ಸಂಕಷ್ಟದಲ್ಲಿ ಕಾಫಿ, ಟೀ ಉದ್ಯಮ: 2 ಕೋಟಿಯೂ ದಾಟುತ್ತಿಲ್ಲ ವರ್ಷದ ವಹಿವಾಟು, ಸಮಸ್ಯೆ ಏನು?
ದಾವಣಗೆರೆ, ಜೂನ್ 30: ಕಾಫಿ, ಟೀ ಅಂದರೆ ಯಾರು ಕುಡಿಯುವುದಿಲ್ಲ. ಬಹುತೇಕ ಮಂದಿ ಸೇವಿಸುತ್ತಾರೆ. ಕೆಲವರಂತೂ ಬೆಳಿಗ್ಗೆಯಿಂದ ರಾತ್ರಿಯವರೆಗೆ ಬೇಕೇ ಬೇಕು. ಕೆಲವರಂತೂ ಗಂಟೆಗೊಮ್ಮೆ ಕಾಫಿ, ಟೀ ಸೇವಿಸುತ್ತಾರೆ. ಟೆನ್ಷನ್ ರಿಲೀಫ್‌ಗಾಗಿ ಕಾಫಿ, ಟೀ ಆಗಾಗ್ಗೆ ಕುಡಿಯುತ್ತಿರುತ್ತಾರೆ. ಬೆಂಗಳೂರು ಹೊರತುಪಡಿಸಿದರೆ ಅತಿ ಹೆಚ್ಚು ಟೀ, ಕಾಫಿ ಸೇವನೆ ಮಾಡುವುದು ದಾವಣಗೆರೆ ಜಿಲ್ಲೆಯಲ್ಲಿ.
ಅಂದಾಜಿನ ಪ್ರಕಾರ ಕಳೆದ 20 ವರ್ಷಗಳ ಹಿಂದೆ ದಾವಣಗೆರೆ ಜಿಲ್ಲೆಯೊಂದರಲ್ಲಿ ವರ್ಷಕ್ಕೆ 8 ಕೋಟಿ ರೂಪಾಯಿ ವಹಿವಾಟು ನಡೆಯುತಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಸರಿಯಾದ ಪ್ರೋತ್ಸಾಹ ಸಿಗದ ಕಾರಣ ಕೇವಲ 2 ಕೋಟಿ ರೂಪಾಯಿ ವಹಿವಾಟು ದಾಟುತ್ತಿಲ್ಲ. ಆಗ 70 ರೂಪಾಯಿ ಕಾಫಿ, ಟೀ ಪುಡಿ ಕೆಜಿಗಿತ್ತು. ಇಂದು 600 ರೂಪಾಯಿಯಿಂದ 700 ರೂಪಾಯಿಯವರೆಗೆ ಇದೆ. ಕರ್ನಾಟಕವೇ ಅತಿ ಹೆಚ್ಚು ಕಾಫಿ ಬೆಳೆಯುವುದರಲ್ಲಿ ಪ್ರಸಿದ್ಧಿ. ಬೇರೆ ಕಡೆಗಳಿಗೂ ರಫ್ತು ಮಾಡಲಾಗುತ್ತದೆ.

ಮೊದಲೆಲ್ಲಾ ವ್ಯಾಪಾರವೂ ಚೆನ್ನಾಗಿತ್ತು. ಜನರು ಹೆಚ್ಚಾಗಿ ಟೀ, ಕಾಫಿ ಸೇವಿಸುತ್ತಿದ್ದರು. ಬಹುರಾಷ್ಟ್ರೀಯ ಕಂಪೆನಿಗಳ ಕಾಫಿ, ಟೀ ಪುಡಿ, ಈ ಕ್ಷೇತ್ರಕ್ಕೆ ಕಾಲಿಟ್ಟರೂ ಸಮಸ್ಯೆ ಆಗುತ್ತಿದ್ದದ್ದು ಕೇವಲ ಶೇಕಡಾ 3ರಿಂದ 5ರಷ್ಟು ಮಾತ್ರ. ಆದರೆ ಈಗೀಗಂತೂ
ವ್ಯಾಪಾರೋದ್ಯಮ ಸಂಕಷ್ಟಕ್ಕೆ ಸಿಲುಕಿದೆ.
