ಗೋವುಗಳಿಗೂ ಆಧಾರ್, ಕೇಂದ್ರದಿಂದ ಸುಪ್ರೀಂಗೆ ಪ್ರಸ್ತಾವನೆ
ದೇಶದ ಗಡಿಭಾಗದಲ್ಲಿ ನಡೆಯುವ ಗೋವುಗಳ ಕಳ್ಳಸಾಗಾಣಿಕೆ, ಮಾರಾಟವನ್ನು ತಪ್ಪಿಸಲು ಗೋವುಗಳಿಗೂ ಆಧಾರ್ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ಪ್ರಸ್ತಾವನೆ ಸಲ್ಲಿಸಿದೆ.
ನವದೆಹಲಿ, ಏಪ್ರಿಲ್ 24 : ಬಹುತೇಕ ಎಲ್ಲಾ ಸರ್ಕಾರಿ ಸೌಲಭ್ಯಗಳಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದ ಬಳಿಕ ಇದೀಗ ಗೋವುಗಳಿಗೂ ಆಧಾರ್ ಕಡ್ಡಾಯ ಮಾಡಲು ಕೇಂದ್ರ ಸರ್ಕಾರ ಹೊರಟಿದೆ.
ಗೋವುಗಳ ರಕ್ಷಣೆ ಮತ್ತು ಅಕ್ರಮ ಸಾಗಾಟವನ್ನು ತಪ್ಪಿಸಲು ಆಧಾರ್ ನಂತಹ ಗುರುತು ಪತ್ರವನ್ನು ನೀಡುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್ ಗೆ ಪ್ರಸ್ತಾವನೆ ಸಲ್ಲಿಸಿದೆ.

ಆಧಾರ್ ನಿಂದಾಗಿ ಭಾರತ- ಬಾಂಗ್ಲಾದೇಶದ ಗಡಿಭಾಗದಲ್ಲಿ ನಡೆಯುವ ಗೋವುಗಳ ಕಳ್ಳಸಾಗಾಣಿಕೆ, ಮಾರಾಟವನ್ನು ತಪ್ಪಿಸಬಹುದು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ವರದಿಯಲ್ಲಿ ಹೇಳಿದೆ.
ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗುವುದು. ಈ ಸಮಿತಿ ಗೋರಕ್ಷಣೆ ಬಗ್ಗೆ ಕೆಲವು ಶಿಫಾರಸ್ಸುಗಳನ್ನು ನೀಡಲಿದೆ ಎಂದು ಕೇಂದ್ರ ಸರ್ಕಾರವು ನ್ಯಾಯಾಲಯಕ್ಕೆ ತಿಳಿಸಿದೆ.
ಆಯಾ ಗೋವುಗಳ ವಯಸ್ಸು, ತಳಿ, ಲಿಂಗ, ಸ್ಥಳ, ಎತ್ತರ, ದೇಹ, ಬಣ್ಣ, ಕೊಂಬುವಿನತಹ ಇತರೆ ಮಾಹಿತಿ ಈ ಆಧಾರ್ ಕಾರ್ಡ್ ನಲ್ಲಿ ಇರಲಿದೆ.
ಇದೇ ವೇಳೆ ಪ್ರತಿಯೊಂದು ಜಿಲ್ಲೆಯಲ್ಲೂ ಕನಿಷ್ಟ 500 ಹಸುಗಳು ಉಳಿದಿಕೊಳ್ಳುವ ಸಂಬಂಧ ವಸತಿ ನಿರ್ಮಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ ಎನ್ನುವ ಅಂಶ ವರದಿಯಲ್ಲಿದೆ.
ಇದೇ ವೇಳೆ ಕೇಂದ್ರ ಸರ್ಕಾರ ತೊಂದರೆಗೀಡಾದ ರೈತರಿಗೂ ನೂತನ ಯೋಜನೆಯನ್ನು ಆರಂಭಿಸುವುದಾಗಿ ತಿಳಿಸಿದೆ. ದನಗಳಿಗೆ ಆಧಾರ್ ನೀಡಬೇಕೆಂಬ ಪ್ರಸ್ತಾಪ ಕಳೆದ ವರ್ಷವೇ ಚರ್ಚೆಯಲ್ಲಿತ್ತು.
ಆದರೆ ಈ ಪ್ರಸ್ತಾಪಕ್ಕೆ ಕೆಲ ವಿರೋಧಗಳು ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಅನುಷ್ಠಾನಗೊಂಡಿರಲಿಲ್ಲ. ಆದರೆ ಈಗ ಕೇಂದ್ರ ಸರ್ಕಾರ ಹಸುಗಳಿಗೆ ಆಧಾರ್ ನೀಡುವ ಬಗ್ಗೆ ಸುಪ್ರೀಂಗೆ ವರದಿ ಸಲ್ಲಿಸಿದೆ.












Click it and Unblock the Notifications