ಚಂದ್ರಶೇಖರ್ ಸಾವು ಆತ್ಮಹತ್ಯೆಯೋ, ಕೊಲೆಯೋ?: ಕಾಡಲಾರಂಭಿಸಿವೆ ಹತ್ತಾರು ಪ್ರಶ್ನೆಗಳು
ದಾವಣಗೆರೆ, ನವೆಂಬರ್ 3: ರಾಜ್ಯದ ಬಿಜೆಪಿ ಪ್ರಭಾವಿ ರಾಜಕಾರಣಿ, ಮಾಜಿ ಸಚಿವ, ಹಾಲಿ ಶಾಸಕ ಎಂ. ಪಿ. ರೇಣುಕಾಚಾರ್ಯರ ಸಹೋದರನ ಪುತ್ರನ ಮೃತದೇಹ ಪತ್ತೆಯಾದ ಬಳಿಕ ಹತ್ತು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಅಕ್ಟೋಬರ್ 30ರಂದು ಚಂದ್ರಶೇಖರ್ ತಮ್ಮ ಬಿಳಿಬಣ್ಣ KA17 MA2534 ಕಾರಿನಲ್ಲಿ ಮನೆಯಿಂದ ಹೊರ ಹೋದವರು ಮತ್ತೆ ಹಿಂದಿರುಗಿರಲಿಲ್ಲ. ಇದೀಗ ಗುರುವಾರ ತುಂಗಾ ಕಾಲುವೆಯಲ್ಲಿ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದು, ಮಗನ ಆಗಮನದ ನಿರೀಕ್ಷೆಯಲ್ಲಿದ್ದ ಕುಟುಂಬಸ್ಥರು ಸಾವಿನ ಸುದ್ದಿ ಕೇಳಿ ಆಘಾತಕ್ಕೆ ಒಳಗಾಗಿದ್ದಾರೆ.
ಆದರೆ ಚಂದ್ರಶೇಖರ್ ಕಾರು ನಾಲೆಯಲ್ಲಿ ಪತ್ತೆಯಾಗಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ನಾಲೆಯಲ್ಲಿ ಕಾರು ಅಪಘಾತವಾಗಿ ಬಿದ್ದಿದಿಯೋ? ಇಲ್ಲ ಯಾರಾದರೂ ಚಂದ್ರಶೇಖರ್‌ನನ್ನು ಹತ್ಯೆ ಮಾಡಿ ಆ ಬಳಿಕ ಕಾರು ನಾಲೆಯಲ್ಲಿ ಹೋಗುವಂತೆ ಮಾಡಿದ್ದಾರೆಯೋ? ಇದರ ಹಿಂದೆ ಕಾಣದ ಕೈವಾಡಗಳಿವೆಯಾ? ಕಾರು ನಾಲೆಗೆ ಬಿದ್ದರೂ ಯಾಕೆ ಎಲ್ಲಿಯೂ ಹಾನಿಗೀಡಾಗಿಲ್ಲ? ಅವಶೇಷಗಳು ಒಂದೆಡೆ ಬಿದ್ದಿರುವುದು, ಮತ್ತೊಂದೆಡೆ ಕಾರು ಎಗರಿ ನಾಲೆಯೊಳಗೆ ಬೀಳಲು ಹೇಗೆ ಸಾಧ್ಯ? ಎಂಬುದೂ ಸೇರಿದಂತೆ ಹತ್ತು ಹಲವು ಅನುಮಾನಗಳು ಪೊಲೀಸರನ್ನು ಕಾಡಲಾರಂಭಿಸಿದೆ.

