗಾಂಧಿ) ಅವರನ್ನು ಸಮಾಧಾನಪಡಿಸುವ ಪ್ರಯತ್ನ ಇದಾಗಿದೆ ಎಂದು ಬಿಜೆಪಿ ಹೇಳಿದೆ. ಅಲ್ಲದೆ ಕರ್ನಾಟಕವು ತನ್ನ ಜನರಿಗೆ ಆದ್ಯತೆ ನೀಡುವ ನಾಯಕರಿಗೆ ಅರ್ಹವಾಗಿದೆ. ಈ ರೀತಿ ಏಜೆಂಟ್‌ಗಳಿಗೆ ತಲೆಬಾಗುವವರಿಗೆ ಅಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದೆ.

ಕೇರಳದಲ್ಲಿ ಭೂಮಿ ಖರೀದಿ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಮುಂದಾಗಿರುವುದನ್ನು ಇಲ್ಲಿ ಬಿಜೆಪಿ ವಿರೋಧಿಸಿದ್ದಾರೆ. ಅತ್ತ ಕೇರಳ ಸರ್ಕಾರವೂ ಸಹ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಕೇರಳದ ಸಿ.ಎಂ ಪಿಣರಾಯಿ ಅವರ ವರ್ತನೆಗೆ ಅಲ್ಲಿನ ಕಾಂಗ್ರೆಸ್ ಸಹ ವಿರೋಧ ವ್ಯಕ್ತಪಡಿಸಿದೆ. ಒಟ್ಟಾರೆ ಈ ಬೆಳವಣಿಗೆ ಎರಡೂ ರಾಜ್ಯಗಳಲ್ಲಿ ವಾಕ್ಸಮರಕ್ಕೆ ಕಾರಣವಾಗಿದೆ.












Click it and Unblock the Notifications