ಕಾರ್ಯಕರ್ತರ ಅಭಿಪ್ರಾಯದ ಮೇರೆಗೆ ಬಿಜೆಪಿ ಟಿಕೆಟ್ ಹಂಚಿಕೆ- ಶೋಭಾ ಕರಂದ್ಲಾಜೆ
ದಾವಣಗೆರೆ, ಮಾರ್ಚ್ 31: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗುತ್ತದೆ ಎಂಬ ವಿಶ್ವಾಸ ಇದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಇನ್ನೊಂದು ಶಕ್ತಿಯನ್ನು ರಾಜ್ಯದ ಜನತೆ ನೀಡುತ್ತಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಹಿರಿಯರ ಅಪೇಕ್ಷೆ ಮೇರೆಗೆ ಕಾರ್ಯಕರ್ತರ ಅಭಿಪ್ರಾಯ ಕೇಳಿ ಟಿಕೆಟ್ ಹಂಚಿಕೆ ಮಾಡಬೇಕೆಂಬ ನಿರ್ಧಾರಕ್ಕೆ ಬರಲಾಗಿದೆ. ಬೂತ್ ಮೇಲ್ಪಟ್ಟ ಪದಾಧಿಕಾರಿಗಳು, ಕಾರ್ಯಕರ್ತರು ಅಭಿಪ್ರಾಯ ತಿಳಿಸಲು ಅವಕಾಶ ನೀಡಿದ್ದೇವೆ. ಜನಪರವಾದ ಕೆಲಸ ಮಾಡಿದವರಿಗೆ ಟಿಕೆಟ್ ಸಿಗುತ್ತೆ. ಕೇಂದ್ರದ ನಾಯಕರು ಇದಕ್ಕೆ ಸಮ್ಮತಿ ಕೊಡುತ್ತಾರೆ ಎಂಬ ವಿಶ್ವಾಸ ಇದೆ ಎಂದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎಲ್ಲೆ ಪ್ರವಾಸ ಮಾಡಿದರೂ ಡಬಲ್ ಎಂಜಿನ್ ಸರ್ಕಾರದ ಸಾಧನೆ ಬಗ್ಗೆ ಮಾತನಾಡುತ್ತಾರೆ. ದೇಶದ ರಕ್ಷಣೆ, ವಿದೇಶಗಳಲ್ಲಿ ಗೌರವ ಸಿಗಲು ಎರಡೂ ಕಡೆ ಬಿಜೆಪಿ ಸರ್ಕಾರ ಇರಬೇಕು. ಇಲ್ಲಿ ಮಾಡಿರುವ ಕೆಲಸಗಳೇ ನಮಗೆ ಶ್ರೀರಕ್ಷೆ ಎಂದು ತಿಳಿಸಿದರು.
ಪಕ್ಷಕ್ಕೆ ಕಾರ್ಯಕರ್ತರೇ ಶಕ್ತಿ
ಪ್ರಜಾತಂತ್ರ, ಪ್ರಜಾಪ್ರಭುತ್ವದಡಿ ನಡೆಯುವ ಪಕ್ಷ ಅಂದರೆ ಬಿಜೆಪಿ. ಬೂತ್ ಪ್ರಮುಖರು, ಶಕ್ತಿ ಕೇಂದ್ರ, ಪೇಜ್ ಪ್ರಮುಖರು, ಜಿ. ಪಂ. ಮಟ್ಟ, ಜಿಲ್ಲೆಗಳ ಟೀಂಗಳನ್ನು ಕೇವಲ ಚುನಾವಣೆಗಾಗಿ ಮಾಡುವುದಿಲ್ಲ. ವರ್ಷಪೂರ್ತಿ ಕೆಲಸ ಮಾಡುತ್ತವೆ. ಸರ್ಕಾರ ಇದ್ದಾಗ ಸಾಧನೆಗಳನ್ನು ಜನರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಿಕೊಂಡು ಬಂದಿವೆ. ಅಧಿಕಾರ ಇಲ್ಲದ ಸಂದರ್ಭದಲ್ಲಿ ಜನರ ಧ್ವನಿಯಾಗಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಪಕ್ಷಕ್ಕೆ ಕಾರ್ಯಕರ್ತರೇ ಶಕ್ತಿ ಎಂದರು.

ಧರ್ಮದ ಆಧಾರದಲ್ಲಿ ಮೀಸಲಾತಿ ಕೊಡಬಾರದು
ಮೀಸಲಾತಿ ಸಂಬಂಧ ಕಳೆದ 30 ವರ್ಷದಿಂದ ಪರಿಶಿಷ್ಟ ಜಾತಿ, ಪಂಗಡದವರು ಹೋರಾಟ ಮಾಡಿಕೊಂಡು ಬಂದಿದ್ದಾರೆ. ಅಲ್ಪಸಂಖ್ಯಾತರ ಓಲೈಕೆಗಾಗಿ ಧರ್ಮದ ಆಧಾರದ ಮೇಲೆ ಮುಸ್ಲಿಂರಿಗೆ ಹೆಚ್ಚಿನ ಮೀಸಲಾತಿ ನೀಡಲಾಗಿತ್ತು. ಮೂರು ಪ್ರವರ್ಗಗಳಲ್ಲಿಯೂ ಸೇರಿದ್ದರು. ಸಂವಿಧಾನದ ಪ್ರಕಾರ ಮೀಸಲಾತಿಯನ್ನು ಧರ್ಮದ ಆಧಾರದಲ್ಲಿ ಕೊಡಬಾರದು. ಜಾತಿ ಆಧಾರ, ಹಿಂದುಳಿದವರು, ಸಮಸ್ಯೆ ಆಧರಿಸಿ ಮೀಸಲಾತಿ ನೀಡಬೇಕಿತ್ತು.
