ಚಿತ್ರದುರ್ಗ: ಬಿಜೆಪಿ ಬೆಂಬಲಿಸಲು ಕಾಡುಗೊಲ್ಲ ಸಮುದಾಯ ನಿರ್ಧಾರ?-ಕಾರಣ ಏನು?

ಚಿತ್ರದುರ್ಗ, ಏಪ್ರಿಲ್‌, 12: ಕೋಟೆ ನಾಡು ಚಿತ್ರದುರ್ಗದಲ್ಲಿ ದಿನ ಕಳೆದಂತೆ ಲೋಕ ಸಮರದ ಕಾವು ರಂಗೇರುತ್ತಿದೆ. ಮತದಾನಕ್ಕೆ ಕೆಲವು ದಿನಗಳಷ್ಟೇ ಬಾಕಿ ಇದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷದಲ್ಲಿ ಪ್ರಚಾರದ ಕಾವು ಜೋರಾಗಿದೆ. ಇತ್ತ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ನಿರ್ಣಾಯಕ ಮತಗಳನ್ನು ಹೊಂದಿರುವ ಕಾಡುಗೊಲ್ಲರು ಬಿಜೆಪಿ ಬೆಂಬಲಿಸಲು ಚಿಂತನೆಯಲ್ಲಿದ್ದಾರೆ.

ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಡುಗೊಲ್ಲ ಸಮುದಾಯ ನಿರ್ಣಾಯಕ ಮತಗಳನ್ನು ಹೊಂದಿದೆ. ಈ ಬಾರಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿದರೆ ಬುಡಕಟ್ಟು ಕಾಡುಗೊಲ್ಲ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಸಿಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ನಿಟ್ಟಿನಲ್ಲಿ ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ ಹಾಗೂ ತುಮಕೂರು ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಅವರನ್ನು ಬೆಂಬಲಿಸಿ, ಕಾಡುಗೊಲ್ಲರು ಎಸ್ಟಿ ಸದಸ್ಯತ್ವ ಪಡೆಯಲು ತುದಿಗಾಲಲ್ಲಿ ನಿಂತಿದ್ದು, ಚಿತ್ರದುರ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್‌.ಚಂದ್ರಪ್ಪಗೆ ಶಾಕ್ ನೀಡಲಾಗುತ್ತಿದೆ.

Why did Kadulgolla community decide to support BJP In Chitradurga district

ಈಗಾಗಲೇ ಚುನಾವಣೆ ಮುಗಿದ ಬಳಿಕ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಭರವಸೆ ನೀಡಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ, ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಅವರೊಂದಿಗೆ ಮಾಜಿ ಪ್ರಧಾನಿ ದೇವೇಗೌಡ ಅವರು ಮಾತುಕತೆ ನಡೆಸಿದ್ದರು.

ಚುನಾವಣೆ ಪೂರ್ವದಲ್ಲೇ ಮೀಸಲಾತಿ ದೊರೆಯಬೇಕಿತ್ತು. ಆದರೆ ಕಾರಣಾಂತರಗಳಿಂದ ಮೀಸಲಾತಿ ನೀಡಲಾಗಿಲ್ಲ. ಆಗಾಗಿ ಚುನಾವಣೆ ಮುಗಿದ ಮೂರ್ನಾಲ್ಕು ತಿಂಗಳಲ್ಲಿ ಐದಾರು ದಶಕಗಳ ಸಾಮುದಾಯದ ಹೋರಾಟಕ್ಕೆ ನ್ಯಾಯ ಒದಗಿಸಲಾಗುವುದು ಎಂಬ ಮೈತ್ರಿ ಪಕ್ಷದ ನಾಯಕರು ಘಂಟಾಘೋಷವಾಗಿ ಒತ್ತಿ ಹೇಳಿದ್ದಾರೆ.

ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತವಾಗಿದೆ. ಒಂದು ವೇಳೆ ಚಿತ್ರದುರ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್‌.ಚಂದ್ರಪ್ಪ ಅವರನ್ನು ಬೆಂಬಲಿಸಿದರೆ ಪ್ರಯೋಜನವಿಲ್ಲ. ಸಮುದಾಯದ ಅಭಿವೃದ್ಧಿಗೆ ಶೂನ್ಯವಾಗಲಿದೆ ಎನ್ನಬಹುದು. ಮತ್ತೊಂದು ಕಡೆ 2014ರಲ್ಲಿ ಸಮುದಾಯ ಕೈ ಅಭ್ಯರ್ಥಿಯನ್ನು ಬೆಂಬಲಿಸಿತ್ತು. ಆದರೆ ಚುನಾವಣೆಯಲ್ಲಿ ಗೆಲುವು ಪಡೆದಿದ್ದ ಚಂದ್ರಪ್ಪ ಸಮುದಾಯದ ಅಭಿವೃದ್ಧಿಗೆ ಶ್ರಮಿಸುವದಲ್ಲಿ ವಿಫಲರಾಗಿದ್ದಾರೆ.

