Kangana Ranaut : ಕೆಲ ವರ್ಷಗಳ ಹಿಂದೆ ಬಾಲಿವುಡ್ ಕ್ವೀನ್ ಆಗಿದ್ದ ಕಂಗನಾ ರನೌತ್ ಎಷ್ಟು ಕೋಟಿ ಆಸ್ತಿಯ ಒಡತಿ?
ಶಿಮ್ಲಾ, ಮೇ. 15: ಬಾಲಿವುಡ್ ನಟಿ, ಕ್ವೀನ್ ಎಂದು ಕರೆಸಿಕೊಳ್ಳುತ್ತಿದ್ದ ಕಂಗನಾ ರನೌತ್ ಸದ್ಯ ರಾಜಕಾರಣಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳ ಸೋಲುಗಳಿಂದ ಕಂಗೆಟ್ಟಿದ್ದ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದು, ತಮ್ಮ ತವರು ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದಾರೆ.
ಬಿಜೆಪಿ ಪರ ಭಾಷಣ ಮಾಡುತ್ತಿದ್ದ ಅವರು ಅಭ್ಯರ್ಥಿ ಅಭ್ಯರ್ಥಿಯಾಗಿಯೇ ಕಣಕ್ಕೆ ಇಳಿಯುತ್ತಿದ್ದಾರೆ. ಮೇ 14, 2024ರಂದು ನಾಮಪತ್ರ ಸಲ್ಲಿಸುವ ವೇಳೆ ನೀಡಿರುವ ಚುನಾವಣಾ ಅಫಿಡವಿಟ್‌ನಲ್ಲಿ 62.92 ಕೋಟಿ ಮೌಲ್ಯದ ಸ್ಥಿರಾಸ್ತಿ ಮತ್ತು 28.73 ಕೋಟಿ ಮೌಲ್ಯದ ಚರ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಇದರ ಜೊತೆಗೆ ಮರ್ಸಿಡಿಸ್ ಮೇಬ್ಯಾಕ್ ಸೇರಿದಂತೆ ಮೂರು ಐಷಾರಾಮಿ ಕಾರುಗಳನ್ನು ಹೊಂದಿರುವುದಾಗಿ ತಿಳಿಸಿದ್ದಾರೆ.

ರಾಜಕೀಯ ಕ್ಷೇತ್ರದಲ್ಲೂ ಯಶಸ್ಸು ಸಿಗುತ್ತೆ: ಕಂಗನಾ
ಚುನಾವಣೆಗೆ ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಕಂಗನ ರನೌತ್ ಅವರು "ಇಂದು ನಾನು ಮಂಡಿ ಲೋಕಸಭಾ ಸ್ಥಾನದಿಂದ ನಾಮಪತ್ರ ಸಲ್ಲಿಸಿದ್ದೇನೆ. ಮಂಡಿಯಿಂದ ಸ್ಪರ್ಧಿಸುವ ಅವಕಾಶ ಸಿಕ್ಕಿರುವುದು ಹೆಮ್ಮೆಯ ಸಂಗತಿ. ಬಾಲಿವುಡ್ ನಲ್ಲಿ ಯಶಸ್ಸು ಕಂಡಿರುವ ನನಗೆ ರಾಜಕೀಯ ಕ್ಷೇತ್ರದಲ್ಲೂ ಯಶಸ್ಸು ಸಿಗುತ್ತದೆ ಎಂಬ ಭರವಸೆ ನನಗಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತನ್ನ ಚುನಾವಣಾ ಅಫಿಡವಿಟ್‌ನಲ್ಲಿ, ಬಾಲಿವುಡ್ ನಟಿ 17.38 ಕೋಟಿಗೂ ಹೆಚ್ಚು ಹೊಣೆಗಾರಿಕೆಗಳನ್ನು ಘೋಷಿಸಿದ್ದಾರೆ. ಜೊತೆಗೆ ಕೈಯಲ್ಲಿ 2 ಲಕ್ಷ ರೂಪಾಯಿ ನಗದು ಮತ್ತು ಸುಮಾರು 1.35 ಕೋಟಿ ಬ್ಯಾಂಕ್ ಬ್ಯಾಲೆನ್ಸ್ ಇರುವುದಾಗಿ ತಿಳಿಸಿದ್ದಾರೆ. ತನ್ನ ಅಫಿಡವಿಟ್‌ನಲ್ಲಿ ತನಗೆ ಮುಂಬೈ, ಪಂಜಾಬ್ ಮತ್ತು ಮನಾಲಿಯಲ್ಲಿ ಆಸ್ತಿಗಳಿವೆ ಎಂದಿದ್ದಾರೆ.

