ಮತದಾನಕ್ಕೆ ಮುನ್ನಾ ದಿನ ಜೆಡಿಎಸ್ ಅಭ್ಯರ್ಥಿ ಪತ್ನಿಯನ್ನು ವಶಕ್ಕೆ ಪಡೆದ ಐಟಿ
ಮತದಾನಕ್ಕೆ ಮುನ್ನಾ ದಿನವೇ ಹಿರಿಯೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ರವೀಂದ್ರಪ್ಪ ಆದಾಯ ತೆರಿಗೆ ಇಲಾಖೆ ಅಭ್ಯರ್ಥಿಗಳು ಶಾಕ್ ನೀಡಿದ್ದಾರೆ. ರವೀಂದ್ರಪ್ಪ ಅವರ ಪತ್ನಿ ಜಿ.ಪಿ. ಲತಾ ಅವರನ್ನು ಮಂಗಳವಾರ ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಹಿರಿಯೂರು ತಾಲೂಕಿನ ಧರ್ಮಪುರ ಹೋಬಳಿಯ ಮುಂಗುಸುವಳ್ಳಿ ಗ್ರಾಮದಲ್ಲಿರುವ ಅವರ ನಿವಾಸದ ಮೇಲೆ ದಾಳಿ ಮಾಡಿರುವ 6 ಅಧಿಕಾರಿಗಳ ತಂಡ ಹೆಚ್ಚಿನ ವಿಚಾರಣೆಗೆ ಬೆಂಗಳೂರಿಗೆ ಕರೆದೊಯ್ದಿದ್ದಾರೆ.
ಮಂಗಳವಾರ ಅವರ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ರವೀಂದ್ರಪ್ಪ ಮತ್ತು ಅವರ ಪುತ್ರ ಸತ್ಯನಾರಾಯಣ ಮತಯಾಚನೆಗೆ ತೆರಳಿದ್ದರು. ಮನೆಯನ್ನು ಪರಿಶೀಲನೆ ಮಾಡಿರುವ ಅಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ ಲತಾ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಏಪ್ರಿಲ್ 21ರಂದು ರವೀಂದ್ರಪ್ಪ ಅವರ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಮುಂಗುಸುವಳ್ಳಿ ಗ್ರಾಮದ ತೋಟದ ಮನೆಗೆ ಸುಮಾರು 20ಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಳಿ ಮಾಡಿ ಪರಿಶೀಲನೆ ಮಾಡಿದ್ದರು. ದಾವಣಗೆರೆ, ಬೆಂಗಳೂರು ಹಾಗೂ ಮೈಸೂರಿನ ಅಧಿಕಾರಿಗಳು ತಂಡದಲ್ಲಿದ್ದರು. ತೋಟದ ಮನೆಯ ಕೆಲಸಗಾರರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.
ರವೀಂದ್ರಪ್ಪ ಮಾತ್ರವಲ್ಲದೆ ಅವರ ಸಂಬಂಧಿ ನಾಗರಾಜ್ ನಿವಾಸದ ಮೇಲೂ ದಾಳಿ ನಡೆಸಿ ಪರಿಶೀಲನೆ ಮಾಡಿದ್ದರು. ವಿಚಾರಣೆಗೆ ಹಾಜರಾಗುವಂತೆ ಲತಾ ಅವರಿಗೆ ಆದಾಯ ತೆರಿಗೆ ಇಲಾಖೆ ನೊಟೀಸ್ ನೀಡಿತ್ತು, ಆದರೂ ವಿಚಾರಣೆಗೆ ಹಾಜರಾಗದೇ ಇರುವುದರಿಂದ ಈಗ ವಶಕ್ಕೆ ಪಡೆಯಲಾಗಿದೆ.
ಇನ್ನು ಬಿಜೆಪಿ ಸೋಲಿನ ಭಯದಿಂದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳನ್ನು ಬಳಸಿಕೊಂಡು ಜೆಡಿಎಸ್ ಅಭ್ಯರ್ಥಿಯನ್ನು ಧೈರ್ಯ ಕಳೆದುಕೊಳ್ಳುವಂತೆ ಮಾಡುತ್ತಿದೆ ಎಂದು ಜೆಡಿಎಸ್ ಜಿಲ್ಲಾ ಘಟಕ ಆರೋಪಿಸಿದೆ. ಸರ್ಕಾರಿ ಸಂಸ್ಥೆಯಲ್ಲಿ ಮುಖ್ಯ ಇಂಜಿನಿಯರ್ ಆಗಿದ್ದ ರವೀಂದ್ರಪ್ಪ, ನಿವೃತ್ತಿ ಬಳಿಕ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.












Click it and Unblock the Notifications