ಬೆಂಗಳೂರಿನಲ್ಲಿ ಅತಿ ಹೆಚ್ಚು ಟೀ, ಕಾಫಿ ಸೇವನೆ ಮಾಡುತ್ತಾರೆ. ಅಲ್ಲಿನ ಜನಸಂಖ್ಯೆಯೂ ಹೆಚ್ಚಿದೆ. ಆದರೆ ಬೆಂಗಳೂರು ಹೊರತುಪಡಿಸಿದರೆ ದಾವಣಗೆರೆಯಲ್ಲಿಯೇ ಅತಿ ಹೆಚ್ಚು ಟೀ, ಕಾಫಿ ಸೇವನೆ ಮಾಡುತ್ತಾರೆ. ವ್ಯಾಪಾರವೂ ಸಹ ಇಲ್ಲಿ ಬಿಟ್ಟರೆ ಬೇರೆ ಜಿಲ್ಲೆಗಳಲ್ಲಿ ಹೇಳಿಕೊಳ್ಳುವಂಥ ವ್ಯಾಪಾರ ಈಗ ಆಗುತ್ತಿಲ್ಲ.

ಕಾಫಿ, ಟೀ ಉದ್ಯಮದಲ್ಲಿ ಆಗುತ್ತಿರುವ ಸಮಸ್ಯೆ ಏನು?
ಕಾಫಿ ಪುಡಿ ಬೆಲೆ ಗಗನಕ್ಕೆ ಏರಿದೆ. ಈ ಕುರಿತು ಕೇಂದ್ರ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಡಿರುವ ಕರ್ನಾಟಕ ರಾಜ್ಯ ಕಾಫಿ ಮಂಡಳಿಯ ಗಮನಕ್ಕೆ ತರಲಾಗಿದೆ. ಆದರೆ, ಸೂಕ್ತ ನಿರ್ಧಾರ ತೆಗೆದುಕೊಳ್ಳದ ಕಾರಣ ಸಂಕಷ್ಟ ದಿನೇ ದಿನೇ ಹೆಚ್ಚಾಗುತ್ತಿದೆ. ಕೂಡಲೇ ಮಧ್ಯ ಪ್ರವೇಶಿಸಿ ಕಾಫಿ ವರ್ತಕರ ಹಿತ ಕಾಯಬೇಕು ಎನ್ನುವುದು ದಾವಣಗೆರೆ ಜಿಲ್ಲಾ ಕಾಫಿ ಮತ್ತು ಟೀ ವರ್ತಕರ ಸಂಘದ ಅಧ್ಯಕ್ಷ ಸಿ.ಎ.ಶಿವರಾಂ ಆಗ್ರಹವಾಗಿದೆ.
ಗ್ರಾಹಕರಿಗೆ ಇಂದಿನ ದರದಲ್ಲಿ ಕಾಫಿ ಖರೀದಿಸಿ ಕಾಫಿ ಸವಿಯಲು ಸಾಧ್ಯವಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಕಲಬೆರಕೆ ಕಾಫಿಯು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ಇದರ ದುಷ್ಪರಿಣಾಮದಿಂದಾಗಿ ಕಾಫಿ ಕುಡಿಯುವವರ ಸಂಖ್ಯೆ ತುಂಬಾ ಕ್ಷೀಣಿಸುತ್ತದೆ, ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಈ ಕೂಡಲೇ ಕಾಫಿ ಮಂಡಳಿ ಸೂಕ್ತ ಕ್ರಮಕೈಗೊಳ್ಳಲು ಮುಂದಾಗಬೇಕು.
ಇಂದಿನ ಅಂತರರಾಷ್ಟ್ರೀಯ ಕಾಫಿ ಮಾರುಕಟ್ಟೆಯಲ್ಲಿ ಧಾರಣೆಗಳು ವಿಪರೀತವಾಗಿ ಏರಿಕೆಯಾಗಿದೆ. ಇದರಿಂದ ಕೇವಲ ಕಾಫಿ ಬೆಳೆಗಾರರಿಗೆ ಮತ್ತು ಕಾಫಿ ರಫ್ತುದಾರರಿಗೆ ಮಾತ್ರ ಅನುಕೂಲವಾಗಿದೆ. ಈ ಸಂಬಂಧ ಆಂತರಿಕ ಮಾರುಕಟ್ಟೆಯಲ್ಲಿ ಬೇಡಿಕೆಯು ಗಣನೀಯವಾಗಿ ಕುಸಿದ ಕಾರಣ ಸಣ್ಣ ಕಾಫಿ ವರ್ತಕರು ಮತ್ತು ರೋಸ್ಮರ್ಸ್ ಗಳು ಗಣನೀಯವಾಗಿ ನಷ್ಟ ಅನುಭವಿಸುತ್ತಿದ್ದು, ಸರ್ಕಾರವು ಈ ಬಗ್ಗೆ ಗಮನ ಹರಿಸಬೇಕು ಎಂಬ ಒತ್ತಾಯವೂ ಕೇಳಿ ಬರುತ್ತಿದೆ.
