Road accident: ಹುಬ್ಬಳ್ಳಿ-ಧಾರವಾಡಲ್ಲಿ ಕಳೆದ 5 ವರ್ಷದಲ್ಲಿ ಸಂಭವಿಸಿದ ರಸ್ತೆ ಅಪಘಾತಗಳು, ಸಾವಿನ ವಿವರ
ಹುಬ್ಬಳ್ಳಿ, ಜೂನ್, 04: ಹುಬ್ಬಳ್ಳಿ-ಧಾರವಾಡ ಮಹಾನಗರದ ವಿವಿಧೆಡೆ ಕಳೆದ ಐದು ವರ್ಷಗಳಲ್ಲಿ ನಡೆದ ವಾಹನ ಅಪಘಾತಗಳಲ್ಲಿ ಬರೋಬ್ಬರಿ 529 ಜನ ಪ್ರಾಣ ಕಳೆದುಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಪೈಕಿ 100ಕ್ಕೂ ಹೆಚ್ಚು ಮಂದಿ ಹೆಲ್ಮೆಟ್ ಧರಿಸದೆ, ಬೈಕ್ ಸವಾರಿ ಮಾಡಿದವರಾಗಿದ್ದಾರೆ ಎಂದು ತಿಳಿದುಬಂದಿದೆ.
ಸಂಚಾರ ನಿಯಮಗಳನ್ನು ಪಾಲಿಸದೆ ವಾಹನಗಳನ್ನು ಚಲಾಯಿಸಿರುವುದರಿಂದ ನಡೆದಿರುವ ಅಪಘಾತ ಪ್ರಕರಣಗಳು ಇವಾಗಿವೆ. ಅತಿವೇಗದ ಚಾಲನೆ, ಬೇಜವಾಬ್ದಾರಿ ಚಾಲನೆ, ಮದ್ಯಪಾನ ಮಾಡಿ ಚಾಲನೆ, ಸೀಟ್‌ಬೆಲ್ಟ್ ಧರಿಸದೆ ಚಾಲನೆ ಹಾಗೂ ಹೆಲ್ಮೆಟ್ ಧರಿಸದೆ ಬೈಕ್‌ಗಳನ್ನು ಚಲಾಯಿಸಿದ ಪರಿಣಾಮ ಅಪಘಾತಗಳಾಗಿ ಗಂಭೀರ ಗಾಯಗೊಂಡು ಹಲವರು ಮೃತಪಟ್ಟಿದ್ದಾರೆ. ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರ ವಿರುದ್ಧ ಪ್ರತಿದಿನ ದಂಡ ವಸೂಲಿ ಮಾಡುತ್ತಿದ್ದರೂ, ನಿಯಮ ಉಲ್ಲಂಘನೆ ಪ್ರಕರಣಗಳ ಸಂಖ್ಯೆ ಮಾತ್ರ ಕಡಿಮೆ ಆಗುತ್ತಿಲ್ಲ.

6 ವರ್ಷಗಳಲ್ಲಿ ಸಂಭವಿಸಿದ ಅಪಘಾತಗಳು & ಸಾವಿನ ವಿವರ
1. 2023ರ ಮೇ 31ರವರೆಗೆ 39 ಜನರ ಸಾವು, 187 ಪ್ರಕರಣ ದಾಖಲು
2. 2022ರಲ್ಲಿ 108 ಜನರ ಸಾವು 513 ಪ್ರಕರಣ
3. 2021ರಲ್ಲಿ 109 ಜನರ ಸಾವು, 428 ಪ್ರಕರಣ
4. 2020ರಲ್ಲಿ 91ಜನರ ಸಾವು, 342 ಪ್ರಕರಣ
5. 2019ರಲ್ಲಿ 92ಜನರ ಸಾವು, 430 ಪ್ರಕರಣ ದಾಖಲು
5. 2018ರಲ್ಲಿ 370 ಅಪಘಾತ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 90 ಜನರ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಕಮಿಷನರೇಟ್ ಘಟಕದ ವ್ಯಾಪ್ತಿಯಲ್ಲಿ ನಾಲ್ಕು ಸಂಚಾರ ಠಾಣೆಗಳಿದ್ದು, ಇಲ್ಲಿ ಪ್ರತಿದಿನ ಮೂರರಿಂದ ನಾಲ್ಕು ಅಪಘಾತ ಪ್ರಕರಣಗಳು ದಾಖಲಾಗುತ್ತವೆ. 2018ರಿಂದ 2023 (ಮೇ 31) ರವರೆಗೆ ಒಟ್ಟು 2,270 ಅಪಘಾತಗಳು ಸಂಭವಿಸಿವೆ. 2,259 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ 500ಕ್ಕೂ ಹೆಚ್ಚು ಜನ ಕೈ, ಕಾಲು ಕಳೆದುಕೊಂಡು ಶಾಶ್ವತ ಅಂಗವಿಕಲರಾಗಿದ್ದಾರೆ.
ಇದರಲ್ಲಿ ಹೆಲ್ಮೆಟ್ ಇಲ್ಲದೆ ಸಂಚರಿಸಿ ಮೃತಪಟ್ಟವರಲ್ಲಿ ಯುವಕರ ಸಂಖ್ಯೆಯೇ ಜಾಸ್ತಿ ಇದೆ. ಉತ್ತರ ಮತ್ತು ಪೂರ್ವ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ನಗರದ ಬಿಆರ್‌ಟಿಎಸ್ ಕಾರಿಡಾರ್ ಸೇರಿದಂತೆ ಗದಗ ಮುಖ್ಯ ರಸ್ತೆ, ಗೋಕುಲ ರಸ್ತೆ, ತಾರಿಹಾಳ ಬೈಪಾಸ್‌ಗಳಲ್ಲಿಯೇ ಅತಿ ಹೆಚ್ಚು ಅಪಘಾತಗಳು ಸಂಭವಿಸಿವೆ ಎಂದು ತಿಳಿದುಬಂದಿದೆ.
ಇನ್ನು ಇತ್ತೀಚೆಗೆ ಅವಳಿ ನಗರದಲ್ಲಿ ವಾಹನ ಸವಾರರಿಂದ ಸಂಚಾರ ನಿಯಮಗಳ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಹೆಲ್ಮೆಟ್ ಇಲ್ಲದೆ ಬೈಕ್ ಸವಾರಿ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಸಿಗ್ನಲ್ ಪ್ರದೇಶಗಳಲ್ಲಿನ ಸಿಸಿಟಿವಿ ಕ್ಯಾಮೆರಾಗಳಿಂದ ಅವರನ್ನು ಪತ್ತೆಹಚ್ಚಿ, ನೋಟಿಸ್ ಕಳುಹಿಸಿದರೂ ಅಪಘಾತ ಪ್ರಕರಣಗಳು ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ.
ಕೆಲವು ಬೈಕ್ ಸವಾರರು 10ರಿಂದ 15 ಬಾರಿ ಸಂಚಾರ ನಿಯಮ ಉಲ್ಲಂಘಿಸಿರುವುದು ಸಹ ಬೆಳಕಿಗೆ ಬಂದಿದೆ. ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಮೇ 31ರಿಂದ ಅವಳಿನಗರದಲ್ಲಿ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ. ಆದರೂ ಕೂಡ ಜನರು ಮಾತ್ರ ಬೇಜಾವಾಬ್ದಾರಿಯಿಂದ ನಿಯಮ ಮೀರಿ ವಾಹನ ಚಲಾಯಿಸುತ್ತಿರುವುದು ವಿಪರ್ಯಾಸಕರ ಸಂಗತಿ ಆಗಿದೆ.
ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾತ್ತಿರುವುದು ಬರೀ ಹುಬ್ಬಳ್ಳಿ ಅಗರದಲ್ಲೆ ಅಷ್ಟೇ ಅಲ್ಲ, ಇನ್ನಿತರ ಬೃಹತ್ ನಗರಗಳಲ್ಲೂ ಸಹ ಯುವ ಪೀಳಿಗೆಯವರು ಅಡ್ಡದಿಡ್ಡಿಯಾಗಿ ದ್ವಿಚಕ್ರ ವಾಹನಗಳನ್ನು ಚಲಾಯಿಸಿ ಅಪಘಾತಗಳು ಸಂಭವಿಸಿರುವ ಘಟನೆಗಳು ಜರುಗಿವೆ. ಸಂಚಾರಿ ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿದರೂ ಕೂಡ ಮತ್ತೊಂದೆಡೆ ಯುವ ಪೀಳಿಗೆಯ ಹುಡುಗರು, ಹುಡುಗಿಯರು ನಡುರಸ್ತೆಯಲ್ಲಿಯೇ ಚಲಿಸುವ ಬೈಕ್‌ಗಳ ಮೇಲೆಯೇ ಕುಳಿತು ತಮಗೆ ಅರಿವಿಲ್ಲದೆ ಲಿಪ್ ಲಾಕ್ ಮಾಡುವ ಮೂಲಕ ವಿಕೃತಿ ಮೆರೆಯುತ್ತಿದ್ದಾರೆ. ಇದು ಮುಂದಿನ ಪೀಳಿಗೆಗೆ ಕೆಟ್ಟ ಸಂದೇಶ ಮತ್ತು ಅಪಘಾತಗಳಿಗೆ ಕಾರಣ ಆಗುತ್ತಿದೆ ಎನ್ನುವ ಆರೋಪಗಳು ಕೂಡ ಕೇಳಿಬರುತ್ತಿವೆ.












Click it and Unblock the Notifications