ಅಯೋಧ್ಯೆ ತೀರ್ಪು: ಸುಪ್ರೀಂ ಕೋರ್ಟ್ ನ ಐವರು ನ್ಯಾಯಮೂರ್ತಿಗಳಿಗೂ 'Z' ಭದ್ರತೆ
ನವದೆಹಲಿ, ನವೆಂಬರ್ 11: ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಪಂಚಸದಸ್ಯ ಸಾಂವಿಧಾನಿಕ ಪೀಠದ ಐವರು ನ್ಯಾಯಮೂರ್ತಿಗಳ ಭದ್ರತೆಯನ್ನೂ 'Z' ಕ್ಯಾಟಗೆರಿಗೆ ಹೆಚ್ಚಿಸಲಾಗಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾ. ಎಸ್ ಎ ಬೋಬ್ಡೆ, ನ್ಯಾ. ಡಿವೈ ಚಂದ್ರಚೂಡ, ನ್ಯಾ. ಅಶೋಕ್ ಭೂಷಣ್, ನ್ಯಾ. ಎಸ್. ಅಬ್ದುಲ್ ನಜೀರ್ ಅವರಿರುವ ಪಂಚಸದಸ್ಯ ಪೀಠ ತೀರ್ಪನ್ನು ನೀಡಲಿದ್ದು, ಅತೀ ಸೂಕ್ಷ್ಮ ಮತ್ತು ಕೋಮು ವಿಷಯವಾಗಿರುವ ಕಾರಣ ಎಲ್ಲಾ ನ್ಯಾಯಮೂರ್ತಿಗಳಿಗೂ ವಿಶೇಷ ಭದ್ರತೆ ನೀಡಲಾಗಿದೆ.

ನವೆಂಬರ್ 09 ಶನಿವಾರದಂದು ಈ ಪೀಠ ಐತಿಹಾಸಿಕ ತೀರ್ಪು ನೀಡಲಿದ್ದು, ನವೆಂಬರ್ 17 ರಂದು ನಿವೃತ್ತರಾಗುವ ಮುನ್ನ ಸಿಜೆಐ ರಂಜನ್ ಗೊಗೊಯ್ ಅವರು ನೀಡಲಿರುವ ಐತಿಹಾಸಿಕ ತೀರ್ಪು ಇದಾಗಿರಲಿದೆ.
1992 ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸಮಯದಲ್ಲಿ ಒಟ್ಟು 67 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಅದರಲ್ಲಿ ಕೇವಲ 2.7 ಎಕರೆ ಭೂಮಿಯಷ್ಟೇ ವಿವಾದಾತ್ಮಕ ಸ್ಥಳವಾಗಿದ್ದು, ಉಳಿದವು ವಿವಾದಮುಕ್ತವಾಗಿವೆ. ಆದ್ದರಿಂದ ಈ ಭೂಮಿಯ ವಾರಸುದಾರರಾದ ರಾಮ ಜನ್ಮಭೂಮಿ ನ್ಯಾಸ್ ಟ್ರಸ್ಟ್ ಗೆ ಅದನ್ನು ಹಿಂದಿರುಗಿಸಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಿತ್ತು.
2.77 ಎಕರೆ ವಿಸ್ತೀರ್ಣದ ಭೂಮಿಯನ್ನು ಸದ್ಯಕ್ಕೆ ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾರ ಹಾಗು ರಾಮ್ ಲಲ್ಲಾ ಸಮಾನಾಗಿ ಹೊಂದಿವೆ. 2010ರ ಅಲಹಾಬಾದ್ ಹೈಕೋರ್ಟ್ ಆದೇಶದ ವಿರುದ್ಧ 14ಕ್ಕೂ ಅಧಿಕ ಮೇಲ್ಮನವಿಯನ್ನು ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಲಾಗಿತ್ತು. ಈ ಅರ್ಜಿ ವಿಚಾರಣೆ ಅಂತಿಮ ಹಂತ ತಲುಪಿದ್ದು, ತೀರ್ಪು ಹೊರಬೀಳಲಿದ್ದು ಈ ಐವರು ನ್ಯಾಯಧೀಶರು ತೀರ್ಪು ನೀಡಲಿದ್ದಾರೆ.












Click it and Unblock the Notifications