ಮುರುಘಾಮಠ; ಉಸ್ತುವಾರಿಯಾಗಿ ನ್ಯಾಯಾಧೀಶರ ನೇಮಕ ಮುಂದುವರಿಕೆ
ಚಿತ್ರುರ್ಗ, ಜುಲೈ 19; ಚಿತ್ರದುರ್ಗದ ಮುರುಘ ರಾಜೇಂದ್ರ ಬ್ಮಹ್ಮನಮಠದ ಉಸ್ತುವಾರಿಯಾಗಿ ಜಿಲ್ಲಾ ನ್ಯಾಯಾಧೀಶರ ನೇಮಕವನ್ನು ಕರ್ನಾಟಕ ಹೈಕೋರ್ಟ್ ಮುಂದುವರಿಸಿದೆ. ಪ್ರಕರಣ ಇತ್ಯರ್ಥವಾಗುವವರೆಗೆ ಬಹುತೇಕ ಜಿಲ್ಲಾ ನ್ಯಾಯಮೂರ್ತಿಗಳೇ ಮಠದ ಕಾರ್ಯವೈಖರಿ ನೋಡಿಕೊಳ್ಳಲಿದ್ದಾರೆ.
ಮಠದ ಮತ್ತು ವಿದ್ಯಾಪೀಠದ ಮೇಲ್ವಿಚಾರಣೆಗೆ ಆಡಳಿತಾಧಿಕಾರಿ ನೇಮಕಕ್ಕೆ ಸಂಬಂಧಿಸಿದ ಪರ ಮತ್ತು ವಿರೋಧದ ಕುರಿತು ವಿಸ್ತೃತ ವಿಚಾರಣೆಯ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿದೆ. ಸದ್ಯಕ್ಕೆ ಚಿತ್ರದುರ್ಗದ ಪ್ರಧಾನ ಜಿಲ್ಲಾ ನ್ಯಾಯಾಧೀಶರನ್ನು ಮಠದ ಉಸ್ತುವಾರಿಗೆ ನೇಮಕ ಮಾಡಿರುವ ಮಧ್ಯಂತರ ವ್ಯವಸ್ಥೆ ಮುಂದುವರಿಯಲಿದೆ ಎಂದು ಆದೇಶಿಸಿದೆ.

ಚಿತ್ರದುರ್ಗದ ಮುರುಘಾ ಮಠ ಮತ್ತು ವಿದ್ಯಾಪೀಠಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿದ್ದ ರಾಜ್ಯ ಸರ್ಕಾರದ ಆದೇಶ ವಜಾ ಮಾಡಿರುವ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಕೆ. ಎಸ್. ನವೀನ್, ಎಚ್. ಏಕನಾಥಯ್ಯ ಮತ್ತು ಇತರರು ಸಲ್ಲಿಸಿರುವ ಮೇಲ್ಮನವಿಗಳನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಳೆ ಮತ್ತು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.
ವಕೀಲರ ವಾದವೇನು?; ಮಠ ಮತ್ತು ವಿದ್ಯಾಪೀಠವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲರು, "2023ರ ಮೇ 22ರಂದು ಏಕಸದಸ್ಯ ಪೀಠವು ಮಠಕ್ಕೆ ಆಡಳಿತಾಧಿಕಾರಿ ನೇಮಿಸಿದ್ದನ್ನು ವಜಾ ಮಾಡಿದೆ. ಇದರ ಜೊತೆಗೆ ಆದೇಶದಲ್ಲಿ ಆಕ್ಷೇಪಾರ್ಹವಾದ ಮೂರು ನಿರ್ದೇಶನಗಳನ್ನು ನೀಡಿದೆ. ಅವುಗಳನ್ನು ಮಾಡಬಾರದಿತ್ತು. ಮಠದ ಚಟುವಟಿಕೆಯಲ್ಲಿ ಒಂದು ಕಡೆ ರಾಜ್ಯ ಸರ್ಕಾರದ ಪ್ರವೇಶಿಕೆಯನ್ನು ಒಪ್ಪಿರುವ ನ್ಯಾಯಾಲಯವು ಮತ್ತೊಂದು ಕಡೆ ನ್ಯಾಯಾಲಯದ ಪ್ರವೇಶದ ವ್ಯಾಪ್ತಿಯನ್ನು ವಿಸ್ತರಿಸಿದೆ. ನ್ಯಾಯಾಲಯದ ಪ್ರವೇಶಾತಿಗೆ ಅನುಮತಿ ಇಲ್ಲ" ಎಂದು ವಾದಿಸಿದರು.
ಅರ್ಜಿದಾರರ ಪರ ವಕೀಲರು, "ಸದ್ಯದ ಪರಿಸ್ಥಿತಿಯಲ್ಲಿ ಸ್ವತಂತ್ರವಾದ ಮೂರನೇ ವ್ಯಕ್ತಿಯು ಮಠದ ಆಡಳಿತವನ್ನು ನೋಡಿಕೊಳ್ಳಬೇಕು" ಎಂದು ವಾದಿಸಿದರು. ಅರ್ಜಿದಾರರು ಮತ್ತು ಪ್ರತಿವಾದಿಗಳ ಎಲ್ಲಾ ವಾದಗಳನ್ನು ವಿಸ್ತೃತವಾಗಿ ಆಲಿಸಬೇಕಿದೆ. ಹೀಗಾಗಿ, ಮುಂದಿನ ವಿಚಾರಣೆವರೆಗೆ ಮಧ್ಯಂತರ ವ್ಯವಸ್ಥೆ ಮುಂದುವರಿಯಲಿದೆ ಎಂದಿರುವ ನ್ಯಾಯಾಲಯವು ವಿಚಾರಣೆಯನ್ನು ಆಗಸ್ಟ್ 8ಕ್ಕೆ ಮುಂದೂಡಿದೆ. ಸುಮಾರು ಒಂದೂವರೆ ತಾಸು ವಿಚಾರಣೆ ಆಲಿಸಿದ ಪೀಠವು ಅರ್ಜಿ ವಿಚಾರಣೆಯನ್ನು ಮುಂದೂಡಿತು.
