ಕೃಷ್ಣಮೃಗ ಬೇಟೆ ಪ್ರಕರಣ: ಐವರ ಖುಲಾಸೆ ಮರುಪ್ರಶ್ನಿಸಲು ನಿರ್ಧಾರ
ಬೆಂಗಳೂರು, ಏಪ್ರಿಲ್ 05: ನಟರ ವಿರುದ್ಧದ ಪ್ರಕರಣದಲ್ಲಿ ಹೋರಾಟ ನಡೆಸುತ್ತಿರುವ ರಾಜಸ್ಥಾನದ ಬಿಶ್ನೋಯಿ ಸಭಾ, ಉಳಿದ ಆರೋಪಿಗಳ ಖುಲಾಸೆಯನ್ನು ಪ್ರಶ್ನಿಸಲು ನಿರ್ಧರಿಸಿದೆ.
ಇತರೆ ಆರೋಪಿಗಳಾದ ಸೈಫ್ ಅಲಿ ಖಾನ್, ಸೊನಾಲಿ ಬೇಂದ್ರೆ, ನೀಲಂ ಕೊಠಾರಿ ಮತ್ತು ಟಬು ಅವರನ್ನು ನಿರ್ದೋಷಿ ಎಂದು ನೀಡಿರುವ ತೀರ್ಪಿನ ಬಗ್ಗೆ ಸಭಾ ಅಸಮಾಧಾನ ವ್ಯಕ್ತಪಡಿಸಿದೆ.
ಮತ್ತೊಬ್ಬ ಆರೋಪಿ, ಸ್ಥಳೀಯ ಪ್ರವಾಸಿ ಮಾರ್ಗದರ್ಶಿ ದುಷ್ಯಂತ್ ಸಿಂಗ್ ಅವರನ್ನು ಸಹ ದೋಷಮುಕ್ತಗೊಳಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಐವರ ಖುಲಾಸೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಾಗಿ ಸಭಾದ ಸದಸ್ಯರೊಬ್ಬರು ತಿಳಿಸಿದ್ದಾರೆ. ತೀರ್ಪಿನ ವಿರುದ್ಧ ಅರ್ಜಿ ಸಲ್ಲಿಸುವಂತೆ ಅರಣ್ಯ ಇಲಾಖೆಯನ್ನು ಸಂಪರ್ಕಿಸಲಾಗುವುದು ಮತ್ತು ಈ ಸಂಬಂಧ ಸರ್ಕಾರಕ್ಕೆ ಪ್ರತಿನಿಧಿಯೊಬ್ಬರನ್ನು ಕಳುಹಿಸಲಾಗುವುದು ಎಂದು ಅವರು ಹೇಳಿದ್ದಾರೆ.
ವನ್ಯಜೀವಿ ಕಾರ್ಯಕರ್ತರ ಸಂಘಟನೆ ಬಿಶ್ನೋಯಿ ಟೈಗರ್ಸ್ ವನ್ಯ ಏವಂ ಪರ್ಯಾವರಣ್ ಸಂಸ್ಥಾ, ತೀರ್ಪಿನ ವಿರುದ್ಧ ಹೋರಾಟಕ್ಕೆ ಮುಂದಾಗಲು ನಿರ್ಧರಿಸಿದೆ, ತೀರ್ಪಿನಲ್ಲಿನ ಅಂಶಗಳನ್ನು ಪರಿಶೀಲಿಸಲಾಗುವುದು. ತಕ್ಷಣವೇ ಮೇಲ್ಮನವಿ ಸಲ್ಲಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದೆ.
ಸಲ್ಮಾನ್ ಹೊರತುಪಡಿಸಿ ಉಳಿದ ಐವರು ಆರೋಪಿಗಳನ್ನು ಪ್ರಬಲ ಸಾಕ್ಷ್ಯಾಧಾರಗಳ ಕೊರತೆಯಿಂದ ನಿರ್ದೋಷಿಗಳು ಎಂದು ಪರಿಗಣಿಸಲಾಗಿದೆ ಎಂಬುದಾಗಿ ತೀರ್ಪಿನಲ್ಲಿ ಹೇಳಲಾಗಿದೆ.












Click it and Unblock the Notifications