ಮತಾಂತರ ನಿಷೇಧ ಕಾಯ್ದೆ; ಜನರಿಗೆ ಆತಂಕ ಬೇಡ ಎಂದ ಸಿಎಂ
ಹುಬ್ಬಳ್ಳಿ, ಡಿಸೆಂಬರ್ 12; "ಮತಾಂತರ ನಿಷೇಧ ಕಾಯ್ದೆಗೆ ಸಂಬಂಧಿಸಿದಂತೆ ಜನರು ಆತಂಕ ಪಡಬೇಕಾದ ಅಗತ್ಯವಿಲ್ಲ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸೋಮವಾರದಿಂದ ವಿಧಾನಸಭೆ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ಆರಂಭವಾಗಲಿದ್ದು, ಮಸೂದೆ ಮಂಡನೆ ಮಾಡಲು ಸರ್ಕಾರ ತೀರ್ಮಾನಿಸಿದೆ.
ಭಾನುವಾರ ಹುಬ್ಭಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮುಖ್ಯಮಂತ್ರಿಗಳು, "ಹಿಂದೂ, ಕ್ರಿಶ್ಚಿಯನ್, ಇಸ್ಲಾಂ ಹಾಗೂ ಸಿಖ್ ಧರ್ಮಗಳು ಸಂವಿಧಾನದಲ್ಲಿ ಗುರುತಿಸಲಾಗಿರುವ ಧರ್ಮಗಳಾಗಿದ್ದು, ಅವರ ಪ್ರಾರ್ಥನೆ, ಆಚರಣೆಗಳಿಗೆ ಯಾವುದೇ ತೊಂದರೆ ಇಲ್ಲ" ಎಂದು ಭರವಸೆ ನೀಡಿದರು.
"ಬಡತನದ ದುರುಪಯೋಗ ಪಡೆದು, ಆಸೆ, ಆಮಿಷಗಳನ್ನು ಒಡ್ಡಿ ಮತಾಂತರ ಮಾಡುವುದಕ್ಕೆ ಅವಕಾಶವಿಲ್ಲ. ಮತಾಂತರದ ವಿಷಯ ಇಂದಿನದಲ್ಲ, ಈ ಬಗ್ಗೆ ಸ್ವತಂತ್ರದ ನಂತರದಲ್ಲಿ ಬಹಳ ದೊಡ್ಡ ಚರ್ಚೆಯಾಗಿದೆ. ವಿವಿಧ ರಾಜ್ಯಗಳಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಗಿದೆ" ಎಂದರು.

"ಕಾನೂನು ಜಾರಿಗೆ ತರಬೇಕೆನ್ನುವುದು ಕರ್ನಾಟಕದ ಬಹುತೇಕ ಜನರ ಅಪೇಕ್ಷೆಯೂ ಆಗಿದೆ. ಈ ಹಿನ್ನಲೆಯಲ್ಲಿ ಕಾನೂನು ಇಲಾಖೆ ಪರಿಶೀಲನೆ ಮಾಡುತ್ತಿದೆ. ಪರಿಶೀಲನೆಯ ನಂತರ ಸಚಿವ ಸಂಪುಟ ಸಭೆಯಲ್ಲಿ ವಿಷಯ ಮಂಡನೆಯಾಗಲಿದೆ. ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಬಹುತೇಕವಾಗಿ ಕಾನೂನು ಇಲಾಖೆ ಕರಡು ಕಾಯ್ದೆಗೆ ಒಪ್ಪಿಗೆ ನೀಡಿದಲ್ಲಿ ಅಧಿವೇಶನದಲ್ಲಿ ವಿಷಯ ಚರ್ಚೆಗೆ ಬರಲಿದೆ" ಎಂದು ಹೇಳಿದರು.
ಮತಾಂತರ ಒಳ್ಳೆಯದಲ್ಲ; "ಮತಾಂತರ ಸಮಾಜಕ್ಕೆ ಒಳ್ಳೆಯದಲ್ಲ. ಬಡವರು, ದೀನದಲಿತರು ಅದಕ್ಕೆ ಒಳಗಾಗಬಾರದು. ಅವರ ಮನೆತನ, ಕುಟುಂಬದಲ್ಲಿ ಬಹಳಷ್ಟು ತೊಂದರೆಯಾಗುವುದರಿಂದ ಮತಾಂತರ ನಿಷೇಧ ಕಾಯ್ದೆಯನ್ನು ತರುವ ಪ್ರಯತ್ನವನ್ನು ನಮ್ಮ ಸರ್ಕಾರ ಮಾಡಲಿದೆ" ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.