ಇದಕ್ಕೂ ಮುನ್ನ, ವಕೀಲರು "ಉಸ್ತುವಾರಿ ಸ್ವಾಮೀಜಿಯು ಮಠದ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಿದ್ದಾರೆ. ಮಠದಲ್ಲಿ 20 ಸದಸ್ಯರ ಸಮಿತಿಯು ಚಟುವಟಿಕೆಗಳ ಮೇಲೆ ನಿಗಾ ಇಟ್ಟಿದೆ. ಪೀಠಾಧಿಪತಿಯಾಗಿ ಬಂಧಿತರಾಗಿರುವ ಶಿವಮೂರ್ತಿ ಮುರುಘಾ ಶರಣರು ಜನರಲ್ ಪವರ್ ಆಫ್ ಅಟಾರ್ನಿಯನ್ನು ನೀಡಿದ್ದಾರೆ. ಹೀಗಾಗಿ, ಈಗ ಮಾಡಿರುವ ವ್ಯವಸ್ಥೆಯನ್ನು ತೆಗೆಯಬೇಕು ಮತ್ತು ಮಧ್ಯಂತರ ಆದೇಶ ಮಾಡಬಾರದು" ಎಂದು ಕೋರಿದರು.
ಅಲ್ಲದೇ, "ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರು ರಿಟ್ ವ್ಯಾಪ್ತಿ ಮೀರಿದ್ದಾರೆ ಎಂದೂ ನಾವು ಮೇಲ್ಮನವಿ ಸಲ್ಲಿಸಿದ್ದೇವೆ. ಸಮುದಾಯದ ಪ್ರಮುಖರನ್ನು ಮಠದ ಚಟುವಟಿಕೆ ನಡೆಸಲು ಬಿಟ್ಟರೆ ಚಿತ್ರದುರ್ಗದಲ್ಲಿ ಪ್ರತಿಯೊಬ್ಬರು ತಾವು ಪ್ರಮುಖರು ಎಂದು ಹೇಳಿಕೊಳ್ಳಬಹುದು. ಯಾರು ಮುಖ್ಯರು ಮತ್ತು ಯಾರು ಮುಖ್ಯರಲ್ಲ ಎಂಬುದನ್ನು ಯಾರು ನಿರ್ಧರಿಸುತ್ತಾರೆ?. ಪ್ರಮುಖರು ಎನಿಸಿಕೊಳ್ಳುವವರು ಹಿಂದಿನ ಬಾಗಿಲಿನಿಂದ ಪ್ರವೇಶಿಸಬಹುದು" ಎಂದು ಆಕ್ಷೇಪಿಸಿದರು.
ಕೋರ್ಟ್ ಸೂಚನೆ ಏನು?; ತಾತ್ಕಾಲಿಕವಾಗಿ ನೇಮಕಗೊಂಡಿರುವ ಆಡಳಿತಾಧಿಕಾರಿಗಳು (ಜಿಲ್ಲಾ ನ್ಯಾಯಾಧೀಶರು) ಮುರುಘಾ ಮಠ ಮತ್ತು ಮಠದ ಅಧೀನದ ಶಿಕ್ಷಣ ಸಂಸ್ಥೆಗಳ ದಿನ ನಿತ್ಯದ ವ್ಯವಹಾರಗಳನ್ನು ನೋಡಿಕೊಳ್ಳಬೇಕು. ಆದರೆ, ಯಾವುದೇ ನೀತಿ, ನಿರೂಪಣೆಗಳನ್ನು ಮಾಡಲು ಮುಂದಾಗಬಾರದು. ಇದಕ್ಕೆ ಜಿಲ್ಲಾಧಿಕಾರಿಗಳು ಅಗತ್ಯವಿರುವ ಸಹಕಾರವನ್ನು ನೀಡಬೇಕು ಎಂದು ಕೋರ್ಟ್ ಸೂಚನೆ ನೀಡಿತ್ತು.
ಮುರುಘಾಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರು ಪೊಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ) ಪ್ರಕರಣದಲ್ಲಿ ಜೈಲು ಸೇರಿದ ಬಳಿಕ ಅಂದಿನ ಸರ್ಕಾರ ನಿವೃತ್ತ ಐಎಎಸ್ ಅಧಿಕಾರಿ ಪಿ. ಎಸ್. ವಸ್ತ್ರದ ಅವರನ್ನು 2022ರ ಡಿಸೆಂಬರ್ 13ರಂದು ಮಠಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿತ್ತು. ವಸ್ತ್ರದ 2022ರ ಡಿಸೆಂಬರ್ 15ರಂದು ಅಧಿಕಾರ ಸ್ವೀಕರಿಸಿದ್ದರು. ಬಳಿಕ ಕರ್ನಾಟಕ ಹೈಕೋರ್ಟ್ ಆಡಳಿತಾಧಿಕಾರಿ ನೇಮಕ ರದ್ದುಗೊಳಿಸಿ ಆದೇಶ ಹೊರಡಿಸಿತ್ತು.












Click it and Unblock the Notifications