ಡಿಸಿಎಂ ಆದ ಬೆನ್ನಲ್ಲೇ ಅಜಿತ್ ಪವಾರ್ ಬೇನಾಮಿ ಕೇಸ್ ಕ್ಲೋಸ್
ಮಹಾರಾಷ್ಟ್ರದಲ್ಲಿ ಮಹಾಯುತಿ ಒಕ್ಕೂಟದ ನೂತನ ಸರ್ಕಾರ ರಚನೆಯಾಗಿದೆ. ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು ಮಹಾರಾಷ್ಟ್ರ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರ ಬೆನ್ನಲ್ಲೇ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಈ ಹಿಂದೆ ತಮ್ಮ ಮೇಲಿದ್ದ ಬೇನಾಮಿ ಆಸ್ತಿ ಪ್ರಕರಣದಿಂದ ಅಜಿತ್ ಪವಾರ್ ಮುಕ್ತರಾಗಿದ್ದಾರೆ.
ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಒಂದು ದಿನದ ನಂತರವೇ ಈ ತೀರ್ಪು ಬಂದಿರುವುದು ಅಚ್ಚರಿ ಮೂಡಿಸಿದೆ. ಈ ಬಗ್ಗೆ ಸದ್ಯ ದೇಶದೆಲ್ಲೆಡೆ ಚರ್ಚೆಗಳು ಕೂಡ ಜೋರಾಗಿ ನಡೆಯುತ್ತಿವೆ. ಆದಾಯ ತೆರಿಗೆ ಇಲಾಖೆಯು 2021ರಲ್ಲಿ ವಶಪಡಿಸಿಕೊಂಡಿದ್ದ 1,000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ತೆರವುಗೊಳಿಸಿದೆ.

ಅಜಿತ್ ಪವಾರ್ ವಿರುದ್ಧ ಬೇನಾಮಿ ಆಸ್ತಿ ಕೇಸ್ ದಾಖಲಾಗಿತ್ತು. ಇದರಲ್ಲಿ ಬರೋಬ್ಬರಿ 1,000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡಿತ್ತು. ಬಳಿಕ ಬೇನಾಮಿ ಆಸ್ತಿ ವಹಿವಾಟು ತಡೆ ಮೇಲ್ಮನವಿ ಸಲ್ಲಿಸಿದ್ದು, ನ್ಯಾಯಮಂಡಳಿಯು ಅಜಿತ್ ಪವಾರ್ ಮತ್ತು ಅವರ ಕುಟುಂಬದ ಮೇಲಿದ್ದ ಬೇನಾಮಿ ಆಸ್ತಿ ಮಾಲೀಕತ್ವದ ಆರೋಪವನ್ನು ವಜಾಗೊಳಿಸಿದೆ.
2021ರಲ್ಲಿ ಆದಾಯ ತೆರಿಗೆ ಇಲಾಖೆಯು ಅಜಿತ್ ಪವಾರ್ ಮತ್ತು ಅವರ ಕುಟುಂಬಕ್ಕೆ ಸಂಬಂಧಿಸಿದ ಹಲವು ಸ್ಥಳಗಳಲ್ಲಿ ದಾಳಿ ಮಾಡಿತ್ತು. ಅವರಿಗೆ ಸೇರಿದ್ದ ಸತಾರಾದಲ್ಲಿನ ಸಕ್ಕರೆ ಕಾರ್ಖಾನೆ, ದೆಹಲಿಯ ಫ್ಲ್ಯಾಟ್, ಗೋವಾದಲ್ಲಿದ್ದ ರೆಸಾರ್ಟ್ ಸೇರಿದಂತೆ ಮಹಾರಾಷ್ಟ್ರದಲ್ಲಿದ್ದ ವಿವಿಧ ಆಸ್ತಿಗಳನ್ನು ವಶಕ್ಕೆ ಪಡೆದಿತ್ತು.

ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ಸಂದರ್ಭದಲ್ಲಿ ಅಜಿತ್ ಪವಾರ್ ಅವರು ಅವಿಭಜಿತ ಎನ್‌ಸಿಪಿಯ ಭಾಗವಾಗಿದ್ದರು. 2022ರಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಅಜಿತ್ ಪವಾರ್ ಅವರು ಡಿಸಿಎಂ ಆಗಿಯೇ ಇದ್ದರು. ಬಳಿಕ ಸರ್ಕಾರ ಪತನವಾಗಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದರು. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮಹಾಯುತಿ ಸರ್ಕಾರ ಮರುರಚನೆಯಾಗಿದ್ದು, ದೇವೇಂದ್ರ ಫಡ್ನವೀಸ್ ಸಿಎಂ ಆಗಿದ್ದಾರೆ. ಅಜಿತ್ ಪವಾರ್ ಹಾಗೂ ಏಕನಾಥ್ ಶಿಂಧೆ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಇನ್ನು ಅಜಿತ್ ಪವಾರ್ ಅವರ ಬೇನಾಮಿ ಕೇಸ್‌ನಲ್ಲಿ ಸಾಕಷ್ಟು ಸಾಕ್ಷ್ಯಾಧಾರಗಳ ಕೊರತೆ ಇದೆ ಎಂದು ನ್ಯಾಯಪೀಠವು ಆರೋಪಗಳನ್ನು ತಿರಸ್ಕರಿಸಿದೆ. ಬೇನಾಮಿ ಆಸ್ತಿ ಮತ್ತು ಪವಾರ್ ಕುಟುಂಬದ ನಡುವೆ ಹಣಕಾಸು ಮಾರ್ಗಗಳಿಗೆ ಬೇನಾಮಿ ಆಸ್ತಿಗಳನ್ನು ಬಳಸಲಾಗಿದೆ ಎಂದು ಸಾಬೀತುಪಡಿಸಲು ಐಟಿ ಇಲಾಖೆಯು ವಿಫಲವಾಗಿದೆ ಎಂದು ಹೇಳಿದೆ. ಇದರಿಂದ ಐಟಿ ಇಲಾಖೆ ವಶಪಡಿಸಿಕೊಂಡಿದ್ದ ಆಸ್ತಿಗಳನ್ನು ಅಜಿತ್ ಪವಾರ್ ಅವರ ಕುಟುಂಬಕ್ಕೆ ಹಿಂತಿರುಗಿಸುವಂತೆ ಹೇಳಿದೆ ಎಂದು ವರದಿಯಾಗಿದೆ. ಇನ್ನು ಡಿಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಮರುದಿನವೇ ಅಜಿತ್ ಪವಾರ್ ಆರೋಪಮುಕ್ತವಾಗಿದ್ದಾರೆ ಎಂಬ ವಿಚಾರದ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿವೆ.












Click it and Unblock the Notifications