D.Roopa vs Rohini Sindhuri: ರೂಪಾ, ರೋಹಿಣಿ ಸಿಂಧೂರಿ ಮೇಲೆ ಕ್ರಮ ಕೈಗೊಳ್ಳಲು ಪ್ರಲ್ಹಾದ್ ಜೋಶಿ ಆಗ್ರಹ
ಯಾವುದೇ ಖಾಸಗಿ ಫೋಟೋ, ಆಫೀಶಿಯಲ್ ಟೋ ಇರಲಿ, ಮಾಧ್ಯಮಗಳು ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರದರ್ಶಿಸುವುದು ಉತ್ತಮ ಬೆಳವಣಿಗೆಯಲ್ಲ.
ಧಾರವಾಡ, ಫೆಬ್ರವರಿ.20: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ರೂಪಾ ಇಬ್ಬರ ನಡುವಿನ ಮನಸ್ತಾಪ ಬೀದಿರಂಪವಾಗಿ ಬದಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸರ್ಕಾರದ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ರೂಪಾ ಅವರ ನಡುವಿನ ಕಿತ್ತಾಟದ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ಐಎಎಸ್, ಐಪಿಎಸ್ ಅಧಿಕಾರಿಗಳು ಈ ರೀತಿ ರಸ್ತೆಯಲ್ಲಿ ನಿಂತು ಸ್ಟೇಟ್ ಮೆಂಟ್ಸ್ ಕೊಡುವುದು, ಆರೋಪ ಪ್ರತ್ಯಾರೋಪದಲ್ಲಿ ತೊಡಗಿರುವುದು ಅನಾರೋಗ್ಯಕರ ಬೆಳವಣಿಗೆಯಾಗಿದೆ. ಅಧಿಕಾರಿಗಳ ಈ ರೀತಿಯ ವರ್ತನೆ ಸರಿಯಲ್ಲ. ಮುಖ್ಯಮಂತ್ರಿಗಳು ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು' ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಆಗ್ರಹಿಸಿದ್ದಾರೆ.

ಧಾರವಾಡದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಲ್ಹಾದ್ ಜೋಶಿ, 'ಅಧಿಕಾರಿಗಳ ಈ ರೀತಿ ಪತ್ರಿಕಾ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಅವರಲ್ಲಿ ಪರಸ್ಪರ ದೂರುಗಳಿದ್ದರೆ ಸಕ್ಷಮ ಪ್ರಾಧಿಕಾರಕ್ಕೆ ಕಳಿಸಬೇಕು. ಅದು ಬಿಟ್ಟು ರಸ್ತೆಯಲ್ಲಿ ನಿಂತು ಹೇಳಿಕೆಗಳನ್ನು ಕೊಡುವುದು ಅನಾರೋಗ್ಯಕರ ಬೆಳವಣಿಗೆ. ನಾನು ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೆ ಈ ಬಗ್ಗೆ ಹೇಳುತ್ತೇನೆ. ಇವರ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳಿಗೂ ಆಗ್ರಹ ಮಾಡುತ್ತೇನೆ" ಎಂದಿದ್ದಾರೆ. '
ನಮ್ಮ ವಿರುದ್ಧ ಕಾಂಗ್ರೆಸ್‌ನವರು ಆರೋಪ ಮಾಡುತ್ತಾರೆ. ನಾವು ಅವರ ವಿರುದ್ಧ ಆರೋಪ ಮಾಡುತ್ತೇವೆ. ಒಂದು ಪೊಲಿಟಿಕಲ್ ಸಿಸ್ಟಮ್ ನಲ್ಲಿ ನಮ್ಮ ನಡುವೆ ಆರೋಪ ಪ್ರತ್ಯಾರೋಪಗಳು ನಡೆಯುತ್ತಿರುತ್ತೆ. ಆದರೆ ಅಧಿಕಾರಿಗಳು ಒಬ್ಬರ ಮೇಲೆ ಒಬ್ಬರು ಕೆಸರೆರಚಾಟ ಮಾಡುವುದು, ಪತ್ರಿಕಾ ಹೇಳಿಕೆ ಕೊಡುವುದು, ಟ್ವೀಟ್ ಮಾಡುವದು ಸರಿಯಲ್ಲ ಎಂದು ಹೇಳಿದ್ದಾರೆ.

'ರೋಹಿಣಿ ಹಾಗೂ ರೂಪಾ ಅವರ ನಡುವಿನ ಗಲಾಟೆ ವಿಚಾರವಾಗಿ ಯಾರೇ ಒಬ್ಬ ಅಧಿಕಾರಿ ಪರ ಅಥವಾ ವಿರುದ್ಧ ನಾನು ಮಾತನಾಡುತ್ತಿಲ್ಲ. ಯಾವುದೇ ಖಾಸಗಿ ಫೋಟೋ ಇರಲಿ, ಆಫೀಶಿಯಲ್ ಪೋಟೊ ಬಿಡುಗಡೆ ಇರಲಿ, ಮಾಧ್ಯಮಗಳು ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರದರ್ಶಿಸುವುದು ಉತ್ತಮ ಬೆಳವಣಿಗೆಯಲ್ಲ. ಇದು ಅತ್ಯಂತ ದುರ್ದೈವದ ಸಂಗತಿ' ಎಂದು ಪ್ರಪ್ರಲ್ಹಾದ್ ಜೋಶಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜೊತೆಗೆ ಈ ವಿಷಯದ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿ ಮಾಡಿ ಚರ್ಚಿಸುವುದಾಗಿ ತಿಳಿಸಿದ್ದಾರೆ.












Click it and Unblock the Notifications