ರಾಜ್ಯದಲ್ಲಿ ಬೆಳೆಯುವ ಕಾಫಿ ಪ್ರಮಾಣದಲ್ಲಿ ಶೇಕಡಾ 10ರಷ್ಟು ಮಾತ್ರ ಆಂತರಿಕ ಮಾರುಕಟ್ಟೆಯಲ್ಲಿ ಬಳಕೆಯಾಗುತ್ತಿದೆ. ಈ ಕಾರಣದಿಂದಾಗಿ ದಿನದಿಂದ ದಿನಕ್ಕೆ ಕಾಫಿ ಮಾರಾಟಗಾರರು ನಶಿಸಿದ್ದಾರೆ. ಈ ಹಿಂದೆ ದಾವಣಗೆರೆಯಲ್ಲಿ ಸುಮಾರು 34 ಕಾಫಿ ವರ್ತಕರಿದ್ದರು. ಆದ್ರೆ, ಇಂದು ಕೇವಲ ಬೆರಳಣಿಕೆಯನ್ನು ಉಳಿದಿದ್ದಾರೆ. ಇದೇ ರೀತಿ ಸಂಪೂರ್ಣ ರಾಜ್ಯದಲ್ಲಿ ಸಂಪೂರ್ಣವಾಗಿ ಕರ್ನಾಟಕದಲ್ಲಿ ಕಡಿಮೆ ಪ್ರಮಾಣಕ್ಕೆ ಇಳಿದಿದ್ದಾರೆ. ಇದೇ ರೀತಿ ಮುಂದುವರಿದರೆ ಕಲಬೆರಕೆ ಕಾಫಿ, ಟೀ ಪುಡಿ ಹೆಚ್ಚಾಗುತ್ತದೆ. ಗುಣಮಟ್ಟದ್ದು ಸಿಗುವುದು ತುಂಬಾನೇ ಕಡಿಮೆ ಆಗುತ್ತದೆ ಎಂಬ ಆತಂಕ ಕಾಫಿ, ಟೀ ವರ್ತಕರದ್ದು.
ಬೆಲೆ ಏರಿಕೆಯಿಂದಾಗಿ ಆಗುತ್ತಿರುವ ನಷ್ಟಕ್ಕೆ ಯಾವುದೇ ರೀತಿಯ ಪರಿಹಾರ ಸಿಗುತ್ತಿಲ್ಲ. ನಮ್ಮ ವ್ಯಾಪಾರಗಳನ್ನು ಉಳಿಸಿಕೊಳ್ಳಲು ನಷ್ಟದಲ್ಲೇ ವ್ಯವಹಾರ ಮಾಡುತ್ತಿದ್ದೇವೆ. ಲೈಸನ್ಸ್, ವಿದ್ಯುಚ್ಛಕ್ತಿ ಬೆಲೆ ಏರಿಕೆ, ಕಾರ್ಮಿಕರ ನಿರ್ವಹಣಾ ವಚ್ಚದ ಜೊತೆಗೆ ತಯಾರಿಕ ವೆಚ್ಚವು ಹೆಚ್ಚಾಗುತ್ತಾ ಬಂದಿದೆ. ಇದರಿಂದಾಗಿ ವ್ಯವಹಾರ ನಿರ್ವಹಿಸುವುದೇ ಕಷ್ಟವಾಗಿದೆ ಎಂದು ಶಿವರಾಂ ವಿವರಿಸಿದ್ದಾರೆ.
ಈ ಹಿಂದೆ ಇದ್ದ ಕಾಫಿ ಮಂಡಳಿಯು ಆಂತರಿಕ ಬಳಕೆಗಾಗಿ ನಿಯಮಿತವಾಗಿ ನಿಗದಿತ ಬೆಲೆಗೆ ಕಾಫಿಯನ್ನು ಆಂತರಿಕ ಮಾರುಕಟ್ಟೆಗೆ ಪೂರೈಕೆ ಮಾಡುತ್ತಿತ್ತು. ಅಲ್ಲದೇ ನಿಯಂತ್ರಣ ಮಾಡುತ್ತಿತ್ತು. ಈಗ ಈ ವಿಧಾನವು ಇರುವುದಿಲ್ಲ. ಈ ಕಾರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಬಗ್ಗೆ ಗಮನಹರಿಸಿ ನಮಗೆ ಸೂಕ್ತ ನ್ಯಾಯ ಒದಗಿಸಿಕೊಡಬೇಕು ಎಂಬ ಒತ್ತಾಯ ನಮ್ಮದು ಎಂದಿದ್ದಾರೆ.












Click it and Unblock the Notifications