ದಾವಣಗೆರೆಯಲ್ಲೂ ಪಾಕಿಸ್ತಾನ ಜಿಂದಾಬಾದ್ ಕೇಳಬೇಕಾ? ಆರ್.ಅಶೋಕ್ ಈ ಮಾತು ಹೇಳಿದ್ಯಾಕೆ?-ಮಾಹಿತಿ
ದಾವಣಗೆರೆ, ಮಾರ್ಚ್, 15: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಒಂದು ರೂಪಾಯಿಯನ್ನು ಬಿಡುಗಡೆ ಮಾಡಿಲ್ಲ. ಇದೊಂದು ಪಾಪರ್, ಗತಿಗೆಟ್ಟ ಸರ್ಕಾರ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದರು. ಹಾಗೆಯೇ ಇದೇ ವೇಳೆ ದಾವಣಗೆರೆಯಲ್ಲೂ ಪಾಕಿಸ್ತಾನ ಜಿಂದಾಬಾದ್ ಕೇಳಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ. ಹಾಗಾದರೆ ಅವರು ಹೀಗೆ ಹೇಳಿದ್ಯಾಕೆ ಎಂದು ಇಲ್ಲಿ ತಿಳಿಯಿರಿ.
ನಗರದ ಪಿ.ಬಿ.ರಸ್ತೆಯ ಅರುಣಾ ಟಾಕೀಸ್ ಮುಂಭಾಗದ ವಾಣಿ ಹೊಂಡ ಹಳೇ ಶೋ ರೂಂ ಆವರಣದಲ್ಲಿ ಏರ್ಪಡಿಸಿದ್ದ ಬಿಜೆಪಿ ಚುನಾವಣಾ ಕಚೇರಿ ಉದ್ಘಾಟನೆ ಹಾಗೂ ಸಂಸದ ಜಿ.ಎಂ.ಸಿದ್ದೇಶ್ವರರ ಹತ್ತು ವರ್ಷಗಳ ಸಾಧನೆಯ ಪರ್ವ ರಿಪೋರ್ಟ್ ಕಾರ್ಡ್ ಬಿಡುಗಡೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರವು ಒಂದು ಲಕ್ಷದ 5 ಸಾವಿರ ಕೋಟಿ ರೂಪಾಯಿ ಸಾಲ ಮಾಡಿದೆ. ಪ್ರತಿ ವ್ಯಕ್ತಿ ಮೇಲೆ 97 ಸಾವಿರ ರೂಪಾಯಿ ಸಾಲ ಹೊರಿಸಲಾಗಿದೆ. ಮುಂದಿನ ದಿನಗಳಲ್ಲಿ 2 ಲಕ್ಷ ರೂಪಾಯಿ ಸಾಲ ಹೊರೆಸಿದರೂ ಅಚ್ಚರಿಯೇನಿಲ್ಲ. ನಾನು ಮುಂದಿನ ಚುನಾವಣೆಯಲ್ಲಿ ನಿಲ್ಲಲ್ಲ ಎಂದಿರುವ ಸಿಎಂ ಸಿದ್ದರಾಮಯ್ಯ ಅವರು ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದಿದ್ದಾರೆ. ಸಾಲ ಮಾಡಿ ಎಲ್ಲರನ್ನೂ ಹಳ್ಳಕ್ಕೆ ತಳ್ಳಿ ಹೋಗಲು ಯೋಜನೆ ಹಾಕಿಕೊಂಡಿದ್ದಾರೆ ಎಂದು ಆರೋಪಿಸಿದರು.
