ಕಂಚೀಪುರದಲ್ಲಿ ಅದ್ದೂರಿಯಾಗಿ ನಡೆದ ದುಡ್ಡು ತೂರುವ ಜಾತ್ರೆ
ಚಿತ್ರದುರ್ಗ, ಸೆಪ್ಟೆಂಬರ್, 23: ಜಿಲ್ಲೆಯ ವಿಶಿಷ್ಟ ದೇವರುಗಳಲ್ಲಿ ಶ್ರೀ ಕಂಚೀ ವರದರಾಜ ಸ್ವಾಮಿಯ ಜಾತ್ರೆಯು ಒಂದಾಗಿದೆ. ಹೊಸದುರ್ಗ ತಾಲ್ಲೂಕಿನ ಕಂಚೀಪುರ ಗ್ರಾಮದ ಶ್ರೀ ಕಂಚೀ ವರದರಾಜ ಸ್ವಾಮಿಯ ಉತ್ತರ ಮಳೆಯ ಅಂಬಿನೋತ್ಸವ ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಇನ್ನು ಭಕ್ತರು ಹರಕೆ ತೀರಿಸಲು ಚಿಲ್ಲರೆ ನಾಣ್ಯಗಳನ್ನು ದೇವರ ಮೇಲೆ ತೂರುವುದು ಜಾತ್ರೆಯ ವಿಶೇಷ.
ಉತ್ತರೆ ಮಳೆ ಅಂಬಿನೋತ್ಸವದಂದು ಶ್ರೀ ಕಂಚೀ ವರದರಾಜ ಸ್ವಾಮಿ ದೇವರು ಭಕ್ತರನ್ನು ತನ್ನ ಸೆಳೆಯುತ್ತದೆ. ಉತ್ತರೆ ಮಳೆ ಅಂಬಿನೋತ್ಸವ ಮೇಷ ಲಗ್ನದಲ್ಲಿ ಪಟ್ಟಕ್ಕೆ ಕೂರುವ ಮೂಲಕ ಉತ್ಸವ ಆರಂಭಗೊಂಡಿದೆ. ಇನ್ನು ಕಂಚೀಪುರದ ಶ್ರೀ ಕಂಚೀ ವರದರಾಜ ಸ್ವಾಮಿಯ ದೇಗುಲದಿಂದ ಬುತ್ತಿಬಾನವನ್ನು ಶ್ರೀ ದಶರಥ ರಾಮೇಶ್ವರದವರೆಗೆ ಕೊಂಡೊಯ್ಯುವವರೆಗೂ ಭಕ್ತರು ದಾರಿಯುದ್ದಕ್ಕೂ ಹಣವನ್ನು ದೇವರ ಮೇಲೆ ಎಸೆಯುತ್ತಲೇ ಇರುತ್ತಾರೆ.

ಈ ದೃಶ್ಯವನ್ನು ನೊಡಲು ರಾಜ್ಯದ ವಿವಿಧ ಭಾಗಗಳಿಂದ ಸಹಸ್ರಾರು ಭಕ್ತರು ಆಗಮಿಸುತ್ತಾರೆ. ಹಣದ ಕಾಂಚಾಣದ ಅರ್ಪಣೆ ನೋಡಲು ಎರಡು ಕಣ್ಣುಗಳು ಸಾಲದು ಎನ್ನುತ್ತಾರೆ ಇಲ್ಲಿನ ಭಕ್ತ ಸಮೂಹ. ಇಲ್ಲಿ ಹರಕೆಯನ್ನು ಹೊತ್ತು ತೀರಿಸುವ ಮಾರ್ಗ ಹಣ ತೂರುವುದೊಂದೆ ಆಗಿದ್ದು, ತೂರಿದ ಹಣವನ್ನು ಆರಿಸುವ ಭಕ್ತರಲ್ಲಿ ಕೆಲವರು ಆಯ್ದು ಹಣವನ್ನು ಪೂಜೆ ಮಾಡಿ ಮತ್ತೆ ದೇವರಿಗೆ ಅರ್ಪಣೆ ಮಾಡುವುದು ಮತ್ತೊಂದು ವಿಶೇಷತೆಯಾಗಿದೆ.
