ಧಾರವಾಡದ ಬರೋಬ್ಬರಿ 77 ಗ್ರಾಮಗಳಲ್ಲಿ ಜಲ ಕ್ಷಾಮ: ಹನಿ ನೀರಿಗೂ ಜನರ ಸರ್ಕಸ್
ಧಾರವಾಡ ಜುಲೈ 03: ಮಳೆಗಾಲ ಆರಂಭವಾಗಿದ್ದರೂ ಧಾರವಾಡ ಜಿಲ್ಲೆಯ ಜನರಿಗೆ ಕುಡಿಯುವ ನೀರಿನ ಭವಣೆ ಮಾತ್ರ ಕಡಿಮೆಯಾಗಿಲ್ಲ. ಜಿಲ್ಲೆಯ ಬರೋಬ್ಬರಿ 77 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. 4 ಹಳ್ಳಿಗಳಿಗೆ ಟ್ಯಾಂಕರ್ ನೀರು ಆಧಾರವಾಗಿದ್ದು, ಕೆಲವೆಡೆ ಖಾಸಗಿ ಬೋರ್‌ವೆಲ್ ಮೂಲಕ ನೀರು ಪೂರೈಕೆ ಮಾಡಲಾಗಿತ್ತಿದೆ. ಈ ನಡುವೆ ಕೆರೆ ಕಟ್ಟೆಗಳೆಲ್ಲ ಬತ್ತಿ ಮೈದಾನದಂತಾಗಿವೆ.
ಅಂತರ್ಜಲ ಪಾತಾಳಕ್ಕೆ ಇಳಿದು ಬೋರವೆಲ್‌ಗಳು ಕೆಟ್ಟು ನಿಂತಿವೆ. ಕುಡಿಯುವ ನೀರಿಗಾಗಿ ಕಿಲೋ ಮೀಟರ್‌ಗಟ್ಟಲೇ ದೂರ ಕ್ರಮಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಧಾರವಾಡ ಜಿಲ್ಲೆಯ ಬರೋಬ್ಬರಿ 77 ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಊಹೆಗೂ ನಿಲುಕದ ಪರಿಸ್ಥಿತಿ ನಿರ್ಮಾಣವಾಗಿದೆ.

ಮಳೆ ಕೊರತೆಯಿಂದ ಬರ ಎದುರಾಗುತ್ತದೆ ಎಂಬ ಆತಂಕದ ಮಧ್ಯೆಯೇ ಬರದ ಭೀಕರತೆ ಸಾಕ್ಷಿಕರಿಸುವ ದೃಶ್ಯಗಳು ಕಣ್ಣಿಗೆ ರಾಚುತ್ತಿವೆ. ಜಿಲ್ಲೆಯಲ್ಲಿ ಮೇ ಎರಡನೆಯ ವಾರದಲ್ಲೇ ಮಳೆ ಶುರುವಾಗುತ್ತಿತ್ತು. ಆದರೆ ಈ ವರ್ಷ ಮಾತ್ರ ಜುಲೈ ತಿಂಗಳ ಆರಂಭವಾದರೂ ಮಳೆಯಾಗಿಲ್ಲ. ಮಳೆ ಕೊರತೆಯಿಂದ ಶೇ. 10ರಷ್ಟು ಮಾತ್ರ ಬಿತ್ತನೆಯಾಗಿದೆ. ಬಿತ್ತನೆ ಮಾಡಲು ತಂದಿಟ್ಟ ಬೀಜ ಹಾಗೂ ಗೊಬ್ಬರ ಮನೆಯ ಮೂಲೆ ಸೇರಿವೆ.
ಮಳೆ ಇಲ್ಲದ ಕಾರಣ ಕೃಷಿ ಚಟುವಟಿಕೆಗಳೇ ಸ್ಥಗಿತಗೊಂಡು, ಕುಂಟಿ ಕೂರಿಗೆ ಅಟ್ಟದಿಂದ ಇನ್ನೂ ಇಳಿದಿಲ್ಲ. ಯಾವಾಗ ಮಳೆ ಸುರಿಯುತ್ತದೋ ಎಂದು ರೈತರು ಮುಗಿಲು ನೋಡುತ್ತಿದ್ದಾರೆ. ಈ ನಡುವೆ ಜಿಲ್ಲೆಯ 4 ಹಳ್ಳಿಗಳಲ್ಲಂತೂ ಹನಿ ನೀರಿಗೂ ಪರದಾಟ ಎದುರಾಗಿದೆ.
ಕಲಘಟಗಿ ತಾಲೂಕಿನ ಸಂಗಮೇಶ್ವರ, ಕೊಡಗಿ, ಹಸರಂಬಿ ಹಾಗೂ ಕುಂದಗೋಳ ತಾಲೂಕು ಬೆಟದೂರ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಕುಡಿಯುವ ನೀರಿನ ಪರದಾಟದೊಂದಿಗೆ ಇದೀಗ ಹಣ ಖರ್ಚು ಮಾಡಿ ಬೆಳೆಗೆ ಟ್ಯಾಂಕರ್ ಮೂಲಕ ನೀರು ಹಾಕುವ ಸಾಹಸವನ್ನೂ ಕೂಡ ರೈತರು ಮಾಡುತ್ತಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಮಳೆ ಆರಂಭಗೊಂಡು ಮತ್ತೊಂದು ಹಂಗಾಮಿಗೆ ಸಿದ್ಧತೆಯಾಗಬೇಕಿತ್ತು. ಆದರೆ ಜಿಲ್ಲೆಯಲ್ಲಿ ತುಂತುರು ಮಳೆ ಕೂಡ ಸುರಿಯದ ಪರಿಣಾಮ ಬರದ ಭಯ ಸೃಷ್ಟಿಯಾಗಿದೆ. ಆಕಾಶದಲ್ಲಿ ಮೋಡಗಳು ಆವರಿಸುತ್ತಿವೆ, ಆದರೆ ಮಳೆ ಹನಿ ಮಾತ್ರ ಕಾಣುತ್ತಿಲ್ಲ. ಸ್ಥಿತಿ ಹೀಗೆ ಮುಂದುವರಿದರೆ ರೈತರ ಪರಿಸ್ಥಿತಿ ದಯನೀಯವಾಗಲಿದ್ದು, ಹುಬ್ಬಳ್ಳಿ ಧಾರವಾಡ ಅವಳಿ ನಗರದ ಬಹುತೇಕ ಕಡೆಯಲ್ಲಿ ಹನಿ ನೀರಿಗಾಗಿ ಜನರು ಪರದಾಡಬೇಕಾದ ಸ್ಥಿತಿ ಎದುರಾಗಲಿದೆ.
ಒಟ್ಟಿನಲ್ಲಿ ಧಾರವಾಡ ಜಿಲ್ಲೆಯ ಜನರ ದುರಾದೃಷ್ಟವೋ ಏನೋ ಗೊತ್ತಿಲ್ಲ. ಮಳೆಯಾದರೇ ಪ್ರವಾಹ ಭೀತಿ ಎದುರಾಗುತ್ತದೆ. ಮಳೆ ಬರದಿದ್ದರೇ ಕುಡಿಯುವ ಹನಿ ನೀರಿಗೂ ಹಾಹಾಕಾರ ಉಂಟಾಗುತ್ತದೆ. ಈ ಬಗ್ಗೆ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಕಾರ್ಯವನ್ನು ಮಾಡಬೇಕಿದೆ.












Click it and Unblock the Notifications