ಅನ್ನಭಾಗ್ಯ ಸಿದ್ದರಾಮಯ್ಯರದ್ದಲ್ಲ, ಮೋದಿ ಕೊಟ್ಟ ಅನ್ನ ಭಾಗ್ಯ. ಒಂದು ಕಾಳು ಅಕ್ಕಿಯೂ ಕರ್ನಾಟಕ ಸರ್ಕಾರದ್ದಲ್ಲ, ಕೇಂದ್ರ ಸರ್ಕಾರ ಕೊಡುತ್ತಿದೆ. ನಯಾಪೈಸೆನೂ ಕಾಂಗ್ರೆಸ್ ಪಕ್ಷ ನೀಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಗ್ಯಾರಂಟಿ ವಿರೋಧಿಗಳಲ್ಲ, ಕಾಂಗ್ರೆಸ್ ಐದಲ್ಲ, ಐವತ್ತು ಕೊಡಲಿ, ಆದ್ರೆ, ಸಾಲ ಮಾಡಿ ಕೊಡುವುದು ಏನಿದೆ? ಬಿಜೆಪಿ ಸರ್ಕಾರ ಇದ್ದಾಗ ಅನುದಾನ ಬಿಡುಗಡೆ ಮಾಡಿದ್ದೇವೆ. ಅಭಿವೃದ್ಧಿಗೆ ಒಂದೇ ಒಂದು ರೂಪಾಯಿ ನೀಡಿಲ್ಲ. ಕಾಂಗ್ರೆಸ್ ಯೋಗ್ಯತೆಗೆ ಜಾನುವಾರುಗಳಿಗೆ ಮೇವು ಕೊಡಲು ಆಗುತ್ತಿಲ್ಲ. ಕುಡಿಯುವ ನೀರು ಒದಗಿಸಲು ಆಗುತ್ತಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ ಸಮೃದ್ಧ ಮಳೆಯಾಗಿದೆ. ಕಾಂಗ್ರೆಸ್ ಬಂದರೆ ಸಾಕು ಬರಗಾಲ ಬಂದುಬಿಡುತ್ತೆ. ಕುಡಿಯಲು ನೀರಿಲ್ಲ, ಬೋರ್ ವೆಲ್‌ಗಳು ಬತ್ತಿವೆ. ಬೋರ್ ವೆಲ್ ಕೊರೆಸುವ ಯೋಗ್ಯತೆಯೂ ಸರ್ಕಾರಕ್ಕಿಲ್ಲ ಎಂದು ಟೀಕಿಸಿದರು.
ಬಿಜೆಪಿ ಸಂವಿಧಾನ ವಿರೋಧಿಗಳು ಎನ್ನುವ ಕಾಂಗ್ರೆಸ್ಸಿಗರು ಅಂಬೇಡ್ಕರ್ ಅವರನ್ನು ಮಹಾರಾಷ್ಟ್ರದಲ್ಲಿ ಸೋಲಿಸಿದವರು ಯಾರು? ಜವಹಾರಲಾಲ್ ನೆಹರೂ ಅಂಬೇಡ್ಕರ್ ಅವರನ್ನು ಸೋಲಿಸುವಂತೆ ಭಾಷಣ ಮಾಡಿದ್ದನ್ನು ಮರೆತಿದ್ದಾರೆ. ಎರಡು ಬಾರಿ ಅಂಬೇಡ್ಕರ್ ಸೋತರು. ರಾಜ್ಯಸಭೆ ಸದಸ್ಯರನ್ನಾಗಿ ಮಾಡಿದ್ದು ನಾವು ಎಂದರು.
ಸಂವಿಧಾನ ಬರೆದ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದೇ ಕಾಂಗ್ರೆಸ್. ನೆಹರೂ, ಇಂದಿರಾ ಗಾಂಧಿ ಅವರ ಸಮಾಧಿ ಇದೆ. ಮಣ್ಣು ಮಾಡಲು ಅಂಬೇಡ್ಕರ್ ಅವರ ಸಮಾಧಿಗೆ ಜಾಗ ಕೊಡಲಿಲ್ಲ. ದಲಿತ ವಿರೋಧಿ ಸರ್ಕಾರ ರಾಜ್ಯದಲ್ಲಿರುವುದು. ಅಂಬೇಡ್ಕರ್ ಅವರ ಸ್ಮಾರಕ ಅಭಿವೃದ್ದಿ ಮಾಡಿದ್ದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಂದು ತಿಳಿಸಿದರು.