ಯಾವ ಮೀಸಲಾತಿಯನ್ನು ಸಂವಿಧಾನ ಬಾಹಿರವಾಗಿ ಕಾಂಗ್ರೆಸ್, ಜೆಡಿಎಸ್ ಅಲ್ಪಸಂಖ್ಯಾತರಿಗೆ ಕೊಟ್ಟದ್ದನ್ನು ನಾವು ತೆಗೆದು ಹಾಕಿದ್ದೇವೆ. ವೀರಶೈವ ಲಿಂಗಾಯತರು, ಒಕ್ಕಲಿಗರಿಗೆ ಮೀಸಲಾತಿ ನೀಡಲಾಗಿದೆ. ಅದೇ ರೀತಿಯಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಹೆಚ್ಚಿಸಬೇಕೆಂಬ ಬೇಡಿಕೆ ಈಡೇರಿಸಲಾಗಿದೆ. ಸಂವಿಧಾನದ ಅಡಿಯಲ್ಲಿಯೇ ಮೀಸಲಾತಿ ನೀಡಲಾಗಿದೆ ಎಂದು ಒಳಮೀಸಲಾತಿಯನ್ನು ಸಮರ್ಥಿಸಿಕೊಂಡರು.

ಲಂಬಾಣಿ, ಕೊರಚ, ಕೊರಮ, ಬೋವಿ ಸಮಾಜಕ್ಕೆ ಈ ಹಿಂದೆ ಸರಿಯಾಗಿ ಮೀಸಲಾತಿ ಸಿಗುತ್ತಿರಲಿಲ್ಲ. ಮೂರು ಜನ ಆಯ್ಕೆಯಾಗಿದ್ದರೆ ಒಬ್ಬರಿಗೆ ಮಾತ್ರ ಸಿಗುತಿತ್ತು. ಒಳಮೀಸಲಾತಿ ತಂದು ಶೇಕಡಾ 4.5ರಷ್ಟು ನೀಡಲಾಗಿದೆ. ಕಾಂಗ್ರೆಸ್ ಸಮಾಜದಲ್ಲಿ ತಪ್ಪು ಸಂದೇಶ ಕೊಡುತ್ತದೆ. ಮೀಸಲಾತಿ ಕಿತ್ತುಕೊಂಡಿದ್ದಾರೆ ಎಂಬ ಆರೋಪ ಸುಳ್ಳು ಮಾಡುತ್ತಿದೆ.
ಈ ಹಿಂದೆ ಲಂಬಾಣಿ, ಬೋವಿ ಜನಾಂಗಕ್ಕೆ ಶೇಕಡಾ 1 ರಷ್ಟು ಮೀಸಲಾತಿ ಸಿಗುತ್ತಿರಲಿಲ್ಲ. ಎಷ್ಟು ಜನರಿಗೆ ಉದ್ಯೋಗ ಸಿಕ್ಕಿದೆ, ವಿದ್ಯಾಭ್ಯಾಸದಲ್ಲಿ ಸಹಾಯ ಆಗಿದೆಯಾ? ಧ್ವನಿ ಇಲ್ಲದ ಸಮುದಾಯಕ್ಕೆ ಧ್ವನಿ ಕೊಡುವ ಕೆಲಸ ನಮ್ಮ ಸರ್ಕಾರ ಮಾಡಿದೆ. ಈ ಹಿಂದೆ ಅಧಿಕಾರ ನಡೆಸಿದವರು ಯಾಕೆ ಧೈರ್ಯ ತೋರಲಿಲ್ಲ ಎಂದು ಪ್ರಶ್ನಿಸಿದರು.
ಬಂಜಾರ, ಬೋವಿ ಜನಾಂಗ ಆತಂಕಕ್ಕೊಳಗಾಗಬಾರದು. ಈ ಹಿಂದೆ ಹೆಚ್ಚಿನ ಶಾಸಕರು, ಶತಕ್ತಿಶಾಲಿಯಿದ್ದ ಸಮಾಜವೇ ಶೇ. 15ರಷ್ಟು ಮೀಸಲಾತಿ ಪಡೆಯುತಿತ್ತು. ಹೆಚ್ಚು ಧ್ವನಿ ಇದ್ದವರ ಪಾಲಾಗುತಿತ್ತು. ಅದನ್ನು ತಪ್ಪಿಸಿದ್ದೇವೆ. ಬೋವಿ, ಕೊರಚ, ಬಂಜಾರ ಸಮಾಜದವರು ಇನ್ನು ಮುಂದೆ ಹೆಚ್ಚಿನ ಮೀಸಲಾತಿ ಸಿಗುತ್ತೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಅಭ್ಯರ್ಥಿಗಳ ಆಯ್ಕೆಗೆ ಮತದಾನ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಏಳು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಮತದಾನ ನಡೆಯಿತು.
ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಚನ್ನಗಿರಿ,ಹೊನ್ನಾಳಿ, ಹರಿಹರ, ಮಾಯಕೊಂಡ, ಜಗಳೂರು ಕ್ಷೇತ್ರಕ್ಕೆ ಸಂಬಂಧಿಸಿದಂತೆ ವೋಟಿಂಗ್ ನಡೆಯಿತು. ದಾವಣಗೆರೆ ಉತ್ತರ ಹಾಗೂ ದಾವಣಗೆರೆ ದಕ್ಷಿಣದಲ್ಲಿ ಹೆಚ್ಚಿನ ಆಕಾಂಕ್ಷಿಗಳಿದ್ದು, ಪ್ರಮುಖ ಮೂವರ ಹೆಸರಿಗೆ ಮತ ಅಥವಾ ಚೀಟಿಯಲ್ಲಿ ಹೆಸರು ಬರೆಯುವ ಮೂಲಕ ಅಭಿಪ್ರಾಯ ಸಂಗ್ರಹಿಸಲಾಯಿತು.
ಮಾಯಕೊಂಡದಲ್ಲಿಯೂ ಹೆಚ್ಚಿನ ಆಕಾಂಕ್ಷಿಗಳಿದ್ದು, ಚನ್ನಗಿರಿಯಲ್ಲಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧಿತರಾಗಿರುವ ಕಾರಣ ಬೇರೆ ಅಭ್ಯರ್ಥಿಗಳು ಹೆಚ್ಚು ಆಸಕ್ತಿ ಹೊಂದಿದ್ದಾರೆ. ಈ ಕ್ಷೇತ್ರದಲ್ಲಿ ಮೂವರ ಹೆಸರು ಸಹ ಇದ್ದವು. ಜಗಳೂರಿನಿಂದ ಎಸ್. ವಿ. ರಾಮಚಂದ್ರ, ಹೊನ್ನಾಳಿಯಿಂದ ಶಾಸಕ ಎಂ. ಪಿ. ರೇಣುಕಾಚಾರ್ಯ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಆದರೂ, ಈ ಕ್ಷೇತ್ರಗಳಲ್ಲಿನ ಅಭಿಪ್ರಾಯವನ್ನೂ ಸಂಗ್ರಹಿಸಲಾಯಿತು.
ದಾವಣಗೆರೆ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಹೆಸರನ್ನು ವಿಧಾನಸಭಾ ಕ್ಷೇತ್ರದ ಶಕ್ತಿ ಕೇಂದ್ರದ ಪ್ರಮುಖರು, ಪ್ರಭಾರಿಗಳು ಮತ ಮಾಡುವ ಮೂಲಕ ಅಭ್ಯರ್ಥಿಗಳ ಆಯ್ಕೆಗೆ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಬಗ್ಗೆ ಮಾತನಾಡಿದ ಶೋಭಾ ಕರಂದ್ಲಾಜೆ , ಯಾರಿಗೆ ಟಿಕೆಟ್ ಸಿಕ್ಕರೂ ಒಟ್ಟಾಗಿ ಕೆಲಸ ಮಾಡಬೇಕು. ಇಲ್ಲಿ ವ್ಯಕ್ತವಾಗಿರುವ ಅಭಿಪ್ರಾಯವನ್ನು ಬಿಜೆಪಿ ಪ್ರಮುಖರಿಗೆ ಕಳುಹಿಸಲಾಗುವುದು. ಸರ್ವೆ, ನಿಮ್ಮ ಅಭಿಪ್ರಾಯ, ಗೆಲ್ಲುವ ಸಾಧ್ಯತೆ ಇರುವ ಅಭ್ಯರ್ಥಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಅಂತಿಮವಾಗಿ ಕೇಂದ್ರದ ಸಂಸದೀಯ ಮಂಡಳಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಯಾರಿಗೆ ಟಿಕೆಟ್ ಘೋಷಣೆಯಾದರೂ ಎಲ್ಲರೂ ಗೆಲುವಿಗೆ ಶ್ರಮಿಸಬೇಕು. ಈ ಬಾರಿಯೂ ಮತ್ತೆ ರಾಜ್ಯದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಶ್ರಮಿಸೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಈ ವೇಳೆ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಎಸ್. ಎ. ರವೀಂದ್ರನಾಥ್, ಎಸ್. ವಿ. ರಾಮಚಂದ್ರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಪ್ರಧಾನ ಕಾರ್ಯದರ್ಶಿ ಜಗದೀಶ್ ಮತ್ತಿತರರು ಹಾಜರಿದ್ದರು.












Click it and Unblock the Notifications