ಪದ್ಮ ಪ್ರಶಸ್ತಿಗೆ ರಾಮ್ ರಹೀಮ್ ಹೆಸರು ಶಿಫಾರಸ್ಸಾಗಿತ್ತು!
ನವದೆಹಲಿ, ಸೆಪ್ಟೆಂಬರ್ 01 : ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ರಾಮ್ ರಹೀಮ್ ಸಿಂಗ್‌ಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕು ಎಂದು 4,200 ಅರ್ಜಿಗಳು ಬಂದಿದ್ದವು. 2017ರಲ್ಲಿ ರಾಮ್ ರಹೀಮ್‌ಗೆ ಪದ್ಮಶ್ರೀ ಪ್ರಶಸ್ತಿ ಕೊಡಿಸಲು ಪ್ರಯತ್ನ ನಡೆದಿತ್ತು.
ಕೇಂದ್ರ ಗೃಹ ಇಲಾಖೆಯ ವೆಬ್ ಸೈಟ್‌ನಲ್ಲಿ ಈ ಕುರಿತು ಮಾಹಿತಿ ಇದೆ. ತಮ್ಮನ್ನು ತಾವು ದೇವ ಮಾನವರು ಎಂದು ಘೋಷಿಸಿಕೊಂಡ ಐವರು ಸೇರಿ, 4 ಸಾವಿರ ಜನರು ರಾಮ್ ರಹೀಮ್ ಸಿಂಗ್‌ಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು.

2017ರಲ್ಲಿ ಮಾತ್ರ ಪದ್ಮಶ್ರೀ ಪ್ರಶಸ್ತಿ ನೀಡಬೇಕು ಎಂದು ಅರ್ಜಿಗಳು ಪ್ರವಾಹದಂತೆ ಹರಿದುಬಂದಿದ್ದವು. ಆದರೆ, 2016, 2015ರಲ್ಲಿ ಯಾವುದೇ ಅರ್ಜಿಗಳು ಬಂದಿರಲಿಲ್ಲ. ಕೇಂದ್ರಕ್ಕೆ ಬಂದ ಎಲ್ಲಾ ಅರ್ಜಿಗಳು ಹರ್ಯಾಣದ ಡೇರಾ ಸಚ್ಚಾ ಸೌಧದ ವಿಳಾಸ ಹೊಂದ್ದಿದ್ದವು.
ಕೇಂದ್ರ ಸರ್ಕಾರ ನೀಡುವ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ಪದ್ಮ ವಿಭೂಷಣ, ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗೆ ಯಾರ ಹೆಸರನ್ನು ಬೇಕಾದರೂ ಶಿಫಾರಸು ಮಾಡಬಹುದು. ರಾಮ್ ರಹೀಮ್ ಸಿಂಗ್ ತನ್ನ ಹೆಸರನ್ನೇ ಶಿಫಾರಸು ಮಾಡಿ ಮೂರು ಅರ್ಜಿಗಳನ್ನು ಸಲ್ಲಿಸಿದ್ದ ಎಂಬುದು ಈಗ ಬಯಲಾಗಿದೆ.
ಈ ಪ್ರಶಸ್ತಿಗಳನ್ನು ಕಲೆ, ಸಾಹಿತ್ಯ, ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಮಾಜ ಸೇವೆ, ವಿಜ್ಞಾನ, ಇಂಜಿನಿಯರಿಂಗ್ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುತ್ತದೆ. ಆದರೆ, ರಾಮ್ ರಹೀಮ್ ಸಿಂಗ್ ಯಾವ ಕ್ಷೇತ್ರದಲ್ಲಿ ಸೇವೆ ಮಾಡಿದ್ದಾರೆ ಎಂದು ಅರ್ಜಿ ಸಲ್ಲಿಸಿದ್ದರು ಎಂಬುದು ಇನ್ನು ತಿಳಿದುಬಂದಿಲ್ಲ.
2002ರಲ್ಲಿ ಡೇರಾ ಸಚ್ಚಾ ಸೌಧದಲ್ಲಿ ಇಬ್ಬರು ಸಾಧ್ವಿಗಳ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ರಾಮ್ ರಹೀಮ್ ಸಿಂಗ್ ದೋಷಿಯಾಗಿದ್ದು, ಸಿಬಿಐ ವಿಶೇಷ ಕೋರ್ಟ್ 20 ವರ್ಷಗಳ ಜೈಲು ಶಿಕ್ಷೆ ಮತ್ತು 30 ಲಕ್ಷ ರೂ. ದಂಡ ವಿಧಿಸಿದೆ. ಸದ್ಯ, ಸಿಂಗ್ ಜೈಲುವಾಸಿಯಾಗಿದ್ದಾರೆ.












Click it and Unblock the Notifications