ಸಂಜೆ ಆಲ್ಕೋಹಾಲ್, ಬೆಳಗ್ಗೆ ಹಾಲಿನ ದರ ಜಾಸ್ತಿ ಮಾಡಿರುವ ಕಾಂಗ್ರೆಸ್ ಅನ್ನ ಭಾಗ್ಯ, ಗೃಹಲಕ್ಷ್ಮಿ ಸೇರಿದಂತೆ ಯೋಜನೆ ಘೋಷಿಸಿದ್ದರೂ ಸೌಲಭ್ಯ ಸರಿಯಾಗಿ ಸಿಗುತ್ತಿಲ್ಲ. ಬೆಲೆಗಳ ದರ ದುಪ್ಪಟ್ಟಾಗಿದೆ. ಇದೊಂದು ದರಿದ್ರ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಬೆಂಗಳೂರಿನ ವಿಧಾನಸೌಧದಲ್ಲಿಯೇ ಪಾಕಿಸ್ತಾನ ಜಿಂದಾಬಾದ್ ಕೂಗಿದ್ದಾರೆ. ಎಲ್ಲಿಂದಲೋ ಬಂದು ಈ ರೀತಿ ವರ್ತಿಸಿದರೆ ಸುಮ್ಮನಿರಬೇಕಾ? ದಾವಣಗೆರೆಯಲ್ಲಿಯೂ ಪಾಕಿಸ್ತಾನ ಜಿಂದಾಬಾದ್ ಕೂಗಿದರೂ ಅಚ್ಚರಿಯೇನಿಲ್ಲ. ಹಾಗಾಗಿ, ಬಿಜೆಪಿ ಗೆಲ್ಲಿಸಿ, ದೇಶ ಭದ್ರತೆ ಗಟ್ಟಿಗೊಳಿಸಿ. ವಿಧಾನಸೌಧದಲ್ಲಿ ಆದ ಘಟನೆ ದಾವಣಗೆರೆಯಲ್ಲಿ ಆಗಬಾರದು. ಮತ್ತೆ ಗಾಯತ್ರಿ ಸಿದ್ದೇಶ್ವರ ಅವರು ಸಂಸದರಾಗಬೇಕು. ಮೋದಿ ಅವರು ಪ್ರಧಾನಿ ಆಗಬೇಕು. ಎಲ್ಲರೂ ಈ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ನಮ್ಮಲ್ಲಿ ಎಷ್ಟೇ ಗೊಂದಲಗಳಿದ್ದರೂ ಪಕ್ಷ ಮುಖ್ಯ. ದೇವರು ಒಳ್ಳೆಯದು ಮಾಡಲಿ, ದೇಶಕ್ಕೆ ಒಳ್ಳೆಯದು ಮಾಡಲಿ ಎಂದು ಜನರು ಮತ ಹಾಕುತ್ತಿದ್ದರು. ಸಿದ್ದೇಶ್ವರ ಅವರು ಟಿಕೆಟ್ ನೀಡಿಲ್ಲ, ಆ ಶಕ್ತಿಯೂ ಇಲ್ಲ. ನನಗೂ ಆ ಶಕ್ತಿ ಇಲ್ಲ. ನರೇಂದ್ರ ಮೋದಿ, ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರು ಆಯ್ಕೆ ಮಾಡಿದ್ದಾರೆ. ಶೇಕಡಾ 33ರಷ್ಟು ಮಹಿಳೆಯರಿಗೆ ಮೀಸಲಾತಿ ಬಂದೇ ಬರುತ್ತದೆ. ಎಂಎಲ್ಎ, ಎಂಪಿಗೂ ನೀಡಬೇಕು ಎಂದರು.