ಬರಗಾಲದಲ್ಲಿಯೂ ಹಣಕ್ಕೆ ಪೇಚಾಡುವ ಕಾಲದಲ್ಲಿಯೂ ದೇವರ ದರ್ಶನ ಮಾಡಿ ತಮ್ಮ ಹರಕೆ ತಿರಿಸಲು ಚೀಲಗಳಲ್ಲಿ, ಕೈ ತುಂಬ ಹಣವನ್ನು ಹಿಡಿದುಕೊಂಡು ಎಸೆಯಲು ಕಾತರರಾಗಿರುತ್ತಾರೆ. ಮೊದಲು ಬುತ್ತಿಬಾನ ಮುಂದೆ ಸಾಗಿದರೆ ಹಿಂದೆ ಬಸವಣ್ಣ ಡಂಗುರ ಬಾರಿಸಿ ಕಂಚೀವರದ ಸ್ವಾಮಿ ಸಾಗುವ ದೃಶ್ಯವನ್ನು ಸಹಸ್ರಾರು ಭಕ್ತರು ಕಣ್ತುಂಬಿಕೊಳ್ಳುತ್ತಾರೆ.
ಈ ಜಾತ್ರೆಯಲ್ಲಿ ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು. ಒಟ್ಟಾರೆಯಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಇದೊಂದು ವಿಶೇಷತೆಯಿಂದ ಕೂಡಿರುವ ಜಾತ್ರೆಯಾಗಿದೆ ಎನ್ನಬಹುದು.
ಸ್ಕಂದಗಿರಿ ಪಾರ್ವತಾಂಭ ರಥೋತ್ಸವ: ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಕಂದೇಗಾಲದ ಸ್ಕಂದಗಿರಿ ಪಾರ್ವತಾಂಭ ರಥೋತ್ಸವವು ಮೇ 23ರಂದು ವೈಭವದಿಂದ ನಡೆದಿದ್ದು, ಜಾತ್ರೆಗೆ ವಿಶೇಷ ಅತಿಥಿಯಾಗಿ ಬಿಗ್ ಬಾಸ್ ಸ್ಪರ್ಧಿ ಹಳ್ಳಿಕಾರ್ ಒಡೆಯ ವರ್ತೂರ್ ಸಂತೋಷ್ ಭಾಗಿಯಾಗಿ ಗಮನ ಸೆಳೆದರು.
ಪುರಾಣ ಪ್ರಸಿದ್ಧ ಕ್ಷೇತ್ರವಾಗಿರುವ ಪಾರ್ವತಿ ಬೆಟ್ಟದಲ್ಲಿ ವರ್ಷಕ್ಕೊಮ್ಕೆ ನಡೆಯುವ ರಥೋತ್ಸವಕ್ಕೆ ಸಹಸ್ರಾರು ಮಂದಿ ಪಾಲ್ಗೊಂಡು ತೇರು ಎಳೆದು ಪುನೀತರಾದರು.
ದೇವಸ್ಥಾನ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ಹಿನ್ನೆಲೆ, ತಾಲೂಕು ಆಡಳಿತದಿಂದ ಸಕಲ ಸಿದ್ದತೆ ಕೈಗೊಳ್ಳಲಾಗಿತ್ತು. ಕಳೆದ ಎರಡು ವರ್ಷದ ಹಿಂದೆ ರಥೋತ್ಸವದ ಸಂದರ್ಭದಲ್ಲಿ ಚಕ್ರಕ್ಕೆ ಸಿಲುಕಿ ಕಂದೇಗಾಲ ಗ್ರಾಮದ ಸರ್ಪಭೂಷಣ್ ಹಾಗೂ ಕಬ್ಬಹಳ್ಳಿ ಗ್ರಾಮದ ಸ್ವಾಮಿ ಎಂಬ ಇಬ್ಬರು ಯುವಕರು ಮೃತ ಪಟ್ಟಿದ್ದರಿಂದ ಜಿಲ್ಲಾಡಳಿತವು ರಥೋತ್ಸವದ ವೇಳೆ ಯಾವುದೇ ಅಹಿತರಕರ ಘಟನೆ ಜರುಗದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಒಗದಿಸಿತ್ತು.
ರಥೋತ್ಸವಕ್ಕೆ ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ, ಶಿಂಡನಪುರ, ಕೊಡಸೋಗೆ, ಸೋಮನಪುರ, ಬೊಮ್ಮಲಾಪುರ, ತೆರಕಣಾಂಬಿ ಸೇರಿದಂತೆ ನೆರೆ ಜಿಲ್ಲೆಗಳಿಂದಲೂ ಸಾವಿರಾರು ಮಂದಿ ಭಕ್ತರು ಆಗಮಿಸಿದ್ದರು.












Click it and Unblock the Notifications