ಕಂಗನಾ ಬಳಿ ಮೂರು ಐಷಾರಾಮಿ ಕಾರು
3.91 ಕೋಟಿ ರೂಪಾಯಿ ಮೌಲ್ಯದ ಮರ್ಸಿಡಿಸ್ ಮೇಬ್ಯಾಕ್ ಸೇರಿದಂತೆ ಮೂರು ಐಷಾರಾಮಿ ಕಾರುಗಳನ್ನು ಹೊಂದಿರುವುದಾಗಿ ಹೇಳಿದ್ದಾರೆ. 5 ಕೋಟಿ ಮೌಲ್ಯದ 6.70 ಕೆ.ಜಿ ಚಿನ್ನ, 5 ಲಕ್ಷ ರೂಪಾಯಿ ಮೌಲ್ಯದ 60 ಕೆ.ಜಿ ಬೆಳ್ಳಿ ಮತ್ತು ಅಂದಾಜು 3 ಕೋಟಿ ರೂಪಾಯಿ ಮೌಲ್ಯದ 14 ಕ್ಯಾರೆಟ್ ವಜ್ರವನ್ನು ಹೊಂದಿರುವುದಾಗಿ ಕಂಗನಾ ರನೌತ್ ಘೋಷಿಸಿದ್ದಾರೆ.
ತನ್ನ ಹೆಸರಿನಲ್ಲಿ ಯಾವುದೇ ಕೃಷಿ ಅಥವಾ ಕೃಷಿಯೇತರ ಭೂಮಿ ಆಸ್ತಿ ಇಲ್ಲ ಮತ್ತು 50 ಜೀವ ವಿಮಾ ನಿಗಮ (ಎಲ್‌ಐಸಿ) ಪಾಲಿಸಿಗಳನ್ನು ಹೊಂದಿರುವುದಾಗಿ ತಿಳಿಸಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಮೂರು ಮತ್ತು ನಾಲ್ಕು ಮಾನಹಾನಿ ಪ್ರಕರಣಗಳು ಸೇರಿದಂತೆ ಎಂಟು ಕ್ರಿಮಿನಲ್ ಪ್ರಕರಣಗಳು ಅವರ ವಿರುದ್ಧ ದಾಖಲಾಗಿವೆ ಎಂದು ಬಿಜೆಪಿ ಅಭ್ಯರ್ಥಿ ಕಂಗನಾ ರನೌತ್ ಘೋಷಿಸಿದ್ದಾರೆ.
ಜೂನ್ 1 ರಂದು ನಡೆಯಲಿರುವ ಹಿಮಾಚಲ ಪ್ರದೇಶದಲ್ಲಿ ನಾಲ್ಕು ಸ್ಥಾನಗಳಿಗೆ ಮತ್ತು ತೆರವಾದ ಆರು ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ. ಭಿನ್ನಮತೀಯ ಕಾಂಗ್ರೆಸ್ ಶಾಸಕರ ರಾಜೀನಾಮೆ ಮತ್ತು ಬದಲಾವಣೆಯ ನಂತರ ಆರು ವಿಧಾನಸಭಾ ಸ್ಥಾನಗಳಿಗೆ ಉಪ ಚುನಾವನೆ ನಡೆಯುತ್ತಿದೆ. 2019ರ ಚುನಾವಣೆಯಲ್ಲಿ ರಾಜ್ಯದ ನಾಲ್ಕೂ ಲೋಕಸಭಾ ಕ್ಷೇತ್ರಗಳನ್ನು ಗೆದ್ದುಕೊಂಡಿದ್ದ ಬಿಜೆಪಿ ಈ ಬಾರಿಯೂ ಎಲ್ಲಾ ಸ್ಥಾನಗಳನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿದೆ.












Click it and Unblock the Notifications