ಚಂದ್ರು ನಾಪತ್ತೆಯ ಬಗ್ಗೆ ಹಲವು ಅನುಮಾನ
ಚಂದ್ರಶೇಖರ್ ಕಳೆದ ಭಾನುವಾರ ಕಾಣೆಯಾದ ನಂತರ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು. ಎಲ್ಲಿ ಹೋಗಿರಬಹು? ಏನಾದ ಎಂಬುದು ಆರಂಭದಲ್ಲಿ ತಿಳಿದಿರಲಿಲ್ಲ. ರೇಣುಕಾಚಾರ್ಯ ಕುಟುಂಬಸ್ಥರು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಆದರೆ ಚಂದ್ರು ನಾಪತ್ತೆ ಬಗ್ಗೆ ಹಲವು ಅನುಮಾನಗಳ ಮೇಲೆ ಅನುಮಾನ ಮೂಡುತ್ತಲೇ ಇದ್ದವು. ಆದರೆ ಇಂದು ಹೊನ್ನಾಳಿ ಸಮೀಪದ ಎಚ್. ಕಡದಕಟ್ಟೆ ಬಳಿಯ ತುಂಗಾ ಮೇಲ್ದಂಡೆ ನಾಲೆಯೊಳಗೆ ಬಿದ್ದಿದ್ದ ಕಾರಿನಲ್ಲಿ ಶವ ಪತ್ತೆಯಾಗಿರುವುದು ಅಚ್ಚರಿ ಜೊತೆಗೆ ಆತಂಕಕ್ಕೂ ಕಾರಣವಾಗಿದೆ.

ಕಾರು ನಾಲೆಗೆ ಬಿದ್ದದ್ದನ್ನ ಯಾರ ಗಮನಕ್ಕೆ ಬಂದಿಲ್ಲ?
ಕಳೆದ ನಾಲ್ಕು ದಿನಗಳ ಹಿಂದೆ ಬಿದ್ದಿದ್ದರೂ ಕಾರಿನ ಅವಶೇಷ ಯಾರಿಗೂ ಕಾಣಿಸಿಲ್ಲ. ಜೊತೆಗೆ ಕಾರು ನೀರೊಳಗೆ ಬಿದ್ದಿದ್ದರೆ ಗೊತ್ತಾಗುತಿತ್ತು. ಅಲ್ಲದೇ ಕಾರಿನ ಮುಂಭಾಗದ ಗಾಜು ಒಡೆದಿರುವುದು ಹೇಗೆ? ಜೊತೆಗೆ ಈ ರಸ್ತೆಯಲ್ಲಿ ನಿತ್ಯವೂ ಸಾವಿರಾರು ವಾಹನಗಳು ಓಡಾಡುವುದರಿಂದ ಈ ಕಾರಿನ ಅವಶೇಷಗಳು ಬಿದ್ದಿದ್ದರೂ ಯಾರೂ ಸಹ ಗಮನಿಸಿರಲಿಲ್ಲವಾ? . ಪೊಲೀಸರು ಸಹ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಮೈಸೂರು ಸೇರಿದಂತೆ ಸುಮಾರು ಕಡೆಗಳಲ್ಲಿ ಶೋಧ ನಡೆಸಿದ್ದರು.

ಕಿಡ್ನಾಪ್ ಆರೋಪ ಮಾಡಿದ್ದ ರೇಣುಕಾಚಾರ್ಯ
ಇಷ್ಟೆಲ್ಲಾ ಬೆಳವಣಿಗೆಯ ಮಧ್ಯೆ ರೇಣುಕಾಚಾರ್ಯ ಸಹ ತನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಥಿತಿ ಹೊಂದಿರಲಿಲ್ಲ. ಜೊತೆಗೆ ಆತ ಎಲ್ಲರೊಟ್ಟಿಗೂ ಬೆರೆಯುತ್ತಿದ್ದ. ಆಧ್ಯಾತ್ಮದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ. ಹಾಗಾಗಿ ವಿನಯ್ ಗುರೂಜಿ ಆಶ್ರಮಕ್ಕೆ ಆಗಾಗ್ಗೆ ಹೋಗಿ ಬರುತ್ತಿದ್ದ. ಧ್ಯಾನವನ್ನೂ ಮಾಡುತ್ತಿದ್ದ. ದೈವ ಭಕ್ತಿ ಹೊಂದಿದ್ದ. ಎಲ್ಲರಿಗೂ ಗೌರವ ಕೊಡುತ್ತಿದ್ದ. ಆತನನ್ನು ಯಾರೋ ಕಿಡ್ನಾಪ್ ಮಾಡಿದ್ದಾರೆ ಎಂದು ಮೂಲಕ ಬೆಳಿಗ್ಗೆಯಷ್ಟೇ ಹೇಳಿಕೆ ನೀಡಿದ್ದರು. ಆದರೆ ಸಂಜೆಯಾಗುವ ಹೊತ್ತಿಗೆ ಕಾರು ಪತ್ತೆಯಾಗಿದೆ. ಅದೇ ರೀತಿಯಲ್ಲಿ ಚಂದ್ರಶೇಖರ್ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ.

