ಮೋದಿ ಸ್ವಾಗತಕ್ಕೆ ಮದುವಣಗಿತ್ತಿಯಂತೆ ಸಜ್ಜುಗೊಂಡ ಬೆಣ್ಣೆನಗರಿ: ಪೊಲೀಸ್ ಭದ್ರತೆ ಹೇಗಿದೆ ಎಂದು ತಿಳಿಯಿರಿ
ದಾವಣಗೆರೆ, ಮಾರ್ಚ್, 24: ಮುಂಬರುವ ವಿಧಾನಸಭೆ ಚುನಾವಣೆಗೆ ರಣಕಹಳೆ ಮೊಳಗಿಸಲು ಮಾರ್ಚ್ 25ಕ್ಕೆ ನರೇಂದ್ರ ಮೋದಿಯವರು ದಾವಣಗೆರೆಗೆ ಆಗಮಿಸುತ್ತಿದ್ದು, ಪ್ರಧಾನಿ ಸ್ವಾಗತಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಣ್ಣೆನಗರಿ ತುಂಬಾ ಬಿಜೆಪಿ ಫ್ಲೆಕ್ಸ್, ಬಾವುಟ, ಕೇಸರಿ ಧ್ವಜಗಳು ರಾರಾಜಿಸುತ್ತಿದ್ದು, ನಗರವು ಕೇಸರಿಮಯವಾಗಿದೆ.
ನಗರದ ಜಿಎಂಐಟಿ ಸಮೀಪದ 400ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಶಾಮಿಯಾನ ಹಾಕಲಾಗಿದೆ. 2 ಲಕ್ಷ ಖುರ್ಚಿಗಳನ್ನು ಹಾಕಲಾಗಿದ್ದು, 10 ಲಕ್ಷಕ್ಕೂ ಹೆಚ್ಚಿನ ಜನರು ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುವ ನಿರೀಕ್ಷೆಯಿದೆ. ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಎಂ.ಪಿ. ರೇಣುಕಾಚಾರ್ಯ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಯುವ ಮುಖಂಡ ಶಿವನಗೌಡ ಪಾಟೀಲ್ ಸೇರಿದಂತೆ ಬಿಜೆಪಿ ಮುಖಂಡರು ಸಿದ್ಧತೆಯನ್ನು ಪರಿಶೀಲಿಸಿದರು.

ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರಗಳು ನಗರದೆಲ್ಲೆಡೆ ರಾರಾಜಿಸುತ್ತಿವೆ. ಪಿ.ಬಿ. ರಸ್ತೆ, ಜಯದೇವ ವೃತ್ತ, ಶಾಮನೂರು ರಸ್ತೆ ಸೇರಿದಂತೆ ಎತ್ತ ಕಣ್ಣಾಯಿಸಿದರೂ ಮೋದಿ ಫೋಟೋಗಲೇ ಕಾಣುತ್ತಿವೆ. ಜೊತೆಗೆ ಬಿಜೆಪಿ ಮುಖಂಡರು, ಟಿಕೆಟ್ ಆಕಾಂಕ್ಷಿಗಳು ಸಹ ಫ್ಲೆಕ್ಸ್ ಹಾಕಿದ್ದಾರೆ. ನಗರದಾದ್ಯಂತ ಬಿಜೆಪಿ ಧ್ವಜಗಳನ್ನು ಕಟ್ಟಲಾಗಿದೆ. ಪಿ.ಬಿ. ರಸ್ತೆಯುದ್ದಕ್ಕೂ ಸುಮಾರು ಏಳೆಂಟು ಕಿಲೋ ಮೀಟರ್‌ವರೆಗೆ ಈ ರೀತಿಯ ವಾತಾವರಣ ಕಂಡುಬರುತ್ತಿದೆ.
ಸಜ್ಜುಗೊಂಡ ಬೃಹತ್ ವೇದಿಕೆ
ಜಿಎಂಐಟಿ ಸಮೀಪದಲ್ಲಿರುವ 400ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ದೊಡ್ಡ ಪೆಂಡಾಲ್ ಹಾಕಲಾಗಿದೆ. ವೇದಿಕೆ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಪ್ರಧಾನ ವೇದಿಕೆಯ ಎಡ ಮತ್ತು ಬಲಭಾಗದಲ್ಲಿಯೂ ವೇದಿಕೆ ನಿರ್ಮಾಣ ಕಾರ್ಯ ಮುಗಿದಿದೆ. ಮೋದಿ ಆಗಮನಕ್ಕೆ ಸರ್ವ ರೀತಿಯಲ್ಲಿ ಸನ್ನದ್ಧವಾಗಿರುವ ದಾವಣಗೆರೆಯಲ್ಲಿ ಬಿಜೆಪಿ ಉತ್ಸಾಹವೂ ಹೆಚ್ಚಾಗಿದೆ.

