ದಾವಣಗೆರೆ-ಚಿತ್ರದುರ್ಗ-ಬೆಂಗಳೂರು ರೈಲು ಮಾರ್ಗ ಪೂರ್ಣ ಯಾವಾಗ?; ಇಲ್ಲಿದೆ ಮಾಹಿತಿ
ದಾವಣಗೆರೆ, ಏಪ್ರಿಲ್, 20: ರಾಜ್ಯದಲ್ಲಿ ರೈಲ್ವೆ ವಿಭಾಗದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಲೇ ಇವೆ. ದಾವಣಗೆರೆ-ಚಿತ್ರದುರ್ಗ-ಬೆಂಗಳೂರು ನೇರ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಯಾವಾಗ ಪೂರ್ಣಗೊಳ್ಳಲಿದೆ ಎಂದು ಸಂಸದ ಗೋವಿಂದ ಕಾರಜೋಳ ಅಪ್ಡೇಟ್ ಮಾಹಿತಿಯೊಂದನ್ನು ನೀಡಿದ್ದಾರೆ.
ದಾವಣಗೆರೆ-ಚಿತ್ರದುರ್ಗ-ಬೆಂಗಳೂರು ನೇರ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಯಾವಾಗ 2027ರ ಒಳಗೆ ಪೂರ್ಣಗೊಳ್ಳಲಿದೆ ಎಂದುಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ.

ಅರೇಹಳ್ಳಿ ರೈಲು ನಿಲ್ದಾಣದಲ್ಲಿ ಬೆಂಗಳೂರು-ಹೊಸಪೇಟೆ ರೈಲು ನಿಲುಗಡೆ ಚಾಲನೆ ನೀಡಿ ಅವರು ಮಾತನಾಡಿದರು. ದಾವಣಗೆರೆ-ತುಮಕೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ನೇರ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಚುರುಕಿನಿಂದ ನಡೆಯುತ್ತಿದೆ. ಆದರೆ, ಚಿತ್ರದುರ್ಗ ಭಾಗದಲ್ಲಿ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ ಎಂದರು.
ರೈಲು ಮಾರ್ಗ ನಿರ್ಮಿಸಲು ಭೂಮಿ ಸ್ವಾಧೀನ ಮಾಡಿಕೊಡುವ ಜವಾಬ್ದಾರಿ ರಾಜ್ಯ ಸರ್ಕಾರದ್ದಾರೆ. ಭೂ ಸ್ವಾಧೀನ ಪ್ರಕ್ರಿಯೆ ವಿಳಂಬ ಆಗುತ್ತಿದೆ. ಶೀಘ್ರವಾಗಿ ಭೂ ಸ್ವಾಧೀನ ಪ್ರಕ್ರಿಯೆ ಮುಗಿಸಲು ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದರು.
ಅವೈಜ್ಞಾನಿಕ ಸೇತುವೆಗಳಿಂದ ಜನ ಕಂಗಾಲು: ಮತ್ತೊಂದೆಡೆ ಗದಗ-ವಾಡಿ ರೈಲು ಮಾರ್ಗದಲ್ಲಿ ಮೇ 10ಕ್ಕೆ ಕುಷ್ಟಗಿಯಿಂದ ಹುಬ್ಬಳ್ಳಿಗೆ ರೈಲು ಓಡಾಟ ಆರಂಭ ಆಗಲಿದೆ. ಇದು ಕುಷ್ಟಗಿ, ಯಲಬುರ್ಗಾ, ಕುಕನೂರು ತಾಲೂಕಿನ ಜನರಿಗೆ ಹರ್ಷ ಉಂಟುಮಾಡಿದೆ. ಆದರೆ, ಇದೇ ರೈಲು ಮಾರ್ಗಕ್ಕೆ ನಿರ್ಮಿಸಿದ ಅವೈಜ್ಞಾನಿಕ ಸೇತುವೆಗಳಿಂದ ಅನೇಕ ಗ್ರಾಮಗಳ ಜನರು ರಸ್ತೆ ಸಂಚಾರಕ್ಕೆ ಪರದಾಡುವಂತಾಗಿದೆ.
