ಬಿಜೆಪಿ ಸೇರ್ಪಡೆಯಾದ ಶಶಿಕುಮಾರ್: ಚಳ್ಳಕೆರೆಯಿಂದ ಸ್ಪರ್ಧೆ ಸಾಧ್ಯತೆ..!
ಚಿತ್ರದುರ್ಗ, ನವೆಂಬರ್3 : ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷದಿಂದ ಪಕ್ಷಕ್ಕೆ ಜಿಗಿಯುತ್ತಿರುವುದು ಸಾಮಾನ್ಯವಾಗಿದೆ. ಚುನಾವಣೆಗೆ ಆರು ತಿಂಗಳು ಬಾಕಿ ಇರುವಾಗಲೇ ಇತರ ಪಕ್ಷಗಳಿಂದ ಅನೇಕರು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ.
ಅದರಂತೆ ಚಿತ್ರದುರ್ಗ ಜಿಲ್ಲೆಯ ಮಾಜಿ ಸಂಸದ, ಹೊಸದುರ್ಗ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ಹಾಗೂ ಕನ್ನಡದ ಹಿರಿಯ ನಟ ಶಶಿಕುಮಾರ್ ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ. ಈ ಮೂಲಕ ಶಶಿಕುಮಾರ್ ರಾಜಕೀಯ ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ.
ಗುರುವಾರ ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರು, ಶಾಸಕರ ಸಮ್ಮುಖದಲ್ಲಿ ಶಶಿಕುಮಾರ್ ಬಿಜೆಪಿ ಸೇರ್ಪಡೆಯಾದರು.

ರಾಜಕೀಯದಲ್ಲಿ ನಟ ಶಶಿಕುಮಾರ್ ಹೊಸ ಇನ್ನಿಂಗ್ಸ್
ಸಂಯುಕ್ತ ಜನತಾದಳದಿಂದ ತಮ್ಮ ರಾಜಕೀಯ ಜೀವನ ಆರಂಭಿಸಿದ ನಟ ಶಶಿಕುಮಾರ್ ಒಂದು ಬಾರಿ ಚಿತ್ರದುರ್ಗದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ನಂತರ ರಾಜಕೀಯದಿಂದ ದೂರ ಸರಿದಿದ್ದರು. 2008ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೊಸದುರ್ಗದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ, ಬಿಜೆಪಿ ಅಭ್ಯರ್ಥಿ ಗೂಳಿಹಟ್ಟಿ ಶೇಖರ್ ಎದುರು ಭಾರೀ ಮತಗಳ ಅಂತರದಲ್ಲಿ ಠೇವಣಿ ಕಳೆದುಕೊಂಡು ಸೋತಿದ್ದರು.
ಇದೀಗ ಬಿಜೆಪಿಗೆ ಸೇರ್ಪಡೆಯಾಗಿರುವ ಅವರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ. ಬಿಜೆಪಿಯಿಂದ ಟಿಕೆಟ್ ನೀಡಲು ಪಕ್ಷದ ವರಿಷ್ಠರು ಒಪ್ಪಿದ್ದಾರೆ ಎಂಬ ಸುದ್ದಿ ಇದೆ.

ಸಂಯುಕ್ತ ಜನತಾದಳದಿಂದ ರಾಜಕೀಯಕ್ಕೆ ಜಿಗಿದ ಶಶಿಕುಮಾರ್
1999ರಲ್ಲಿ ನಡೆದ (1999-2004) ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸಂಯುಕ್ತ ಜನತಾದಳದ ಬಾಣದ ಗುರುತಿನಿಂದ ಸ್ಪರ್ಧಿಸಿ, ಹಳ್ಳಿ ಹಳ್ಳಿಗಳಲ್ಲಿ ಹಾಡು ಹೇಳಿಕೊಂಡು, ಡ್ಯಾನ್ಸ್ ಮಾಡಿ ಮತದಾರರನ್ನು ರಂಜಿಸಿ ಮತಪಡೆದು ಅಮೋಘ ಗೆಲುವನ್ನು ಶಶಿಕುಮಾರ್ ಪಡೆದಿದ್ದರು. ಅದೇ ಹುರುಪಿನಲ್ಲಿಯೂ ಕೆಲಸವನ್ನು ಮಾಡಿದ್ದರು. ಒಂದು ಹಂತದಲ್ಲಿ ತಾನು ಹುಟ್ಟಿ ಬೆಳೆದ ಚಿತ್ರದುರ್ಗದಲ್ಲಿಯೇ ಚುನಾವಣೆಯಲ್ಲಿ ಸ್ವರ್ಧಿಸಿ ಗೆದ್ದ ಮೇಲೆ ಮತದಾರರ ನಿರೀಕ್ಷೆಯಂತೆ ಕೆಲಸ ಮಾಡಲು ಬರುವ ಅನುದಾನದಲ್ಲಿ ಸಾಧ್ಯವಾಗದೇ ಹೋದರು ಸಾಕಷ್ಟು ಕುಡಿಯುವ ನೀರಿನ ಟ್ಯಾಂಕರ್‌ಗಳನ್ನು ನಗರಸಭೆಗೆ ನೀಡಿದ್ದರು.
ನಗರಗಳಲ್ಲಿ ಬೀದಿ ದೀಪಗಳನ್ನು ನೀಡುವ ಸಲುವಾಗಿ ಸೋಡಿಯಂ ಲೈಟ್‌ಗಳನ್ನು ವಿತರಿಸಿದ್ದರು. ಚಿತ್ರದುರ್ಗ ಜಿಲ್ಲೆಯ ಆರೂ ತಾಲೂಕುಗಳಲ್ಲಿ ಭದ್ರವಾದ ಬಸ್ ನಿಲ್ದಾಣಗಳನ್ನು ನಿರ್ಮಿಸಿದ್ದರು. ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ನಗರಗಳಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಕೆ ಮಾಡಲು ಅನುದಾನ ಖರ್ಚು ಮಾಡಿದ್ದರು.