2018ರ ಚುನಾವಣೆಯಲ್ಲಿ ಸೋತಿದ್ದರು. ಇವರ ಪ್ರತಿಸ್ಪರ್ಧಿಯಾಗಿ ಗೆದ್ದಿದ್ದ ಎ.ನಾರಾಯಣಸ್ವಾಮಿ ಅವರು ಮೀಸಲಾತಿ ಕೊಡಿಸುವ ಭರವಸೆ ನೀಡಿದ್ದರು. ಆದರೆ ಮೀಸಲಾತಿ ಕೊಡಿಸಲಿಲ್ಲ, ಆದರೂ ಮೀಸಲಾತಿಗಾಗಿ ಪ್ರಯತ್ನ ನಡೆಸಿ, ಕೊನೆಯ ಹಂತಕ್ಕೆ ತಂದು ನಿಲ್ಲಿಸಿದ್ದಾರೆ. ಆಗಾಗಿ ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರನ್ನು ಬೆಂಬಲಿಸಿದರೆ ಮೀಸಲಾತಿ ದೊರೆಯಲಿದೆ ಎಂದು ಸಮುದಾಯದ ಲೆಕ್ಕಾಚಾರವಾಗಿದೆ.

ಸುಮಾರು 40 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಡುಗೊಲ್ಲರು ನಿರ್ಣಾಯಕ ಮತಗಳನ್ನು ಹೊಂದಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಡುಗೊಲ್ಲ ಜನಾಂಗಕ್ಕೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ಸಾಕಷ್ಟು ಅರ್ಜಿ ಹಾಕಿದ್ದರು. ಆದರೆ ಟಿಕೆಟ್ ನೀಡಲಿಲ್ಲ. ಆದರೂ ಸಮುದಾಯ ಪಕ್ಷವನ್ನು ಬೆಂಬಲಿಸಿ ಅಭ್ಯರ್ಥಿ ಗೆಲುವಿಗೆ ಸಹಕರಿಸಿದರು.

ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡದೆ ವಂಚಿಸಿದ್ದ ಪಕ್ಷ ನಿಗಮ ಮಂಡಳಿಗಳಿಗೆ ಸಮುದಾಯವನ್ನು ಪರಿಗಣಿಸುತ್ತಾರೆ ಎಂಬ ನಿರೀಕ್ಷೆಯಲ್ಲಿತ್ತು. ಇಲ್ಲೂ ಕೂಡ ಸಮುದಾಯವನ್ನು ಗುರುತಿಸುವಲ್ಲಿ ಕಾಂಗ್ರೆಸ್ ಪಕ್ಷ ಜನಾಂಗವನ್ನು ಕಡೆಗಣಿಸಿತು. ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನದ ನಿರೀಕ್ಷೆಯಲ್ಲಿದ್ದವರ ಆಸೆಗೆ ತಣ್ಣೀರೆರಚಿದರು. ಜೊತೆಗೆ ಜಿಲ್ಲೆಯಲ್ಲಿ ಸಂಸದರಾಗಿದ್ದ ಬಿ.ಎನ್.ಚಂದ್ರಪ್ಪ ಅವರು ಸಮುದಾಯದ ಪರವಾಗಿ ಧ್ವನಿ ಎತ್ತಿ, ನ್ಯಾಯ ಕೊಡಿಸುವಲ್ಲಿ ವಿಫಲರಾದರು.