ಬೆಳಗಾವಿ ಅಧಿವೇಶನ; ಮತಾಂತರ ನಿಷೇಧ ಮಸೂದೆ ಮಂಡನೆ ವಿಚಾರದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಜಟಾಪಟಿ ನಡೆಯುತ್ತಿದೆ. ಮಸೂದೆ ಮಂಡನೆ ಮಾಡಬೇಕು ಎಂದು ಬಿಜೆಪಿಯ ಕೆಲವು ಶಾಸಕರು ಸಹ ಒತ್ತಾಯಿಸುತ್ತಿದ್ದಾರೆ.
ಮುಂದಿನ ವಾರ ಕಾನೂನು ಸಚಿವ ಜೆ. ಸಿ. ಮಾಧುಸ್ವಾಮಿ ನೇತೃತ್ವದ ಪರಿಶೀಲನಾ ಸಮಿತಿ ಸಭೆ ನಡೆಯಲಿದೆ. ಸಭೆಯಲ್ಲಿ ಒಪ್ಪಿಗೆ ಸಿಕ್ಕ ಬಳಿಕ ಸದನದಲ್ಲಿ ಮಸೂದೆ ಮಂಡನೆ ಮಾಡಲು ತೀರ್ಮನಿಸಲಾಗಿದೆ.
ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಮುನಿರಾಜು ಗೌಡ ಮತಾಂತರ ನಿಷೇಧಕ್ಕಾಗಿ ಖಾಸಗಿಯಾಗಿ ಮಸೂದೆ ಮಂಡಿಸಲು ತೀರ್ಮಾನಿಸಿದ್ದಾರೆ. ಈ ವಿಚಾರ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯುವ ನಿರೀಕ್ಷೆ ಇದೆ.
ಪ್ರತಿಪಕ್ಷ ಕಾಂಗ್ರೆಸ್ ಮತಾಂತರ ನಿಷೇಧ ಮೂಸೂದೆಯನ್ನು ವಿರೋಧಿಸಿದೆ. ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಕಾಯ್ದೆ ಜಾರಿಗೆ ತರಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಗೃಹ ಇಲಾಖೆ ಮತಾಂತರ ನಿಷೇಧ ಕಾಯ್ದೆ ಹೇಗಿರಬೇಕು? ಎಂಬ ಕರಡು ಸಿದ್ಧಪಡಿಸಿದೆ. ಕಾನೂನು ಸಚಿವ ಜೆ. ಸಿ. ಮಾಧುಸ್ವಾಮಿ ಅಧ್ಯಕ್ಷತೆಯ ಪರಿಶೀಲನಾ ಸಮಿತಿಯಲ್ಲಿ ಗೃಹ ಸಚಿವರು, ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯ ಹಿರಿಯ ಅಧಿಕಾರಿಗಳು ಇರಲಿದ್ದಾರೆ. ಈ ಸಮಿತಿಯಲ್ಲಿ ಒಪ್ಪಿಗೆ ನೀಡಿದ ಬಳಿಕ ಮಸೂದೆ ಮಂಡನೆಯಾಗಲಿದೆ.
ಕ್ರೈಸ್ತರಿಂದ ಆಕ್ಷೇಪ; ಮತಾಂತರ ನಿಷೇಧ ಮಸೂದೆ ಮಂಡನೆ ಮಾಡಲು ಕ್ರೈಸ್ತರು ವಿರೋಧ ಮಾಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯನ್ನು ಭೇಟಿ ಮಾಡಿದ್ದ ಕ್ರೈಸ್ತ ಧರ್ಮೀಯರ ನಿಯೋಗ ಮತಾಂತರ ನಿಷೇಧ ಕಾನೂನು ಜಾರಿಗೊಳಿಸಬಾರದು, ಯಾರೂ ಸಹ ಬಲವಂತದಿಂದ ಮತಾಂತರ ಮಾಡುತ್ತಿಲ್ಲ ಎಂದು ಹೇಳಿದೆ.
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮಾತನಾಡಿ, "ಚುನಾವಣೆ ಸಮೀಪಿಸುತ್ತಿರುವುದರಿಂದ ಬಿಜೆಪಿ ಒಂದೊಂದೆ ಸಮುದಾಯವನ್ನು ಗುರಿ ಮಾಡುತ್ತಿದೆ. ಮತಾಂತರ ನಿಷೇಧ ಮಸೂದೆ ವಿಚಾರ ಕೇವಲ ಇಲ್ಲಿನ ವಿಚಾರವಲ್ಲ. ಇಡೀ ವಿಶ್ವವೇ ಗಮನಿಸುವ ವಿಚಾರ" ಎಂದು ಹೇಳಿದರು.












Click it and Unblock the Notifications