ಸುದ್ದಿ ವಾಹಿನಿ ಕ್ಯಾಮರಾಮನ್ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ
ದಾವಣಗೆರೆ, ನವೆಂಬರ್ 3: ವರದಿ ಮಾಡಲು ತೆರಳಿದ್ದ ವೇಳೆ ಸುದ್ದಿ ವಾಹಿನಿಯೊಂದರ ಕ್ಯಾಮರಾಮನ್ ಮೇಲಿನ ಹಲ್ಲೆ ಖಂಡಿಸಿ ಹಾಗೂ ಇಂತಹ ಘಟನೆಗಳಿಂದ ಪತ್ರಕರ್ತರ ರಕ್ಷಿಸುವಂತೆ ಆಗ್ರಹಿಸಿ ದಾವಣಗೆರೆ ನಗರದಲ್ಲಿ ಜಿಲ್ಲಾ ವರದಿಗಾರರ ಕೂಟದ ನೇತೃತ್ವದಲ್ಲಿ ಸುದ್ದಿ ಮಾಧ್ಯಮ ಮಿತ್ರರು ಪ್ರತಿಭಟನೆ ನಡೆಸಿದರು.
ಉಪ ವಿಭಾಗಾಧಿಕಾರಿ ಕಚೇರಿ ಬಳಿ ಪ್ರತಿಭಟಿಸಿ, ನಂತರ ಉಪ ವಿಭಾಗಾಧಿಕಾರಿ ಮಮತಾ ಮುಖಾಂತರ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.
ದಾವಣಗೆರೆ ರಾಷ್ಟ್ರೀಯ ಹೆದ್ದಾರಿ ಸಮೀಪದ ಅಕ್ರಮ ಕಲ್ಲು ಗಣಿಗಾರಿಕೆ ವಿಚಾರವಾಗಿ ವರದಿಗೆ ತೆರಳಿದ್ದ ಸುವರ್ಣ ನ್ಯೂಸ್ ಕ್ಯಾಮರಮನ್ ಮೇಲೆ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಪದೇ ಪದೇ ಮಾಧ್ಯಮದವರ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುವ ಘಟನೆಗಳು ದಾವಣಗೆರೆ ಸೇರಿದಂತೆ ರಾಜ್ಯಾದ್ಯಂತ ನಡೆಯುತ್ತಿದ್ದು, ಪತ್ರಕರ್ತರು ನಿರ್ಭೀತಿಯಿಂದ ಕೆಲಸ ಮಾಡಲಾಗದ ವಾತಾವರಣ ಸೃಷ್ಠಿಯಾಗಿದೆ ಎಂದು ಆರೋಪಿಸಿದರು.

ಈ ಹಿನ್ನೆಲೆಯಲ್ಲಿ ಸದರಿ ಕಲ್ಲು ಗಣಿಗಾರಿಕೆ ಬಗ್ಗೆ ಸಮಗ್ರ ತನಿಖೆ ನಡೆಸುವ ಜೊತೆಗೆ ಪತ್ರಕರ್ತರಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಕೂಟದ ಮಾಜಿ ಅಧ್ಯಕ್ಷ ಬಸವರಾಜ್ ದೊಡ್ಮನಿ, ಪವನ್ ಕುಮಾರ್, ಪಿ.ಎಸ್.ಸತೀಶ್, ಲೋಕೇಶ್, ನಾಗರಾಜ್ ಬಡದಾಳ್, ತಾರಾನಾಥ, ವಿನಾಯಕ ಪೂಜಾರ್, ಚೆನ್ನವೀರಯ್ಯ, ವಿಜಯ್ ಜಾಧವ್, ಕಿರಣ್ ಕುಮಾರ್, ಪರಮೇಶ್ ಕುಂದೂರ್, ಯೋಗರಾಜ್, ಬಸವರಾಜ್ ನವಣಿ, ನಿಂಗಪ್ಪ, ಚಂದ್ರಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.












Click it and Unblock the Notifications