ಭಾರತದಲ್ಲಿ ಪ್ರಾದೇಶಿಕ ವಿಮಾನ ತಯಾರಿಕೆ: ಅದಾನಿ–ಎಂಬ್ರೇರ್ ನಡುವೆ ಮಹತ್ವದ ಒಪ್ಪಂದ
ನವದೆಹಲಿ: ಭಾರತದ ವಿಮಾನೋದ್ಯಮ ಕ್ಷೇತ್ರಕ್ಕೆ ದೊಡ್ಡ ಉತ್ತೇಜನ ನೀಡುವ ಬೆಳವಣಿಗೆಯಲ್ಲಿ, ಅದಾನಿ ಗ್ರೂಪ್ ಮತ್ತು ಬ್ರೆಜಿಲ್‌ನ ಪ್ರಮುಖ ವಿಮಾನ ತಯಾರಕ ಸಂಸ್ಥೆ ಎಂಬ್ರೇರ್ (Embraer) ಭಾರತದಲ್ಲಿ ಪ್ರಾದೇಶಿಕ ವಿಮಾನ ತಯಾರಿಕಾ ಘಟಕ ಸ್ಥಾಪನೆಗೆ ಕೈಜೋಡಿಸಿವೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಕಚೇರಿಯಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ, ಅದಾನಿ ಡಿಫೆನ್ಸ್ ಆಂಡ್ ಏರೋಸ್ಪೇಸ್ ಮತ್ತು ಎಂಬ್ರೇರ್ ನಡುವೆ ಈ ಸಂಬಂಧ ಸಹಕಾರದ ಒಪ್ಪಂದ ಪತ್ರಕ್ಕೆ (ಎಂಒಯು) ಸಹಿ ಹಾಕಲಾಯಿತು.
ಈ ಸಹಭಾಗಿತ್ವದಡಿ ಭಾರತದಲ್ಲೇ ಎಂಬ್ರೇರ್‌ನ ಪ್ರಾದೇಶಿಕ ಪ್ರಯಾಣಿಕ ವಿಮಾನಗಳಿಗಾಗಿ ಫೈನಲ್ ಅಸೆಂಬ್ಲಿ ಲೈನ್ (ಎಫ್‌ಎಎಲ್) ಸ್ಥಾಪಿಸಲಾಗುವುದು. 150 ಆಸನಗಳವರೆಗಿನ ವಾಣಿಜ್ಯ ಜೆಟ್ ವಿಮಾನಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿರುವ ಎಂಬ್ರೇರ್, ಈ ಒಡಂಬಡಿಕೆಯ ಮೂಲಕ ಮೊದಲ ಬಾರಿಗೆ ಭಾರತದಲ್ಲಿ ವಿಮಾನ ನಿರ್ಮಾಣ ಕ್ಷೇತ್ರಕ್ಕೆ ನೇರ ಪ್ರವೇಶ ಪಡೆಯಲಿದೆ.

ಅದಾನಿ ಡಿಫೆನ್ಸ್ & ಏರೋಸ್ಪೇಸ್ ನಿರ್ದೇಶಕ ಜೀತ್ ಅದಾನಿ ಮಾತನಾಡಿ, "ಈ ಸಹಕಾರದಿಂದ ಭಾರತದಲ್ಲಿ ಪ್ರಾದೇಶಿಕ ವಿಮಾನ ತಯಾರಿಕಾ ಘಟಕ ಸ್ಥಾಪನೆಯಾಗಲಿದೆ. ಇದು 'ಮೇಕ್ ಇನ್ ಇಂಡಿಯಾ' ಮತ್ತು 'ಆತ್ಮನಿರ್ಭರ ಭಾರತ' ಗುರಿಗಳಿಗೆ ಮಹತ್ವದ ಹೆಜ್ಜೆಯಾಗಿದೆ" ಎಂದು ಹೇಳಿದರು. ಘಟಕ ಸ್ಥಾಪನೆಗೆ ಸಂಬಂಧಿಸಿದಂತೆ ಎರಡು ಸ್ಥಳಗಳನ್ನು ಈಗಾಗಲೇ ಪರಿಶೀಲಿಸಲಾಗುತ್ತಿದ್ದು, ಮುಂದಿನ ಕೆಲವು ತಿಂಗಳಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ನಾಗರಿಕ ವಿಮಾನಯಾನ ಕಾರ್ಯದರ್ಶಿ ಸಮೀರ್ ಕುಮಾರ್ ಸಿನ್ಹಾ, ಈ ಸಹಕಾರ ಕೇವಲ ವಿಮಾನಗಳನ್ನು ಜೋಡಿಸುವ ಮಟ್ಟಕ್ಕೆ ಸೀಮಿತವಲ್ಲ ಎಂದು ಹೇಳಿ, ತಂತ್ರಜ್ಞಾನ ವರ್ಗಾವಣೆ, ಕೌಶಲ್ಯಾಭಿವೃದ್ಧಿ, ಬಲಿಷ್ಠ ಸರಪಳಿ ವ್ಯವಸ್ಥೆ ನಿರ್ಮಾಣ ಹಾಗೂ ಭಾರತವನ್ನು ವಿಶ್ವಾಸಾರ್ಹ ವಿಮಾನ ತಯಾರಿಕಾ ಕೇಂದ್ರವನ್ನಾಗಿ ರೂಪಿಸುವ ಗುರಿ ಇದರಲ್ಲಿ ಅಡಕವಾಗಿದೆ ಎಂದರು.
"ಇದು ಭಾರತದಲ್ಲಿ ಹೂಡಿಕೆ ಮಾಡಲು ಸರಿಯಾದ ಸಮಯ. ಟಯರ್-2 ಮತ್ತು ಟಯರ್-3 ನಗರಗಳಿಗೆ ವಿಮಾನ ಸಂಪರ್ಕ ವಿಸ್ತರಿಸಲು ಪ್ರಾದೇಶಿಕ ವಿಮಾನಗಳ ಅಗತ್ಯ ಇಂದಿಗಿಂತಲೂ ಹೆಚ್ಚಾಗಿದೆ. ಈ ಸಹಕಾರವು ದಕ್ಷಿಣ ಏಷ್ಯಾದ ದೊಡ್ಡ ಮಾರುಕಟ್ಟೆಗೆ ಸೇವೆ ನೀಡುವ ಸಾಮರ್ಥ್ಯವನ್ನು ಹೊಂದಿದೆ" ಎಂದು ನಾಗರಿಕ ವಿಮಾನಯಾನ ಸಚಿವ ಕೆ.ರಾಮ್‌ಮೋಹನ್ ನಾಯ್ಡು ಹೇಳಿದರು.
ಈ ಒಡಂಬಡಿಕೆ ಎಂಬ್ರೇರ್‌ಗೂ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅವಕಾಶಗಳನ್ನು ತೆರೆದಿದೆ. ಕಂಪನಿಯ ಪ್ರಕಾರ, ಮುಂದಿನ 20 ವರ್ಷಗಳಲ್ಲಿ ಭಾರತಕ್ಕೆ 80ರಿಂದ 146 ಆಸನ ಸಾಮರ್ಥ್ಯದ ಕನಿಷ್ಠ 500 ವಿಮಾನಗಳ ಅಗತ್ಯವಿರಲಿದೆ. ಈಗಾಗಲೇ 2005ರಿಂದ ಎಂಬ್ರೇರ್‌ನ ಇ-ಜೆಟ್‌ಗಳು ಭಾರತದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಭಾರತೀಯ ವಾಯುಪಡೆ, ಸರ್ಕಾರಿ ಸಂಸ್ಥೆಗಳು, ಬಿಸಿನೆಸ್ ಜೆಟ್ ಆಪರೇಟರ್‌ಗಳು ಮತ್ತು ಸ್ಟಾರ್ ಏರ್ ಸೇರಿದಂತೆ ವಾಣಿಜ್ಯ ವಿಮಾನ ಸಂಸ್ಥೆಗಳು ಸೇರಿದಂತೆ ಸುಮಾರು 50 ವಿಮಾನಗಳು ಈಗಾಗಲೇ ಸೇವೆಯಲ್ಲಿ ಇವೆ ಎಂದು ಜನವರಿ 21 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.
#WATCH | Delhi | Jeet Adani, Director, Adani Airport Holdings Limited, says, "It is with immense pride that I announce that Adani Defence is today entering into a landmark partnership with Embraer, one of the world's foremost aircraft manufacturers. Together, we will establish a… pic.twitter.com/7HYKfIuDWb
— ANI (@ANI) January 27, 2026
ಅದಾನಿ-ಎಂಬ್ರೇರ್ ಸಹಕಾರವು ಭಾರತೀಯ ವಿಮಾನೋದ್ಯಮ ಕ್ಷೇತ್ರದಲ್ಲಿ ತಯಾರಿಕಾ ಸಾಮರ್ಥ್ಯ ವಿಸ್ತರಣೆ, ಪ್ರಾದೇಶಿಕ ಸಂಪರ್ಕ ಬಲವರ್ಧನೆ ಮತ್ತು ಆತ್ಮನಿರ್ಭರತೆಯತ್ತ ದೇಶವನ್ನು ಮತ್ತೊಂದು ಹೆಜ್ಜೆ ಮುಂದಕ್ಕೆ ಕರೆದೊಯ್ಯುವ ಮಹತ್ವದ ಬೆಳವಣಿಗೆಯಾಗಿ ಪರಿಣಮಿಸಿದೆ.












Click it and Unblock the Notifications