ಡಿ.5ರಂದು ಬಂದ್‌ಗೆ ಕರೆ; ಅಖಿಲ ಭಾರತ ಹಿಂದೂ ಮಹಾಸಭಾ ಬೆಂಬಲ
ದಾವಣಗೆರೆ, ನವೆಂಬರ್ 19: ವೀರಶೈವ- ಲಿಂಗಾಯತ, ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಡಿ.5ರಂದು ಕರೆ ನೀಡಲಾಗಿರುವ ಬಂದ್‌ಗೆ ಅಖಿಲ ಭಾರತ ಹಿಂದೂ ಮಹಾಸಭಾ ಬೆಂಬಲ ವ್ಯಕ್ತಪಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಸಂಘದ ಕಾರ್ಯಾಧ್ಯಕ್ಷ ರಾಜೇಶ್ ಪವಿತ್ರನ್, ರಾಜ್ಯ ಬಿಜೆಪಿ ಸರ್ಕಾರ ಹಿಂದೂ ಧರ್ಮವನ್ನು ಜಾತಿಯ ಹೆಸರಿನಲ್ಲಿ ಒಡೆದು ಆಳುವ ಪಿತೂರಿ ನಡೆಸುತ್ತಿದೆ. ಇದಕ್ಕೆ ಮಹಾಸಭಾ ಅವಕಾಶ ನೀಡುವುದಿಲ್ಲ. ಆಡಳಿತ ಸರ್ಕಾರ ಹಿಂದೂ ಧರ್ಮದ ವಿಭಜನೆ ಹಾಗೂ ಮುಸ್ಲಿಮರ ಓಲೈಕೆ ಮಾಡುತ್ತಿರುವುದು ಖಂಡನೀಯ. ಈ ನೀತಿಗಳು ಬ್ರಿಟಿಷ್ ಹಾಗೂ ಮೊಘಲರಿಗಿಂತ ಅಪಾಯಕಾರಿಯಾಗಿದೆ. ಕೇವಲ ಅಧಿಕಾರದ ಲಾಲಸೆಯಿಂದ ಜಾತಿಗಳ ಮಧ್ಯೆ ವೈಷಮ್ಯ ತಂದಿಟ್ಟು ಸನಾತನ ಹಿಂದೂ ಧರ್ಮವನ್ನು ಒಡೆಯುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬರಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರ ನಿಗಮ ರಚಿಸಿ ರಾಜ್ಯದ ಅಭಿವೃದ್ಧಿಯ ಕಡೆಗೆ ಗಮನ ಹರಿಸುವುದನ್ನು ಬಿಟ್ಟು ಜಾತಿಯ ಆಧಾರದಲ್ಲಿ ಈ ನಿಗಮಗಳನ್ನು ರಚನೆ ಮಾಡಿರುವುದು ಧರ್ಮ ದ್ರೋಹಕ್ಕೆ ಹಿಡಿದ ಕನ್ನಡಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ಈ ನಡೆಯನ್ನು ಖಂಡಿಸಿ ಡಿ.5 ರಂದು ಕರೆ ನೀಡಲಾಗಿರುವ ಬಂದ್ ಗೆ ಹಿಂದೂ ಮಹಾಸಭಾ ಸಂಪೂರ್ಣ ಬೆಂಬಲ ವ್ಯಕ್ತಪಡಿಸಲಿದೆ ಎಂದರು.












Click it and Unblock the Notifications