ಕ್ಷೇತ್ರದ ಜನರಿಂದ ದೂರ ಸರಿದಿದ್ದ ಶಶಿಕುಮಾರ್
ಚಿತ್ರದುರ್ಗದಲ್ಲಿ ಖಾಸಗಿ ಬಸ್ ನಿಲ್ದಾಣವನ್ನು ಶಶಿಕುಮಾರ್ ಬಸ್ ನಿಲ್ದಾಣ ಎಂದು ಕೂಡ ಕರೆಯುವಷ್ಟು ರೀತಿಯಲ್ಲಿ ಸುಸಜ್ಜಿತವಾಗಿ ನಿರ್ಮಿಸಿದ್ದರು. ಆದರೆ ಅವರ ಅವಧಿ ಮುಗಿದ ಮೇಲೆ ಮತ್ತೆ ಅವರು ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗಲಿಲ್ಲ.
2008ರಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮಾಜಿ ಸಚಿವ ತಿಪ್ಪೇಸ್ವಾಮಿ ವಿರುದ್ಧ ಕೂದಲೆಳೆ ಅಂತರದಲ್ಲಿ ಸೋಲುಕಂಡಿದ್ದರು. ಬಳಿಕ ಅವರು ಕ್ಷೇತ್ರದಲ್ಲಿ ಜನರ ಜೊತೆ ನಿರಂತರ ಸಂಪರ್ಕವನ್ನಾಗಲಿ ಕ್ಷೇತ್ರದ ಜೊತೆಗೆ ಒಡನಾಟವನ್ನಾಗಲಿ ಇಟ್ಟುಕೊಳ್ಳಲಿಲ್ಲ. ಈ ಕಾರಣದಿಂದ ಅವರಿಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಹಿಡಿತ ಸಾಧಿಸಲು ಸಾಧ್ಯವಾಗಲಿಲ್ಲ. ಇದರಿಂದ ಅವರು ದೂರದ ಬೆಂಗಳೂರಿನಲ್ಲಿಯೇ ಉಳಿದು ಕ್ಷೇತ್ರವನ್ನು ಸಂಪೂರ್ಣವಾಗಿಯೇ ಮರೆತು ಹೋಗಿದ್ದರು.

ಎಸ್‌ಟಿ ಮೀಸಲು ಕ್ಷೇತ್ರದಿಂದ ಶಶಿಕುಮಾರ್ ಸ್ಪರ್ಧೆ
ನಂತರದ ಚುನಾವಣೆಯಲ್ಲಿ ಟಿಕೆಟ್ ದೊರೆಯಲಿಲ್ಲ. 2018ರಲ್ಲಿ ಮತ್ತೆ ಚಳ್ಳಕೆರೆ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲು ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಟಿಕೆಟ್ ದೊರೆಯದ ಕಾರಣ ಕೊನೆ ಕ್ಷಣದಲ್ಲಿ ಜೆಡಿಎಸ್ ಪಕ್ಷ ಸೇರಿ ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ, ಪ್ರಚಾರ ನಡಸದೇ ಸುಮಾರು 1500 ಹೆಚ್ಚು ಮತಗಳನ್ನು ಪಡೆದು ಹೀನಾಯವಾಗಿ ಸೋಲುಕಂಡಿದ್ದರು.
ಹೀಗೆ ಶಶಿಕುಮಾರ್ ತಮ್ಮ ರಾಜಕೀಯ ಜೀವನಕ್ಕೆ ಜೀವ ನೀಡಿದ್ದ ಕೋಟೆ ನಾಡನ್ನು ಕಡೆಗಣಿಸಿ ಚುನಾವಣೆ ಬಂದಾಗ ಮಾತ್ರ ಬರುವುದು ಪ್ರಚಾರ ಮಾಡುವುದು ಮಾಡಿದರೂ ಕೂಡ ಜನರ ಪ್ರೀತಿ ಮಾತ್ರ ಕಡಿಮೆ ಆಗಿರಲಿಲ್ಲ. ಆದರೆ ಪ್ರೀತಿ ಮಾತ್ರ ಮತಗಳಾಗಿ ಪರಿವರ್ತನೆಯಾಗಲೇ ಇಲ್ಲ.
ಜಿಲ್ಲೆಯ ಎಸ್‌ಟಿ ಮೀಸಲು ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಶಶಿಕುಮಾರ್ ಹೇಳಿದ್ದರು. ಆದರೆ ಯಾವ ಮೀಸಲು ಕ್ಷೇತ್ರ ಎಂದು ನಿಖರವಾಗಿ ತಿಳಿಸಿಲ್ಲ. ಜಿಲ್ಲೆಯಲ್ಲಿ ಚಳ್ಳಕೆರೆ ಹಾಗೂ ಮೊಳಕಾಲ್ಮೂರು ಎರಡು ಎಸ್‌ಟಿ ಮೀಸಲು ಕ್ಷೇತ್ರಗಳಾಗಿವೆ. ಈ ಎರಡರಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ? ಎಂದು ಕಾದು ನೋಡಬೇಕಿದೆ.











Click it and Unblock the Notifications