ಧಾರವಾಡದಲ್ಲಿ ಪ್ರಹ್ಲಾದ್ ಜೋಶಿಗೆ ಮತ ವಿಭಜನೆ ಸಂಕಷ್ಟ!
ಧಾರವಾಡ, ಫೆ.22 : ಲೋಕಸಭೆ ಚುನಾವಣೆಗೆ ಕರ್ನಾಟಕ ಬಿಜೆಪಿ ಭರದ ಸಿದ್ಧತೆ ನಡೆಸುತ್ತಿದೆ. ರಾಜ್ಯದಲ್ಲಿ ಹೆಚ್ಚು ಸ್ಥಾನಗಳನ್ನುಗಳಿಸಿ ಕೇಂದ್ರದಲ್ಲಿ ಅಧಿಕಾರಪಡೆಯಲು ಅಗತ್ಯ ಕೊಡುಗೆ ನೀಡಲು ಸಿದ್ಧವಾಗಿದೆ. ಆದರೆ, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರಿಗೆ ಸ್ವ ಕ್ಷೇತ್ರ ಧಾರವಾಡದಲ್ಲಿ ತೀವ್ರ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ.
ಧಾರವಾಡ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ನವಲಗುಂದ, ಕುಂದಗೋಳ, ಧಾರವಾಡ, ಹುಬ್ಬಳ್ಳಿ-ಧಾರವಾಡ ಪೂರ್ವ, ಹುಬ್ಬಳ್ಳಿ-ಧಾರವಾಡ ಕೇಂದ್ರ, ಹುಬ್ಬಳ್ಳಿ-ಧಾರವಾಡ ಪಶ್ಚಿಮ ಮತ್ತು ಕಲಘಗಿ ವಿಧಾನಸಭೆ ಕ್ಷೇತ್ರಗಳು ಒಳಪಡುತ್ತವೆ.ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹುಬ್ಬಳ್ಳಿ-ಧಾರವಾಡ ಕೇಂದ್ರ ಮತ್ತು ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. [ಧಾರವಾಡದಲ್ಲಿ ಸೋತು ಗೆದ್ದವರು]

ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಜಯ ಸಾಧಿಸಿರುವ ಕಾಂಗ್ರೆಸ್ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಪ್ರಹ್ಲಾದ್ ಜೋಶಿ ಅವರಿಗೆ ಪ್ರಬಲ ಪೈಪೋಟಿ ನೀಡಲು ರಣತಂತ್ರ ರೂಪಿಸಿದೆ. ಜೊತೆಗೆ ಸಮಾಜವಾದಿ ಪಕ್ಷ ಮತ್ತು ಶ್ರೀರಾಮಸೇನೆಯ ಅಭ್ಯರ್ಥಿಗಳು ಜಿಲ್ಲೆಯಲ್ಲಿ ಕಣಕ್ಕೆ ಇಳಿಯಲಿದ್ದು, ಮತ ವಿಭಜನೆಯಾಗುವ ಭೀತಿ ಇದೆ. [ಹುಬ್ಬಳ್ಳಿ ಮೈದಾನ ವಿವಾದ]
ಬಿಜೆಪಿ ಕೇಂದ್ರ ಸರ್ಕಾರದ ಭ್ರಷ್ಟಾಚಾರವನ್ನು ಜನರಿಗೆ ತಲುಪಿಸಿ ಮತ ಕೇಳುತ್ತಿದೆ. ಆದರೆ, ಹುಬ್ಬಳ್ಳಿ ಜಿಮ್‌ಖಾನಾ ಮೈದಾನ ವಿವಾದದಲ್ಲಿ ಹಿರಿಯ ಬಿಜೆಪಿ ನಾಯಕರ ಹೆಸರು ಕೇಳಿಬರುತ್ತಿರುವುದು ಲೋಕಸಭೆ ಚುನಾವಣೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಇದರಿಂದ ಜೋಶಿ ಗೆಲುವಿನ ಹಾದಿ ಕಠಿಣವಾಗುವ ಸಾಧ್ಯತೆ ಇದೆ. [ಹುಬ್ಬಳ್ಳಿಯಲ್ಲಿ ಫೆ. 28ಕ್ಕೆ ಮೋದಿ ಮೋಡಿ]
ನರೇಂದ್ರ ಮೋದಿ ಅವರಿಗೆ ಬೆಂಬಲ ನೀಡಲು ಲೋಕಸಭೆ ಚುನಾವಣೆ ಕಣಕ್ಕೆ ಶ್ರೀರಾಮಸೇನೆ ಧುಮುಕುವುದಾಗಿ ಘೋಷಿಸಿದೆ. ಸ್ವತಃ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಧಾರವಾಡ ಕ್ಷೇತ್ರದಿಂದ ಸ್ಪರ್ಧಿಸಲಿದ್ದೇನೆ ಎಂದು ಘೋಷಿಸಿದ್ದಾರೆ. ಇದರಿಂದ ಬಿಜೆಪಿಯ ಮತಗಳು ಸೇನೆಯ ಅಭ್ಯರ್ಥಿ ಕಡೆ ಹರಿದರೆ, ಬಿಜೆಪಿ ಹಾದಿ ಕಠಿಣ. [ಜೋಶಿ-ಮುತಾಲಿಕ್ ಹಣಾಹಣಿ]
ಧಾರವಾಡ ಕ್ಷೇತ್ರಕ್ಕೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ. ಮಾಜಿ ಸಂಸದ ಮಂಜುನಾಥ್ ಕುನ್ನೂರ್, ಮಹೇಶ್ ನಲಟವಾಡ್ ಅವರ ಹೆಸರು ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿದೆ. ಮಾಜಿ ಸಚಿವ ಮತ್ತು ಮುಸ್ಲಿಂ ಮುಖಂಡ ಎ.ಎಂ.ಹಿಂಡಸಗೇರಿ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ, ಪ್ರಬಲ ಅಭ್ಯರ್ಥಿ ಹುಡುಕಾಟದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಅಂತಿಮಗೊಳಿಸಿಲ್ಲ.
ಜಿಲ್ಲೆಯಲ್ಲಿನ ಅಭ್ಯರ್ಥಿ ಬಗ್ಗೆ ಜೆಡಿಎಸ್ ಅಷ್ಟು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಆದರೆ, ರಾಜ್ಯದ ಸಮಾಜವಾದಿ ಪಕ್ಷದ ಅಧ್ಯಕ್ಷ ಬಾಬಾ ಗೌಡ ಪಾಟೀಲ್ ಜೋಶಿ ವಿರುದ್ಧ ಸ್ಪರ್ಧೆ ಮಾಡುವ ಉತ್ಸಾಹದಲ್ಲಿದ್ದಾರೆ. ಜೊತೆಗೆ ಆಮ್ ಆದ್ಮಿ ಪಕ್ಷವು ಜಿಲ್ಲೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದರೆ, ಹಾಲಿ ಸಂಸದ ಜೋಶಿ ಅವರಿಗೆ ಗೆಲುವಿನ ನಾಗಾಲೋಟಕ್ಕೆ ತಡೆ ಬೀಳಬಹುದು.
ಜಿಲ್ಲೆಯ ಬಿಜೆಪಿ ಕಾರ್ಯಕರ್ತರನ್ನು ಚುನಾವಣೆಗೆ ಹುರಿದುಂಬಿಸಲು ಹುಬ್ಬಳ್ಳಿಯಲ್ಲಿ ಫೆ.28ರಂದು ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಭಾರತ ಗೆಲ್ಲಿಸಿ ಸಮಾವೇಶ ಆಯೋಜಿಸಲಾಗಿದೆ. ಪ್ರತಿಪಕ್ಷ ನಾಯಕ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಜಿಲ್ಲೆಯಲ್ಲಿ ಈ ಬಾರಿ ಬಿಜೆಪಿಯ ಗೆಲುವಿಗಾಗಿ ತಯಾರಿ ಆರಂಭಿಸಿದ್ದಾರೆ.











Click it and Unblock the Notifications