ವೇದಿಕೆಯಲ್ಲಿ 100 ಜನರಿಗೆ ಅವಕಾಶ
ಪ್ರಧಾನಿಯವರೇ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು, ಸಚಿವರು, ಶಾಸಕರು ಇಲ್ಲಿಗೆ ದೌಡಾಯಿಸಿ ಬರುತ್ತಿದ್ದಾರೆ. ಮೋದಿಯವರು ಆಗಮಿಸುವ ವೇದಿಕೆಯಲ್ಲಿ 100 ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಬಹುತೇಕ ನಾಯಕರು ಈ ವೇದಿಕೆಯಲ್ಲಿ ಆಸೀನರಾಗಲಿದ್ದಾರೆ. ಕೇಂದ್ರದ ಕೆಲ ಸಚಿವರು, ಬಿಜೆಪಿ ಮುಖಂಡರು ಕೂಡ ವೇದಿಕೆಯಲ್ಲಿ ಕೂರುವ ಸಾಧ್ಯತೆಯಿದೆ.
ಭಾರಿ ಪೊಲೀಸ್ ಬಿಗಿ ಬಂದೋಬಸ್ತ್
ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆಯಲ್ಲಿ ಖಾಕಿ ಭದ್ರಕೋಟೆ ಕಣ್ಗಾವಲು ಇದೆ. ವೇದಿಕೆ ಮುಂಭಾಗ, ಪ್ರಮುಖ ರಸ್ತೆಗಳಲ್ಲಿ ಹದ್ದಿನ ಕಣ್ಣಿಡಲಾಗಿದೆ. ಕಾರ್ಯಕ್ರಮ ನಡೆಯುವ 2 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಡ್ರೋನ್ ಬಳಕೆ ನಿಷೇಧಿಸಲಾಗಿದೆ. ಮೂವರು ಎಸ್‌ಪಿ, 25ಕ್ಕೂ ಹೆಚ್ಚು ಡಿವೈಎಸ್‌ಪಿಗಳು ಸೇರಿದಂತೆ ಸಾವಿರಾರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಜಿಎಂಐಟಿ ಹೆಲಿಪ್ಯಾಡ್‌ಗೆ ಆಗಮಿಸಲಿರುವ ಮೋದಿ
ಪ್ರಧಾನಿ ನರೇಂದ್ರ ಮೋದಿಯವರು ಶಿವಮೊಗ್ಗ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಅಲ್ಲಿಂದ ದಾವಣಗೆರೆಯ ಜಿಎಂಐಟಿ ಹೆಲಿಪ್ಯಾಡ್‌ಗೆ ಸೇನಾ ಹೆಲಿಕಾಪ್ಟರ್ ಮೂಲಕ ಆಗಮಿಸಲಿದ್ದಾರೆ. ಹೆಲಿಪ್ಯಾಡ್‌ನಿಂದ ಕಾರಿನಲ್ಲಿ ಬರುವ ಮೋದಿಯವರು, ಪೆಂಡಾಲ್ ಹಾಕಿರುವ ಜಾಗದಿಂದ ವಿಶೇಷ ವಾಹನದಲ್ಲಿ ಜನರತ್ತ ಕೈ ಬೀಸುವ ಮೂಲಕ ವೇದಿಕೆಗೆ ಬರಲಿದ್ದಾರೆ.
ಆದರೆ ಕಾರಿನ ಮೂಲಕ ತೆರೆದ ವಾಹನದಲ್ಲಿ ಬರುತ್ತಾರೆಯೋ ಅಥವಾ ಇಲ್ಲವೋ ಎನ್ನುವ ವಿಚಾರ ಬೆಳಗ್ಗೆ ಖಚಿತವಾಗಲಿದೆ. ಎಸ್‌ಎಸ್‌ಜಿ ಅನುಮತಿ ನೀಡಿದರೆ ಈ ಕಾರ್ಯಕ್ರಮ ಇರುತ್ತದೆ. ಇಲ್ಲದಿದ್ದರೆ ನೇರವಾಗಿ ವೇದಿಕೆಗೆ ಬರಲಿರುವ ಮೋದಿಯವರು, ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಕಾರ್ಯಕರ್ತರಲ್ಲಿ ಉತ್ಸಾಹ
ಪ್ರಧಾನಿ ಆಗಮನ ಹಿನ್ನೆಲೆ ಬಿಜೆಪಿಯಲ್ಲಿ ಚುನಾವಣಾ ರಣೋತ್ಸಾಹ ಕಂಡುಬರುತ್ತಿದೆ. ಮೋದಿ ಕಾರ್ಯಕ್ರಮಕ್ಕೆ ದಾವಣಗೆರೆ ಜಿಲ್ಲೆಯಿಂದಲೇ 3 ಲಕ್ಷ ಜನ ಆಗಮಿಸುವ ನಿರೀಕ್ಷೆಯಿದೆ. ಚಿತ್ರದುರ್ಗ, ಶಿವಮೊಗ್ಗ, ಹಾವೇರಿ, ಬಳ್ಳಾರಿ, ಗದಗ, ತುಮಕೂರು ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನರು ಬರಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ಹಿನ್ನೆಲೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಸಿದ್ಧಗೊಡ ವಿವಿಧ ಬಗೆಯ ಅಡುಗೆ
ಒಂದು ಸಾವಿರಕ್ಕೂ ಹೆಚ್ಚು ಬಾಣಸಿಗರು ಉಪಾಹಾರ ಮತ್ತು ಮಧ್ಯಾಹ್ನದ ತಿಂಡಿ ತಿನಿಸು ಮಾಡಲು ಆಗಮಿಸಿದ್ದು, ಎಲ್ಲಾ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. ಬೆಳಗ್ಗೆ ಉಪ್ಪಿಟ್ಟು, ಕೇಸರಿ ಬಾತ್, ಮಧ್ಯಾಹ್ನಕ್ಕೆ ಗೋಧಿ ಪಾಯಸ, ಪಲಾವ್, ಮೊಸರನ್ನಕ್ಕೆ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಹಾಗೆಯೇ ಹತ್ತು ಲಕ್ಷ ಮಜ್ಜಿಗೆ ಪ್ಯಾಕೆಟ್‌ಗಳು, ನೀರಿನ ಬಾಟೆಲ್‌ಗಳ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.












Click it and Unblock the Notifications