ಪಕ್ಷಕ್ಕೆ ಸೇರಿಸಿಕೊಳ್ಳಲು ಬಿಜೆಪಿಗೆ ಮುತಾಲಿಕ್ ಗಡುವು
ಹುಬ್ಬಳ್ಳಿ, ಮಾ. 25 : ಬಿಜೆಪಿ ರಾಷ್ಟ್ರೀಯ ನಾಯಕರ ಅವಸರದ ನಿರ್ಣಯಕ್ಕೆ ನಾನು ಬಲಿಪಶುವಾಗಿದ್ದೇನೆ. ಬಿಜೆಪಿ ರಾಷ್ಟ್ರೀಯ ಮುಖಂಡರ ವರ್ತನೆ ನನಗೆ, ನನ್ನ ಕಾರ್ಯಕರ್ತರಿಗೆ ನೋವುಂಟು ಮಾಡಿದೆ ಎಂದು ಹೇಳಿರುವ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಪಕ್ಷಕ್ಕೆ ಸೇರಿಸಿಕೊಳ್ಳುವ ಕುರಿತು ಇಂದು ಬಿಜೆಪಿ ಅಂತಿಮ ನಿರ್ಣಯ ಕೈಗೊಳ್ಳಬೇಕು ಎಂದು ಗಡುವು ನೀಡಿದ್ದಾರೆ.
ಭಾನುವಾರ ಬೆಳಗ್ಗೆ ಬಿಜೆಪಿಗೆ ಸೇರ್ಪಡೆಗೊಂಡು, ಸಂಜೆ ಪಕ್ಷದಿಂದ ಹೊರಬಿದ್ದ ಪ್ರಮೋದ್ ಮುತಾಲಿಕ್, ಸೋಮವಾರ ಸಂಜೆ ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಬಿಜೆಪಿ ರಾಷ್ಟ್ರೀಯ ಮುಖಂಡರ ವರ್ತನೆ ನನಗೆ ನೋವುಂಟು ಮಾಡಿದೆ. ಮಂಗಳವಾರ ಪಕ್ಷಕ್ಕೆ ಸೇರಿಸಿಕೊಳ್ಳುವ ಕುರಿತು ಬಿಜೆಪಿ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದರು. [ಮುತಾಲಿಕ್ ಬಿಜೆಪಿ ಸೇರಿದ್ರು, ಬಿಟ್ರು]

ಸೇನೆಯ ಕಾರ್ಯಕರೊಂದಿಗೆ ಚರ್ಚಿಸಿ ನನ್ನ ಅಂತಿಮ ತೀರ್ಮಾನವನ್ನು ಮಂಗಳವಾರ ಪ್ರಕಟಿಸುತ್ತೇನೆ. ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳಲು ಅವಕಾಶ ನೀಡದಿದ್ದರೆ, ಪಕ್ಷೇತರ ಅಭ್ಯರ್ಥಿಯಾಗಿ ಧಾರವಾಡ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಮುತಾಲಿಕ್ ಹೇಳಿದ್ದಾರೆ. ಪೆಟ್ರೋಲ್ ಬಂಕ್, ಜಮೀನು, ಬ್ಯಾಂಕ್ ಬ್ಯಾಲೆನ್ಸ್, ಜಿ-ಕೆಟಗರಿ ಸೈಟ್ ಗಾಗಿ ನಾನು ರಾಜಕೀಯಕ್ಕೆ ಬರುತ್ತಿಲ್ಲ ಎಂದು ಮುತಾಲಿಕ್ ಸ್ಪಷ್ಟಪಡಿಸಿದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿ]
ಕಣ್ಣೀರಿಟ್ಟ ಮುತಾಲಿಕ್ : ಬಿಜೆಪಿ ರಾಷ್ಟ್ರೀಯ ನಾಯಕರ ಅವಸರದ ನಿರ್ಣಯಕ್ಕೆ ನಾನು ಬಲಿಪಶುವಾಗಿದ್ದೇನೆ ಎಂದು ಹೇಳಿದ ಮುತಾಲಿಕ್, ನನ್ನ ತಂದೆ ಮೃತರಾದಾಗ ಅಂತಿಮ ದರ್ಶನ ಪಡೆಯಲಾಗಲಿಲ್ಲ. ಧರ್ಮ ರಕ್ಷಣೆ ಕಾರ್ಯದಿಂದಾಗಿ ತಮ್ಮನ ಮದುವೆಗೂ ಹೋಗಲಾಗಲಿಲ್ಲ. ನನ್ನ ತಾಯಿ ಅಸ್ವಸ್ಥರಾಗಿದ್ದರೂ ಭೇಟಿ ನೀಡಲಾಗುತ್ತಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟರು.
ಕಳಂಕಿತರಾದ ಯಡಿಯೂರಪ್ಪ ಮತ್ತು ಶ್ರೀರಾಮುಲು ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವಾಗ ರಾಷ್ಟ್ರೀಯ ನಾಯಕರು ಅಡ್ಡಿಯಾಗಿರಲಿಲ್ಲ. ನಾನು ಪಕ್ಷಕ್ಕೆ ಸೇರ್ಪಡೆಗೊಳ್ಳುವಾಗ ಮಾತ್ರ ಏಕೆ ಅಡ್ಡಿಯಾದರು ಎಂದು ನನಗೆ ತಿಳಿದಿಲ್ಲ?. ನನ್ನ ಪ್ರಾಮಾಣಿಕತೆ, ಒಳ್ಳೆಯತನವೇ ಅಡ್ಡಿಯಾಯಿತು ಎನಿಸುತ್ತದೆ ಎಂದು ಮುತಾಲಿಕ್ ಹೇಳಿದರು.
ಇಂದಿನ ಸಭೆಯಲ್ಲಿ ನಿರ್ಧಾರ : ಮಂಗಳವಾರ ಹುಬ್ಬಳ್ಳಿಯಲ್ಲಿ ಅಭಿಮಾನಿಗಳ, ಕಾರ್ಯಕರ್ತರ ಸಭೆಯನ್ನು ಮುತಾಲಿಕ್ ಕರೆದಿದ್ದು, ಅಲ್ಲಿ ಮುಂದಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ಬಿಜೆಪಿ ಅವರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳದಿದ್ದರೆ. ಪಕ್ಷೇತರ ಅಭ್ಯರ್ಥಿಯಾಗಿ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ.












Click it and Unblock the Notifications