ದಾವಣಗೆರೆಯಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ
ದಾವಣಗೆರೆ, ಫೆಬ್ರವರಿ, 28: ಸಾಮಾನ್ಯವಾಗಿ ಅವಳಿ ಮಕ್ಕಳಿಗೆ ಜನ್ಮ ನೀಡಿರುವುದನ್ನು ಕೇಳಿರುತ್ತೇವೆ. ಆದರೆ, ಇದೀಗ ವಿಜಯನಗರ ಜಿಲ್ಲೆ, ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ವರ್ಲಹಳ್ಳಿಯ ಮಹಿಳೆಯೊಬ್ಬರು ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆಯ ಚಾಮರಾಜಪೇಟೆಯಲ್ಲಿರುವ ಮಹಿಳೆಯರ ಮಕ್ಕಳ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ವರ್ಲಹಳ್ಳಿಯ ಅನಿತಾ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ. ಎರಡು ಗಂಡು, ಒಂದು ಹೆಣ್ಣು ಮಗು ಜನಿಸಿದ್ದು, ಕುಟುಂಬಸ್ಥರಲ್ಲಿ ಸಂತಸ ಮನೆ ಮಾಡಿದೆ.

ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದು ಇದೇ ಮೊದಲು. ನಾಲ್ಕೈದು ವರ್ಷಗಳಿಂದ ಈ ದಂಪತಿಗೆ ಮಕ್ಕಳು ಆಗಿರಲಿಲ್ಲ. ಇತ್ತೀಚೆಗಷ್ಟೇ ಗರ್ಭ ಧರಿಸಿದ್ದಾಗ ಸ್ಕ್ಯಾನ್ ಮಾಡಲಾಗಿತ್ತು. ಆಗ ಗರ್ಭದಲ್ಲಿ ಮೂರು ಮಕ್ಕಳಿರುವುದು ತಿಳಿದುಬಂದಿತ್ತು. ಈ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದೆವು. ಕಳೆದ ದಿನ ಸಂಜೆ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಹೇಳಿದರು.
ಅಲ್ಲದೆ, ನಾವು ಸಹಜ ಹೆರಿಗೆ ಮಾಡಿಸುವ ಉದ್ದೇಶ ಹೊಂದಿದ್ದೆವು. ಆದರೆ ಒಂದು ಮಗುವಿನ ಪೊರೆ ಒಡೆದು ಹೋಗಿ ಶೌಚ ಮಾಡಿಕೊಂಡಿದ್ದರಿಂದ ಹಿರಿಯ ಪ್ರಸೂತಿ ತಜ್ಞರಿಂದ ಮಾಹಿತಿ ಪಡೆದು, ಸಿಸೇರಿಯನ್ ಮಾಡಿ ಮಕ್ಕಳನ್ನು ಹೊರತೆಗೆದಿದ್ದೇವೆ. ಇದೇ ಮೊದಲ ಬಾರಿ ಇಂತಹ ಕೇಸ್ ನೋಡಿದ್ದೇನೆ ಎಂದು ಡಾ.ಮಹೇಶ್ ಹೇಳಿದ್ದಾರೆ.
ನವಜಾತ ಶಿಶುಗಳು ಆರೋಗ್ಯಕರವಾಗಿದ್ದು, ಉತ್ತಮ ತೂಕ ಹೊಂದಿವೆ. ಒಂದು ಮಗು 1 ಕೆಜಿ 900 ಗ್ರಾಂ, ಎರಡನೇ ಮಗು 1 ಕೆಜಿ 800 ಗ್ರಾಂ, ಮೂರನೇ ಮಗು 1 ಕೆಜಿ 600 ಗ್ರಾಂ ಇದೆ ಎಂದು ತಿಳಿಸಿದರು. ಹಿರಿಯ ಮಕ್ಕಳ ತಜ್ಞೆ ಡಾ.ಸುಧಾ ಪಾಟೀಲ್ ಮಾತನಾಡಿ, ನನದೆ ಇದು 5ನೇ ಅಪರೂಪದ ಘಟನೆಯಾಗಿದೆ. ಮಕ್ಕಳಿಗೆ ಒಳ್ಳೆಯ ಔಷಧ ನೀಡಿದ್ದು, ಆರೋಗ್ಯವಾಗಿವೆ ಎಂದು ಹೇಳಿದರು ಅಂತಾ ಈ ಟಿವಿ ಭಾರತ್ ಕನ್ನಡ ವರದಿ ಮಾಡಿದೆ.
ಅಲ್ಲದೆ, ಮೂರು ಮಕ್ಕಳಿಗೆ ಜನ್ಮ ನೀಡಿದ ತಾಯಿ ಅನಿತಾ ಅವರೂ ಕೂಡ ಆರೋಗ್ಯವಾಗಿದ್ದಾರೆ. ಮಕ್ಕಳು ಚೆನ್ನಾಗಿ ಉಸಿರಾಡುತ್ತಿವೆ. ಸ್ತನ್ಯಪಾನ ಮಾಡಿಸುವಂತೆ ತಾಯಿಗೆ ಧೈರ್ಯ ತುಂಬಿದ್ದೇವೆ. ಅವರಿಗೆ ಮನೆಯವರ ಸಹಕಾರ ಸಂಪೂರ್ಣವಾಗಿದೆ ಎಂದು ಹೇಳಿದರು. ಒಟ್ಟಿನಲ್ಲಿ ವೈದ್ಯರು ಹೇಳುವ ಪ್ರಕಾರ ಇಂತಹ ಪ್ರಕರಣಗಳು ಆಗುವುದು ಅಪರೂಪ. ಹಾಗೂ ಇದು ಅದೃಷ್ಟ ಎಂದು ಹೇಳಿದರೆ ತಪ್ಪಾಗಲಾರದು.












Click it and Unblock the Notifications