ಕಾಂಗ್ರೆಸ್ ಪಕ್ಷ ಹಿಂದುಳಿದ ಸಮುದಾಯದ ಪರವಾಗಿದೆ. ಸಾಮಾಜಿಕ ನ್ಯಾಯ ಒದಗಿಸುವುದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಎಂದು ವೇದಿಕೆಗಳಲ್ಲಿ ಸುಮ್ಮನೆ ಉದ್ದುದ್ದ ಭಾಷಣ ಬೀಡುವ ಕಾಂಗ್ರೆಸ್ ನಾಯಕರು ಹೇಳಿಕೊಳ್ಳಲು ಒಂದು ನಿಗಮ ಮಂಡಳಿಗೆ ಪರಿಗಣಿಸಲಿಲ್ಲ. ಹಿಂದೊಮ್ಮೆ ಜಯಮ್ಮ ಬಾಲರಾಜ್ ಅವರನ್ನು ಎಂಎಲ್ಸಿ ಸ್ಥಾನಕ್ಕೆ ನೇಮಕ ಮಾಡಿದ್ದನ್ನೇ ಹೇಳಿಕೊಂಡು ಸಮುದಾಯಕ್ಕೆ ಮಂಕು ಬೂದಿ ಎರಚುತ್ತಿದ್ದಾರೆ ಎಂದು ಸಮುದಾಯದ ಮುಖಂಡರು ಆರೋಪಿಸಿದ್ದಾರೆ.

ಜಯಮ್ಮ ಬಾಲರಾಜ್ ರಾಜಕೀಯ ನಿವೃತ್ತಿ ನಂತರ ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ಅಲ್ಲದೆ ರಾಜ್ಯದ ಯಾವುದೇ ಭಾಗದಲ್ಲೂ ಕಾಡುಗೊಲ್ಲ ಸಮುದಾಯದವರು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಸಮುದಾಯದ ಮುಖಂಡರು ಎಲ್ಲವನ್ನೂ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಸಿದ್ಧತೆಯಲ್ಲಿದ್ದಾರೆ.

ಆಗಾಗಿ ಒಂದು ವೇಳೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್‌.ಚಂದ್ರಪ್ಪ ಅವರನ್ನು ಬೆಂಬಲಿಸಿದರೆ ನಮ್ಮ ಸಮಾಜಕ್ಕೆ ನ್ಯಾಯ ಸಿಗುವುದು ಅಷ್ಟರಲ್ಲೇ ಇದೆ ಎನ್ನುತ್ತಾರೆ ಸಮುದಾಯದ ಮುಖಂಡರು. ಈಗಾಗಲೇ ದೇಶದ ಭದ್ರತೆ ಮತ್ತು ಸಮಗ್ರತೆಗಾಗಿ ಮತ್ತೊಮ್ಮೆ ಬಿಜೆಪಿ ಬೆಂಬಲಿಸಲು ಪ್ರಜ್ಞಾವಂತ ಸಮುದಾಯದ ಯುವಕರು ಬಿಜೆಪಿ ಕಡೆ ವಾಲಿದ್ದಾರೆ ಎಂದು ಹೇಳುತ್ತಿದ್ದಾರೆ.

ಜಿಲ್ಲೆಯ ಹೊಸದುರ್ಗ ತಾಲ್ಲೂಕಿ ಪಕ್ಕದ 100 ಕಿಲೋಮೀಟರ್ ದೂರದ ಅಭ್ಯರ್ಥಿ ಬೇಡ, ನಮಗೆ 500 ಕಿಲೋಮೀಟರ್ ದೂರದ ಹಿರಿಯ ಅನುಭವಿ ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರಿಗೆ ಮತ ನೀಡಿದರೆ ಸಮುದಾಯದ ಎಸ್ಟಿ ಮೀಸಲಾತಿ ಹಾಗೂ ಅಭಿವೃದ್ಧಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ಸಮುದಾಯದ ಹಿರಿಯ ಮುಖಂಡರು ತಿಳಿಸುತ್ತಾರೆ.

ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರನ್ನು ಗೆಲ್ಲಿಸಲು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಜಿಲ್ಲೆಗೆ ಆಗಮಿಸಲಿದ್ದಾರೆ. ಅದರಲ್ಲೂ ಕಾಡುಗೊಲ್ಲರ ಮತಗಳನ್ನು ಸೆಳೆಯಲು ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಮಾಜಿ ಸಿಎಂ ಯಡಿಯೂರಪ್ಪ, ಕುಮಾರಸ್ವಾಮಿ ಸೇರಿದಂತೆ ಅನೇಕ ಮೈತ್ರಿ ನಾಯಕರು ಜಿಲ್ಲೆಗೆ ಆಗಮಿಸಿ ಕಾಡುಗೊಲ್ಲರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಅಂತಲೂ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+