5 States Assembly Elections: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಬಿಜೆಪಿ ಭರ್ಜರಿ ಸಿದ್ಧತೆ; ಮೋದಿ ನೇತೃತ್ವದಲ್ಲಿ ಸಭೆ!
ಹೊಸದಿಲ್ಲಿ, ಆಗಸ್ಟ್ 16: ಮುಂದಿನ ಲೋಕಸಭಾ ಚುನಾವಣೆಗೆ ಮುನ್ನ ಈ ವರ್ಷಾಂತ್ಯದಲ್ಲಿ ನಡೆಯುಲಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಸಿದ್ದತೆ ಕುರಿತು ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬುಧವಾರ ಸಂಜೆ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸಭೆಯನ್ನು ಕರೆದಿದೆ.
ಐದು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಸಿದ್ಧತೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಎಲ್ಲಾ 15 ಸಿಇಸಿ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಐದು ರಾಜ್ಯಗಳಲ್ಲಿ ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂನಲ್ಲಿ ಚುನಾವಣೆ ನಡೆಯಲಿದೆ. ಕೇಂದ್ರ ಚುನಾವಣಾ ಸಮಿತಿಯು ಬಿಜೆಪಿಯ ನಿರ್ಧಾರ ತೆಗೆದುಕೊಳ್ಳುವ ಚೌಕಟ್ಟಿನೊಳಗೆ ಪ್ರಮುಖ ಪಾತ್ರವನ್ನು ಹೊಂದಿದೆ. ಅಭ್ಯರ್ಥಿಗಳ ಅಂತಿಮಗೊಳಿಸುವಿಕೆ ಮತ್ತು ಕಾರ್ಯತಂತ್ರದ ಚುನಾವಣಾ ಯೋಜನೆಗಳನ್ನು ರೂಪಿಸುವ ಜವಾಬ್ದಾರಿಯನ್ನು ಹೊಂದಿದೆ. ಈ ವರ್ಷದ ಆರಂಭದಲ್ಲಿ ಕರ್ನಾಟಕ ಚುನಾವಣೆಯಲ್ಲಿ ಅನುಭವಿಸಿದ ಹಿನ್ನಡೆಯ ನಂತರ ಎಚ್ಚೆತ್ತುಕೊಂಡ ಬಿಜೆಪಿ ಐದು ರಾಜ್ಯಗಳ ಚುನಾವಣೆಗೆ ಸಕಲ ರೀತಿಯಲ್ಲು ಸಜ್ಜಾಗುತ್ತಿದೆ.
ಚುನಾವಣೆ ಹಿನ್ನೆಲೆ ಪಕ್ಷ ಸಿದ್ಧತೆಯನ್ನು ಚುರುಕುಗೊಳಿಸಿದೆ. ದುರ್ಬಲ ಸ್ಥಾನಗಳ ಕುರಿತು ಪಕ್ಷವನ್ನು ಬಲಪಡಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಸಭೆಯಲ್ಲಿ ಅಭ್ಯರ್ಥಿಗಳ ನಿರ್ಧಾರ ಮತ್ತು ಪ್ರಚಾರ ಕಾರ್ಯತಂತ್ರದ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ. ಅಲ್ಲದೇ ಪಕ್ಷವು ಹೆಚ್ಚು ಗಮನ ಹರಿಸಬೇಕಾದ ಸ್ಥಾನಗಳ ಪಟ್ಟಿಯನ್ನು ಸಿದ್ಧಪಡಿಸಿದೆ ಎಂದು ಹೇಳಲಾಗಿದೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಸಾಧಾರಣ ಸವಾಲನ್ನು ನಿರೀಕ್ಷಿಸುತ್ತಿರುವ ಬಿಜೆಪಿ ಐದು ರಾಜ್ಯಗಳಾದ ಮಿಜೋರಾಂ, ಛತ್ತೀಸ್‌ಗಢ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ತೆಲಂಗಾಣಗಳ ಮೇಲೆ ತನ್ನ ದೃಷ್ಟಿಯನ್ನು ಹೊಂದಿದೆ. ಮುಖ್ಯವಾಗಿ, ಛತ್ತೀಸ್‌ಗಢ, ರಾಜಸ್ಥಾನ ಮತ್ತು ತೆಲಂಗಾಣ ವಿರೋಧ ಪಕ್ಷಗಳ ಆಡಳಿತದಲ್ಲಿದೆ, ಈ ಬಾರಿಯ ಯಶಸ್ಸಿಗೆ ಬಿಜೆಪಿ ತನ್ನ ಪ್ರಯತ್ನಗಳನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ಮೋದಿ ಚರ್ಚಿಸಲಿದ್ದಾರೆ ಎನ್ನಲಾಗಿದೆ.
ಬಿಜೆಪಿಯೊಳಗಿನ ಮೂಲಗಳ ಪ್ರಕಾರ, ಪಕ್ಷದ ಅಸ್ತಿತ್ವ ಕಡಿಮೆ ಇರುವ ಕ್ಷೇತ್ರಗಳೇ ಸಭೆಯ ಕೇಂದ್ರ ಬಿಂದು. ಈ ಕಾರ್ಯತಂತ್ರವು ಈ ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳನ್ನು ಮೊದಲೇ ಗುರುತಿಸುವುದು ಹಾಗೂ ಅವರಿಗೆ ಸಮರ್ಪಕವಾಗಿ ತಯಾರಿ ನಡೆಸುವ ಕುರಿತು ಚರ್ಚೆಯಾಗಲಿದೆ. ಜೊತೆಗೆ ಕಾಂಗ್ರೆಸ್ ನೀಡಿದ ಭರವಸೆಗಳನ್ನು ಎದುರಿಸಲು ತಂತ್ರಗಳನ್ನು ರೂಪಿಸುವ ಕುರಿತು ಚರ್ಚೆಯಾಗಲಿದೆ.
ಇನ್ನೂ ಪಕ್ಷದ ರಾಜ್ಯ ನಾಯಕತ್ವವು ಕೇಂದ್ರ ಸರ್ಕಾರದ ಕಲ್ಯಾಣ ಯೋಜನೆಗಳು ಸೇರಿದಂತೆ ತಳಮಟ್ಟದಲ್ಲಿ ನಡೆಯುತ್ತಿರುವ ಕೆಲಸಗಳನ್ನು ಜನರಿಗೆ ತಲುಪಿಸಲು ಮಾಹಿತಿ ನೀಡಲಿದೆ ಎಂದು ಮೂಲಗಳು ತಿಳಿಸಿವೆ. ಸಾಮಾನ್ಯವಾಗಿ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ಮತ್ತು ಚುನಾವಣಾ ದಿನಾಂಕ ಘೋಷಣೆಯಾದ ನಂತರವೇ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸುತ್ತದೆ.












Click it and Unblock the Notifications