ಕಾಂಗ್ರೆಸ್‌ನವರು ನಿಜವಾದ ಹಿಂದೂಗಳು- ಸಚಿವ ರಾಮಲಿಂಗಾರೆಡ್ಡಿ
ಹುಬ್ಬಳ್ಳಿ, ಜನವರಿ 08: ಬಿಜೆಪಿಯವರು ಚುನಾವಣೆಗಾಗಿ ಶ್ರೀ ರಾಮನನ್ನು ಬಳಸಿಕೊಳ್ಳುತ್ತಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಶ್ರದ್ಧೆ, ಭಕ್ತಿಯಿಂದ ರಾಮನನ್ನು ಪೂಜೆ ಮಾಡುತ್ತೇವೆ. ಕಾಂಗ್ರೆಸ್‌ನವರು ನಿಜವಾದ ಹಿಂದೂಗಳು. ನಾವು ಯಾವತ್ತೂ ಕೂಡ ರಾಜಕಾರಣಕ್ಕೆ ಹಿಂದುತ್ವ ಮತ್ತು ಶ್ರೀರಾಮನನ್ನು ತೆಗೆದುಕೊಂಡು ಬಂದಿಲ್ಲ. ದೇಶದಲ್ಲಿ ಲಕ್ಷಾಂತರ ರಾಮನ ದೇವಸ್ಥಾನಗಳಿವೆ. ಬಿಜೆಪಿಯವರು ಮತಕ್ಕಾಗಿ ಶ್ರೀರಾಮನನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ನವರು ಯಾವತ್ತಿಗೂ ದೇವರನ್ನು ಹಾಗೂ ಹಿಂದುತ್ವವನ್ನು ರಾಜಕಾರಣದಲ್ಲಿ ಬಳಸಿಕೊಂಡಿಲ್ಲ. ಬಿಜೆಪಿಯವರಿಗೆ ಸದ್ಯ ಏನೂ ಬಂಡವಾಳ ಇಲ್ಲ. ಹೀಗಾಗಿ ಧರ್ಮವನ್ನು ತರುತ್ತಾರೆ. ಶ್ರೀ ರಾಮನನ್ನು ತರುತ್ತಾರೆ. ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಈ ವಿಚಾರದಲ್ಲಿ ಗಿಮಿಕ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಯವರು ರಾಜಕಾರಣಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ಅದಕ್ಕೆ ನಾವು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಬಿಜೆಪಿಯವರು ಪುಕ್ಸಟ್ಟೆಯಾಗಿ ಅಧಿಕಾರಕ್ಕೆ ಬಂದವರು, ಪುಕ್ಸಟ್ಟೆಯಾಗಿ ಏನೂ ಕೊಡಲಿಲ್ಲ. ಬಿಜೆಪಿಯವರು ಕೆಲಸ ಮಾಡಲ್ಲ, ಕೆಲಸ ಮಾಡುವವರಿಗೂ ಬಿಡಲ್ಲ. ಬಿಜೆಪಿಯವರ ಮಾತಿಗೆ ಕಿಮ್ಮತ್ತಿಲ್ಲ ಎಂದು ಲೇವಡಿ ಮಾಡಿದರು.
ಈಗ ನಾವು ಕೆಲಸ ಮಾಡುತ್ತಿದ್ದೇವೆ. ಪ್ರತಿದಿನ 60 ಲಕ್ಷ ಮಹಿಳೆಯರು ಉಚಿತವಾಗಿ ಸಂಚಾರ ಮಾಡುತ್ತಿದ್ದಾರೆ. ಅವರ ಶಾಪ ಬಿಜೆಪಿಗರಿಗೆ ತಟ್ಟುತ್ತದೆ. ಇನ್ನು ಶಕ್ತಿ ಯೋಜನೆಯಲ್ಲಿ ನಿರೀಕ್ಷೆಗೆ ಮೀರಿ ಮಹಿಳೆಯರು ಸಂಚಾರ ಮಾಡುತ್ತಿದ್ದಾರೆ. 84 ಲಕ್ಷದಿಂದ 1ಕೋಟಿ 10 ಲಕ್ಷ ಜನರು ಸಂಚಾರ ಮಾಡುತ್ತಿದ್ದಾರೆ. ಮೂರು ಡಿಸಿಎಂಗಳ ಬೇಡಿಕೆ ಇಟ್ಟಿದ್ದು ಏನೂ ತಪ್ಪಿಲ್ಲ, ತೀರ್ಮಾನ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದರು.

ಬೆಂಗಳೂರು ಹೊರತು ಪಡಿಸಿದರೆ ಹುಬ್ಬಳ್ಳಿಯ ಬಸ್ ನಿಲ್ದಾಣವು ದೊಡ್ಡದಾಗಿದೆ. ಈ ಜಾಗವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕಿದೆ. ಶಕ್ತಿ ಯೋಜನೆ ಆರಂಭಗೊಂಡಾಗ 84 ಲಕ್ಷ ಮಹಿಳೆಯರು ಪ್ರಯಾಣಿಸಿದ್ದರು. ಈಗ 1ಕೋಟಿ ಅಧಿಕ ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆಯ ಲಾಭ ಪಡೆದಿರುತ್ತಾರೆ. ಶಕ್ತಿ ಯೋಜನೆಯಿಂದ ಮಹಿಳಾ ಪ್ರಯಾಣಿಕರಿಗೆ ಅನುಕೂಲವಾಗಿದೆ. ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರಿಗೆ 884 ಹೊಸ ಬಸ್ ಖರೀದಿಸಲಾಗುವುದು. ಈಗಾಗಲೇ 375 ಬಸ್‌ಗಳ ಖರೀದಿಗೆ ಟೆಂಡರ್ ಕರೆಯಲಾಗಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಹೇಳಿದರು.












Click it and Unblock the Notifications