ಮನುಷ್ಯನಂತೆ ಹಸುವಿಗೆ ಕೃತಕ ಕಾಲು ಜೋಡಣೆ ಯಶಸ್ವಿ, ಮಾಹಿತಿ
ಹುಬ್ಬಳ್ಳಿ, ಫೆಬ್ರವರಿ 05: ರಸ್ತೆ ಅಪಘಾತ ಮತ್ತಿತರ ಕಾರಣಗಳಿಂದ ಮನುಷ್ಯರಿಗೆ ಕೈ-ಕಾಲುಗಳು ಮುರಿದರೆ ಕೃತಕ ಕಾಲು ಜೋಡಣೆ ಮಾಡಲಾಗುತ್ತದೆ. ಅದೇ ರೀತಿ ಪ್ರಾಣಿಗಳಿಗೂ ಅದರಲ್ಲೂ ಆಕಳುಗಳಿಗೆ ಕೃತಕ ಜೋಡಣೆ ಮಾಡಿದ ಪ್ರಸಂಗ ಹುಬ್ಬಳ್ಳಿಯಲ್ಲಿ ನಡೆದಿದೆ.
ರೈಲು ಅಪಘಾತದಲ್ಲಿ ಕಾಲು ಕಳೆದುಕೊಂಡು ನಡೆಯಲಾಗದ ಸ್ಥಿತಿಯಲ್ಲಿದ್ದ ಸಹ ಕರುವಿಗೆ ಆಲ್ ಇಂಡಿಯಾ ಜೈನ್ ಯುಥ್ ಫೆಡರೇಷನ್‌ನ ಮಹಾವೀರ ಲಿಂಬ್ ಸೆಂಟರ್ ವತಿಯಿಂದ ಕೃತಕ ಕಾಲು ಜೋಡಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದೆ.

ಯಶಸ್ವಿ ಜೋಡಣೆ ಬಳಿಕ ಈ ಕುರಿತು ಸುದ್ದಿಗೋಷ್ಠಿ ನಡೆಸಿ ಆಲ್ ಇಂಡಿಯಾ ಜೈನ್ ಯುಥ್ ಫೆಡರೇಷನ್‌ನ ಮಹಾವೀರ ಲಿಂಬ್ ಸೆಂಟರ್‌ನ ಸಂಸ್ಥಾಪಕ ಅಧ್ಯಕ್ಷ ಮಹೇಂದ್ರ ಸಿಂಘಿ ಅವರು ಮಾಹಿತಿ ಹಂಚಿಕೊಂಡರು. ಧಾರವಾಡದ ಕಮಲಾಪುರದಲ್ಲಿ ಕಳೆದ ಎಂಟು ತಿಂಗಳ ಹಿಂದೆ ರೈಲು ಅಪಘಾತದಲ್ಲಿ ಆಕಳು ಮತ್ತು ಕರುವಿಗೆ ಅಪಘಾತವಾಗಿತ್ತು ಎಂದರು.
ಸಂಪೂರ್ಣ ಕಟ್ಟಾಗಿದ್ದ ಕರುವಿನ ಕಾಲು
ಅಪಘಾತದಲ್ಲಿ ಆಕಳು ಸಾವನ್ನಪ್ಪಿದ್ದು, ಕರುವಿನ ಹಿಂದಿನ ಒಂದು ಕಾಲು ಮುರಿದಿತ್ತು. ಸಂಪೂರ್ಣ ಕಟ್ ಆಗಿತ್ತು. ಇದರಿಂದ ಓಡಾಡಲು ತೀವ್ರ ತೊಂದರೆಯಾಗಿತ್ತು. ಆ ಕರುವನ್ನು ಅಭಿನವನಗರದ ವಿಶ್ವ ಹಿಂದೂ ಪರಿಷತ್ ಸಂಚಾಲಿತ ಗೋ ಸೇವಾ ಕೇಂದ್ರದಲ್ಲಿ ಇರುವುದನ್ನು ಅರಿತು ಮಹಾವೀರ ಲಿಂಬ್ ಸೆಂಟರ್‌ನಿಂದ ಉಚಿತವಾಗಿ ಕರುವಿಗೆ ಕೃತಕ ಕಾಲು ಜೋಡಣೆ ಮಾಡಲಾಗಿದೆ. ಇದು ನಮಗೆ ಸಾರ್ಥಕತೆಯನ್ನು ಮೂಡಿಸಿದೆ ಎಂದು ತಿಳಿಸಿದರು.

ಈ ಹಿಂದೆ ಆನೆಗೆ ಒಂದು ಕೃತಕ ಕಾಲು ಜೋಡಣೆ ಮಾಡಿದ್ದನ್ನು ನಾವು ನೋಡಿದ್ದೇವೆ. ಅದನ್ನು ಬಿಟ್ಟರೆ, ಎರಡು ವರ್ಷದ ಹಿಂದೆ ನಮ್ಮ ಸಂಸ್ಥೆಯಿಂದ ಕುದುರೆಗೆ ಕೃತಕ ಕಾಲು ಜೋಡಣೆ ಮಾಡಲಾಗಿತ್ತು. ಈಗ ಕರುವಿಗೆ ಕೃತಕ ಕಾಲು ಜೋಡಣೆ ಮಾಡಿದ್ದು, ಕರು ಮೊದಲಿನಂತೆ ಓಡಾಡುತ್ತಿದೆ.
51 ಸಾವಿರ ಕೃತಕ ಕಾಲು ಜೋಡಣೆ
2.5 ವರ್ಷದವರೆಗೆ ಈ ಕಾಲು ಬಳಸಬಹುದಾಗಿದೆ. ಕರುವನ್ನು ದತ್ತು ಪಡೆದುಕೊಂಡಿದ್ದು, ಅದರ ಪೋಷಣೆ ಮಾಡಲಾಗುವುದು. ಇಲ್ಲಿಯವರೆಗೂ ಮಹಾವೀರ ಲಿಂಬ್ ಸೆಂಟರ್‌ನಿಂದ 51 ಸಾವಿರ ಕೃತಕ ಕಾಲು ಜೋಡಣೆ ಮಾಡಲಾಗಿದೆ ಎಂದರು.
ವಿಶ್ವ ಹಿಂದೂ ಪರಿಷತ್‌ನ ಗೋವರ್ಧನರಾವ್ ಮಾತನಾಡಿ, ಗೋಶಾಲೆಯಲ್ಲಿ ದೇಶಿಯ ಆಕಳಿಗೆ ಮಹತ್ವ ನೀಡಲಾಗಿದೆ. ಕೃಷಿ ಬಗ್ಗೆ ಮಹತ್ವ ತಿಳಿಸಿಕೊಡುತ್ತೇವೆ. ನಮ್ಮ ಗೋಶಾಲೆಗೆ ಬಂದ ಕರುವಿಗೆ ಕೃತಕ ಕಾಲು ಜೋಡಿಸಿರುವುದು ಹೊಸ ಆಯಾಮ. ಇದೊಂದು ಮಾನವೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹಾವೀರ ಲಿಂಬ್ ಸೆಂಟರ್ ಅಧ್ಯಕ್ಷ ಗೌತಮ್ ಗುಲೇಚ್ಛಾ, ಪ್ರಕಾಶ ಕಟಾರಿಯಾ, ಆನಂದ ಸಂಗಮ, ಗಣೇಶ ಕದಂ, ಸುಭಾಸ್ ಡಂಕ, ಸುನೀಲ ಬರೋಟ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.












Click it and Unblock the Notifications