'ಡಿ.ಕೆ ಶಿವಕುಮಾರ್ ಅಥವಾ ಸಿದ್ದರಾಮಯ್ಯ; ಸೋಲಿನ ಹೊಣೆ ಯಾರ ತಲೆಗೆ ಕಟ್ಟುವ ಸಿದ್ಧತೆಯಲ್ಲಿ ಕಾಂಗ್ರೆಸ್'
ಹುಬ್ಬಳ್ಳಿ, ಮಾರ್ಚ್ 26: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯಂತ ಕಡಿಮೆ ಸ್ಥಾನ ಪಡೆದು ಸೋಲು ಕಾಣುವುದು ಸತ್ಯ ಆಗಿರುವುದರಿಂದ ಈ ಸೋಲಿನ ಹೊಣೆಯನ್ನು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅಥವಾ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಹೊರಿಸಬೇಕಾ ಅಂತಾ ಕಾಂಗ್ರೆಸ್ ಒಳಗೊಳಗೆ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ ಎಂದು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಚುನಾವಣೆ ಮುಂಚಿತವಾಗಿಯೇ ಅವರ ಫಲಿತಾಂಶ ಏನಾಗುತ್ತದೆ ಎಂದು ತಿಳಿದಿದೆ. ಆದ್ದರಿಂದ ಸೋಲಿನ ಹೊಣೆ ಡಿ.ಕೆ ಶಿವಕುಮಾರ್ ಮೇಲೆ ಹೋರಿಸಬೇಕೋ ಅಥವಾ ಸಿದ್ದರಾಮಯ್ಯ ಅವರ ಮೇಲೆ ಹೋರಿಸಬೇಕೋ ಅಂತಾ ಈಗಲೇ ಸಿದ್ಧತೆ ಮಾಡಿಕೊಂಡಿದೆ ಎಂದು ಸ್ಪಷ್ಟವಾಗಿದೆ.

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಗೆ ಒಂದು ಕಡೆ 35 ದಿನಗಳು, ಇನ್ನೂಂದು ಕಡೆ 45 ದಿನಗಳು ಇದೆ. ಆದರೆ ಕಾಂಗ್ರೆಸ್ ಈಗಾಗಲೇ ಒಂದು ತಿಂಗಳ ಮುಂಚೆನೇ ಸೋಲಿನ ಹೊಣೆಯನ್ನು ಯಾರ ತಲೆಗೆ ಕಟ್ಟಬೇಕು ಎನ್ನುವ ಸಿದ್ಧತೆ ಮಾಡಿಕೊಳ್ಳವ ಪ್ರಯತ್ನವನ್ನು ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಈಗಾಗಲೇ ಬಿಜೆಪಿ 28ಕ್ಕೆ 28 ಕ್ಷೇತ್ರ ಗೆಲ್ಲಬೇಕು ಎನ್ನುವ ಭರವಸೆಯಲ್ಲಿದ್ದೇವೆ. ಹಲವಾರು ಕೆಲಸ ಕಾರ್ಯಗಳನ್ನು ಕಾರ್ಯಕರ್ತರು ಆರಂಭ ಮಾಡಿದ್ದು ನಿಶ್ಚಿತವಾಗಿ ನಾವು ಗೆದ್ದೇ ಗೆಲ್ಲುತ್ತೇವೆ. ಈ ಕಾರಣ ಕಂಡು ಕಾಂಗ್ರೆಸ್ ಶಾಸಕರು ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನ ಗೆಲ್ಲದೇ ಇದ್ದರೆ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಾಗುತ್ತದೆ ಎಂದಿದ್ದಾರೆ. ಹಾಗೇ ಆಗುತ್ತದೆ. ಚುನಾವಣೆ ನಂತರ ಶಾಸಕರ ಮಾತಿನಂತೆ ಮುಖ್ಯಮಂತ್ರಿ ರಾಜೀನಾಮೆ ಕೊಡುವಂತಹ ಸಂಗತಿ ಬಂದರೂ ಆಶ್ಚರ್ಯ ಪಡುವಂತಹ ಸಂಗತಿಯಲ್ಲ ಎಂದರು.
ಕಾಂಗ್ರೆಸ್‌ನಲ್ಲಿ ಮನೆ ಒಂದು ಮೂರು ಬಾಗಿಲು ಆಗಿದ್ದು, ರಾಜ್ಯದಲ್ಲಿ ಸರ್ಕಾರ ಬಂದು 9 ತಿಂಗಳಾಯಿತು. ಇದೇ ರೀತಿಯಾಗಿ ರಾಜ್ಯದಲ್ಲಿ ಘಟನಾವಳಿಗಳು ನಡೆಯುತ್ತಲೇ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಗಲಿ, ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಗುಂಪಾಗಲಿ , ಪರಮೇಶ್ವರ್ ಅವರ ಗುಂಪಾಗಲಿ ಇಂತಹ ಹಲವು ಗುಂಪುಗಳನ್ನು ನಾವು ನೋಡಿದ್ದೇವೆ. ಇವೆಲ್ಲಾ ಚುನಾವಣೆ ನಂತರ ಬಹಳ ದೊಡ್ಡ ಮಟ್ಟದಲ್ಲಿ ಸ್ಫೋಟಗೊಳ್ಳಲಿದೆ ಎಂದು ಹೇಳಿದರು.












Click it and Unblock the Notifications