ವಾಹನ ಸವಾರರ ಪರದಾಟ: ತಳಕಲ್ಲಿನಿಂದ ಕುಷ್ಟಗಿಯವರೆಗೂ ಸುಮಾರು 54 ಕಿಲೋ ಮೀಟರ್ ದೂರದ ರೈಲು ಮಾರ್ಗ ಸಂಚಾರಕ್ಕೆ ಸನ್ನದ್ದಗೊಂಡಿದೆ. ಈ ರೈಲು ಮಾರ್ಗದಲ್ಲಿ ಇಟಗಿ, ಕುಕನೂರು, ದ್ಯಾಂಪೂರ, ಯಲಬುರ್ಗಾ ಸೇರಿ ಹಲವು ಕಡೆ ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ. ಈ ಸೇತುವೆಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಿದ್ದರಿಂದ ವಾಹನ ಸವಾರರು ಪರದಾಡುವಂತಾಗಿದೆ.
ಸದಾ ನೀರು ನಿಲ್ಲುವ ಸೇತುವೆಗಳ ತಿರುವುಗಳೂ ಸಹ ಅವೈಜ್ಞಾನಿಕವಾಗಿವೆ. ಇದರಿಂದಾಗಿ ಮಳೆಗಾಲದಲ್ಲಿ ಸುಮಾರು 20 ಗ್ರಾಮಗಳ ಜನರಿಗೆ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ರೈಲು ಓಡಾಟ ಆರಂಭ ಹಾಗೂ ಈ ಮಳೆಗಾಲದ ಮುನ್ನ ಸೇತುವೆಗಳಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸಿ, ರಸ್ತೆ ಸಂಚಾರ ಸುಗಮಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಗೊರ್ಲೆಕೊಪ್ಪ ಗ್ರಾಮಸ್ಥ ನರೇಂದ್ರ ಈ ಬಗ್ಗೆ ಮಾತನಾಡಿ, ನಮಗೆ ಇಲ್ಲಿ ಸಂಚರಿಸುವುದಕ್ಕೆ ಆಗುತ್ತಿಲ್ಲ. ಮಳೆ ಬಂದಾಗ ದೊಡ್ಡ ಸಮಸ್ಯೆ ಆಗುತ್ತದೆ. ರೈಲು ಮಾರ್ಗ ಮಾಡಿರುವುದು ಬಹಳ ಉಪಯೋಗ ಆಗಿದೆ. ಆದರೆ ಇಂತಹ ಸಣ್ಣಪುಟ್ಟ ಕೆಲಸ ಮಾಡಿರುವುದರಿಂದಾಗಿ ಸಾರ್ವಜನಿಕರಿಗೆ ಸಂಚರಿಸಲು ಕಷ್ಟಕರವಾಗಿದೆ. ಸೇತುವೆಗಳಲ್ಲಿ ನೀರು ನಿಲ್ಲುತ್ತಿದ್ದು, ಇಲ್ಲಿ ತಾತ್ಕಾಲಿಕವಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಮಾತನಾಡಿ,
ಯಲಬುರ್ಗಾ-ಕುಕನೂರು ತಾಲೂಕಿನ ನಾಲ್ಕೈದು ಸೇತುವೆಗಳಲ್ಲಿ ನೀರು ನಿಲ್ಲುವುದು ನಿಜ. ಕಾಮಗಾರಿಯಲ್ಲಿ ಲೋಪವಾಗಿರುವುದು ನಮ್ಮ ಗಮನಕ್ಕೂ ಬಂದಿದೆ. ಈ ಕುರಿತು ಸಮೀಕ್ಷೆ ಮಾಡಿ ಆಗಿರುವ ಲೋಪಗಳನ್ನು ಆದಷ್ಟು ಬೇಗ ಸರಿಪಡಿಸಬೇಕೆಂದು ರೈಲ್ವೆ ಇಲಾಖೆಗೆ ಸೂಚಿಸಲಾಗಿದೆ ಎಂದರು.












Click it and Unblock the Notifications