ಚಿಕ್ಕಮಗಳೂರಿಗೆ ಚಂದ್ರು ಜೊತೆ ಹೋಗಿದ್ಯಾರು?
ಚಂದ್ರಶೇಖರ್ ಸಾವಿನ ಸುತ್ತ ಅನುಮಾನದ ಹುತ್ತ ಕ್ಷಣ ಕಳೆದಂತೆ ಬೆಳೆಯುತ್ತಾ ಹೋಗುತ್ತಿದೆ. ವಿನಯ್ ಗುರೂಜಿ ಆಶ್ರಮಕ್ಕೆಂದು ಹೋಗಿದ್ದ ಚಂದ್ರಶೇಖರ್ ಜೊತೆಗೆ ಗೌರಿಗದ್ದೆಗೆ ಯಾರೆಲ್ಲಾ ಹೋಗಿದ್ದರು? ಕಿರಣ್ ಹೋಗಿದ್ದನಾ? ಕಾರಿನಲ್ಲಿ ಬೇರೆಯವರು ಇದ್ದರಾ? ರೇಣುಕಾಚಾರ್ಯರು ಹೇಳುವ ಪ್ರಕಾರ ಗೌರಿಗದ್ದೆಗೆ ಕ್ರಿಸ್ಟಾ ಕಾರಿನಲ್ಲಿ ಹೋಗಿಲ್ಲ. ಬೇರೆಕಾರಿನಲ್ಲಿ ಹೋಗಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ. ಹಾಗಿದ್ದರೆ ಆ ಕಾರು ಯಾವುದು? ಯಾರು ಜೊತೆಗೆ ಹೋಗಿದ್ದರು. ಆ ಬಳಿಕ ಚಂದ್ರಶೇಖರ್ ತನ್ನ ಕಾರಿನಲ್ಲಿ ಬಂದದ್ದು ಹೇಗೆ ಎಂಬೆಲ್ಲಾ ಪ್ರಶ್ನೆಗಳನ್ನು ಪ್ರಸ್ತಾಪಿಸಿದ್ದರು. ಸಂಜೆಯ ಹೊತ್ತಿಗೆ ಶವ ಸಿಕ್ಕಿದ್ದು, ಕಳೆದ ಐದು ದಿನಗಳಿಂದ ನಡೆದ ವಿದ್ಯಮಾನಗಳು, ಭಾನುವಾರ ರಾತ್ರಿ ಏನಾಯ್ತು ಎಂಬ ಬಗ್ಗೆ ಚರ್ಚೆಯಾಗುತ್ತಿದೆ.
ಚಂದ್ರಶೇಖರ್ ಸೋಮವಾರ ಬೆಳಿಗ್ಗೆ ಬರುವಾಗ ಏನಾದರೂ ಕಾರು ಆಕಸ್ಮಿಕವಾಗಿ ನಾಲೆಗೆ ಬಿತ್ತೋ? ಆತ್ಮಹತ್ಯೆ ಮಾಡಿಕೊಳ್ಳುವ ಸಲುವಾಗಿ ಈ ರೀತಿ ಕಾರಿನಲ್ಲಿ ಕುಳಿತು ಚಂದ್ರಶೇಖರ್ ಕಾರನ್ನು ನಾಲೆಯೊಳಗೆ ನುಗ್ಗಿಸಿದ್ದಾರಾ? ಬೇರೆ ಯಾರಾದರೂ ಹತ್ಯೆ ಮಾಡಿ ಪ್ರಕರಣದ ದಿಕ್ಕು ತಪ್ಪಿಸಲು ಈ ರೀತಿಯಲ್ಲಿ ಸಂಚು ರೂಪಿಸಿದ್ದಾರೆಯೇ? ಎಂಬ ಪ್ರಶ್ನೆಗಳು ಕಾಡಲಾರಂಭಿಸಿವೆ. ಪೊಲೀಸರು ಈ ಎಲ್ಲಾ ಆಯಾಮಗಳಲ್ಲಿಯೂ ತನಿಖೆ ಮುಂದುವರಿಸಿದ್ದಾರೆ.












Click it and Unblock the Notifications