ದಾವಣಗೆರೆ ಇತಿಹಾಸದಲ್ಲಿ ಮಹಿಳಾ ಎಂಪಿ ಆಗ್ತಾ ಇರೋದು ಗಾಯತ್ರಿ ಸಿದ್ದೇಶ್ವರ ಅವರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ 2 ಕಡೆ ನನ್ನನ್ನು ನಿಲ್ಲಿಸಿದರು. ನಾನು ಚುನಾವಣೆಯಲ್ಲಿ ಪದ್ಮನಾಭನಗರ, ಕನಕಪುರದಲ್ಲಿ ನಿಂತೆ. ನನ್ನ ಶ್ರೀಮತಿಯವರೇ ಚುನಾವಣೆ ಮಾಡಿದ್ದು. ಪದ್ಮನಾಭನಗರದಲ್ಲಿ ನನ್ನ ಪತ್ನಿ ಕೆಲಸ ಮಾಡಿದರು. ಮನೆ ಮನೆಗೆ ಭೇಟಿ ನೀಡಿದ್ರು ಎಂದರು.
ಇನ್ನು ಮನೆಯೊಳಗೆ ಹೋಗಿ ಮಾತನಾಡುವ ಶಕ್ತಿ ಇರುವುದು ಹೆಣ್ಮಕ್ಕಳಿಗೆ ಮಾತ್ರ. ಮಹಿಳೆಗೆ ನರೇಂದ್ರ ಮೋದಿ ಅವರು ಅವಕಾಶ ನೀಡಿದ್ದಾರೆ. ಮತಗಟ್ಟೆಗೆ ಹೋದಾಗ ನಮಗೆ ನರೇಂದ್ರ ಮೋದಿ ಕಾಣಿಸಬೇಕು. ಬೇರೆ ಏನೂ ಕಾಣಿಸಬಾರದು ಎಂದರು. ಇನ್ನು ನಂತರ ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ ಟಿಕೆಟ್ ಘೋಷಣೆ ಬಳಿಕ ಕೆಲವರು ಬೇಸರ ಮಾಡಿಕೊಂಡಿದ್ದಾರೆ. ನಾನು ಎಲ್ಲರ ಜೊತೆ ಮಾತನಾಡುತ್ತೇನೆ, ವಿಶ್ವಾಸಕ್ಕೆ ಪಡೆಯುತ್ತೇನೆ, ಒಂದುಗೂಡಿಸುತ್ತೇನೆ.
ಬಿಜೆಪಿ ಅಭ್ಯರ್ಥಿ ಗೆಲ್ಲಿಸುವ ಮೂಲಕ ನೀವು ಹಾಕುವ ವೋಟು ನರೇಂದ್ರ ಮೋದಿ ಅವರನ್ನು ಪ್ರಧಾನಿ ಆಗುವಂತೆ ಮಾಡುತ್ತದೆ. ಗಾಯತ್ರಿ ಸಿದ್ದೇಶ್ವರ ಅವರೂ ನೀವೇ ಎಂದು ಅತಿ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸಿ ಆಶೀರ್ವಾದ ಮಾಡಿ. ಸೇವೆ ಮಾಡುವ ಅವಕಾಶ ಮಾಡಿಕೊಡಿ. ಜನಸೇವೆ ಮಾಡಲು ಕಲ್ಪಿಸಿಕೊಡಿ ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ದಾವಣಗೆರೆ ಚುನಾವಣಾ ಉಸ್ತುವಾರಿ ಬೈರತಿ ಬಸವರಾಜ್, ಶಾಸಕ ಬಿ.ಪಿ.ಹರೀಶ್, ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ವಿಧಾನ ಪರಿಷತ್ ಮುಖ್ಯ ಸಚೇತಕ ರವಿಕುಮಾರ್, ಮಾಜಿ ಶಾಸಕರಾದ ಹೆಚ್.ಪಿ.ರಾಜೇಶ್, ಎಸ್.ವಿ.ರಾಮಚಂದ್ರಪ್ಪ, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಡಾ.ಜಿ.ಎಸ್.ಅನಿತ್, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಪ್ರಸನ್ನಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್, ಶಿವಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications