ಧಾರವಾಡವನ್ನು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮಾಡಲು ಪ್ಲಾನ್, ಅರ್ಜುನರಾಮ್ ಮೇಘವಾಲ್ ಹೇಳಿದ್ದೇನು?
ಕಲೆ, ಸಾಹಿತ್ಯ, ನಾಟಕ, ಚಿತ್ರಕಲೆ, ಲಲಿತಕಲೆ, ಸಂಗೀತದ ತವರೂರು ಧಾರವಾಡ ನಗರವನ್ನು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮಾಡಲು ಕೇಂದ್ರ ಸಂಸ್ಕೃತಿ ಮಂತ್ರಾಲಯ ಸಂಪೂರ್ಣ ಸಹಕಾರ ಮತ್ತು ಅನುದಾನ ನೀಡಲು ಸಿದ್ಧವಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಮತ್ತು ಸಂಸ್ಕೃತಿ ಮಂತ್ರ
ಧಾರವಾಡ, ಫೆಬ್ರವರಿ, 20: ಕಲೆ, ಸಾಹಿತ್ಯ, ನಾಟಕ, ಚಿತ್ರಕಲೆ, ಲಲಿತಕಲೆ, ಸಂಗೀತದ ತವರೂರು ಧಾರವಾಡ ನಗರವನ್ನು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮಾಡಲು ಕೇಂದ್ರ ಸಂಸ್ಕೃತಿ ಮಂತ್ರಾಲಯ ಸಂಪೂರ್ಣ ಸಹಕಾರ ಮತ್ತು ಅನುದಾನ ನೀಡಲು ಸಿದ್ಧವಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಮತ್ತು ಸಂಸ್ಕೃತಿ ಮಂತ್ರಾಲಯದ ರಾಜ್ಯ ಸಚಿವ ಅರ್ಜುನರಾಮ್ ಮೇಘವಾಲ್ ಹೇಳಿದರು.
ಧಾರವಾಡ ಕೋರ್ಟ್ ಸರ್ಕಲ್ ಹತ್ತಿರದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದಲ್ಲಿ ಹಮ್ಮಿಕೊಂಡಿದ್ದ ಕೇಂದ್ರ ಲಲಿತ ಕಲಾ ಅಕಾಡೆಮಿ ಪ್ರಾದೇಶಿಕ ಕಚೇರಿ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಸವಾಯಿ ಗಂಧರ್ವರ ಜನ್ಮ ಶತಮನೋತ್ಸವ ಆಚರಣೆಗೆ ಅಗತ್ಯ ಅನುದಾನ ನೀಡಲಾಗುವುದು. ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಾದೇಶಿಕ ಕಚೇರಿ, ಕೇಂದ್ರ ಸಾಂಸ್ಕೃತಿಕ ಸಂಶೋಧನಾ ಕೇಂದ್ರದ ಕಚೇರಿ ಮತ್ತು ಕೇಂದ್ರ ನಾಟಕ ಅಕಾಡೆಮಿ ಕಚೇರಿಯನ್ನು ಧಾರವಾಡದಲ್ಲಿ ಸ್ಥಾಪಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಪ್ರಸ್ತಾವನೆ ಸಲ್ಲಿಸಿದ್ರೆ 5 ಕೋಟಿ ರೂ. ನೆರವು
ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿಯವರ ಪ್ರಸ್ತಾವನೆಯಂತೆ ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿ ಚುಕ್ಕಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಕುರಿತು ವಸ್ತು ಸಂಗ್ರಹಾಲಯ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಿದರೆ 5 ಕೋಟಿ ರೂ. ನೆರವು ನೀಡಲಾಗುವುದು. ಮತ್ತು ವೀರರಾಣಿ ಕಿತ್ತೂರು ಚನ್ನಮ್ಮ ನಾಟಕವನ್ನು ಧಾರವಾಡ ಜಿಲ್ಲೆಯ ವಿವಿಧ ತಾಲೂಕ ಸ್ಥಳಗಳಲ್ಲಿ ಪ್ರದರ್ಶಿಸಲು ಸುಮಾರು 1.5 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಧಾರವಾಡ ವಿವಿಧ ಕಲೆಗಳ ಬೀಡು
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಮಾತನಾಡಿ, ಧಾರವಾಡ ನಗರ ವಿವಿಧ ಕಲೆಗಳ ಬೀಡಾಗಿದೆ. ಇಲ್ಲಿನ ದಿಗ್ಗಜರು ಕಲೆ, ಸಾಹಿತ್ಯ, ಚಿತ್ರಕಲೆ, ನಾಟಕ ಪರಂಪರೆಯನ್ನು ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ಬೆಳೆಸಿದ್ದಾರೆ. ಹಾಗೆಯೇ ಕೇಂದ್ರ ಲಲಿತ ಕಲಾ ಅಕಾಡೆಮಿ ಜೊತೆಗೆ ಸಂಸ್ಕೃತಿ ಮಂತ್ರಾಲಯದಡಿ ಬರುವ ಕಲೆ, ಸಾಹಿತ್ಯ, ಸಂಗೀತ ಮತ್ತು ಸಂಸ್ಕೃತಿ ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲ ಶಾಲೆಗಳನ್ನು ಧಾರವಾಡದಲ್ಲಿ ಆರಂಭಿಸಲು ವಿನಂತಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ, ಮಹಾಪೌರ ಈರೇಶ ಅಂಚಟಗೇರಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯತ್ ಸಿಇಓ ಡಾ. ಸುರೇಶ್ ಇಟ್ನಾಳ, ಮಹಾನಗರ ಪಾಲಿಕೆ ಆಯುಕ್ತ ಡಾ. ಗೋಪಾಲ ಕೃಷ್ಣ ಬಿ. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications