ಅಂತಿಮವಾಗದ ಹಿರಿಯೂರು ಜೆಡಿಎಸ್ ಅಭ್ಯರ್ಥಿ: ಇತರ ಪಕ್ಷಗಳತ್ತ ಕಾರ್ಯಕರ್ತರ ನಡೆ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಕಾರಣಗಳಿಂದ ಜೆಡಿಎಸ್ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ. ಹೀಗಾಗಿ ಕಾರ್ಯಕರ್ತರು ಪಕ್ಷ ಪ್ರಚಾರ ಆರಂಭವಾಗದೇ ಗೊಂದಲಕ್ಕೀಡಾಗಿದ್ದು, ಬೇರೆ ಪಕ್ಷಗಳಿಗೆ ಸೇರ್ಪಡೆಯಾಗುತ್ತಿದ್ದಾರೆ.
ಚಿತ್ರದುರ್ಗ, ಫೆಬ್ರವರಿ 22: 2023ರ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿತ್ತಿದ್ದು, ಚುನಾವಣೆಗೆ ಕೆಲವು ದಿನಗಳು ಬಾಕಿ ಉಳಿದಿದೆ. ಇತ್ತ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರ ತ್ರಿಕೋನ ಸ್ಪರ್ಧೆಯಿಂದ ಏರ್ಪಟ್ಟಿದ್ದು, ಈ ಬಾರಿ ಮೂರು ಪಕ್ಷಗಳಿಗೆ ಟಾಂಗ್ ನೀಡಲು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಹಾಗೂ ಆಮ್ ಆದ್ಮಿ ಪಕ್ಷ ತಯಾರಾಗುತ್ತಿವೆ.
ಕಾಂಗ್ರೆಸ್ ಪಕ್ಷದಲ್ಲಿ ಸ್ಪಷ್ಟವಾಗಿ ಟಿಕೆಟ್ ಘೋಷಣೆ ಆಗದಿದ್ದರೂ ಮಾಜಿ ಸಚಿವ ಡಿ.ಸುಧಾಕರ್ ಹಾಗೂ ಎಂಎಲ್‌ಸಿ ಪರಾಜಿತ ಅಭ್ಯರ್ಥಿ ಬಿ ಸೋಮಶೇಖರ್ ಬಿರುಸಿನ ಪ್ರಚಾರ ಕೈಗೊಂಡರೆ, ಬಿಜೆಪಿಯಿಂದ ಶಾಸಕಿ ಕೆ ಪೂರ್ಣಿಮಾ ಹಾಗೂ ಅವರ ಪತಿ ಡಿ.ಟಿ ಶ್ರೀನಿವಾಸ್ ಅವರು ವಿವಿಧ ಕಾಮಗಾರಿ ಕಾರ್ಯಕ್ರಮಗಳ ಮೂಲಕ ಪ್ರಚಾರದಲ್ಲಿ ತೊಡಗಿದ್ದಾರೆ.

ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಘೋಷಣೆಯಾಗಿದ್ದು, ಸ್ಥಳೀಯ ಅಭ್ಯರ್ಥಿ ಗನ್ನಾಯಕನಹಳ್ಳಿ ಹೆಚ್ ಮಹೇಶ್ ಅವರು ಒಂದು ಸುತ್ತಿನ ಪ್ರಚಾರ ಆರಂಭಿಸಿದ್ದಾರೆ. ಉಳಿದಂತೆ ಎಎಪಿ ಅಭ್ಯರ್ಥಿಯಾಗಿ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಕೆಟಿ ತಿಪ್ಪೇಸ್ವಾಮಿ ಆಕಾಂಕ್ಷಿಯಾಗಿದ್ದು ಪ್ರಚಾರ ನಡೆಸಿದ್ದಾರೆ. ಆದರೆ ಜೆಡಿಎಸ್ ಪಕ್ಷದಲ್ಲಿ ಟಿಕೆಟ್ ಗೊಂದವಿದ್ದು, ಯಾರಿಗೂ ಟಿಕೆಟ್ ಸಿಗದಿರುವುದು ಇದುವರೆಗೂ ಯಕ್ಷ ಪ್ರಶ್ನೆಯಾಗಿದೆ. ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಆಗುತ್ತಿರುವುದು ವಿಪರ್ಯಾಸವಾಗಿದೆ.
ಬಯಲು ಸೀಮೆಯ ವೇದಾವತಿ, ಸುವರ್ಣಮುಖಿ ನದಿ ಹಾಗೂ ವಾಣಿವಿಲಾಸ ಸಾಗರ ಜಲಾಶಯದ ಮಡಲಿನಲ್ಲಿ ವಿಸ್ತಾರಗೊಂಡಿರುವ ಕ್ಷೇತ್ರವನ್ನು ಸ್ಥಳೀಯರಿಗಿಂತಲೂ ಹೊರಗಿನವರು ಪ್ರತಿನಿಧಿಸಿದ್ದೇ ಹೆಚ್ಚು. ಬಿಜೆಪಿ ಪಕ್ಷಕ್ಕೆ ನೆಲೆ ಇಲ್ಲದಂತಹ ಸಂದರ್ಭದಲ್ಲಿ ಪ್ರಬಲ ಜಾತಿಗಳ ಕ್ಷೇತ್ರವನ್ನು ಬಿಜೆಪಿಯ ಪೂರ್ಣಿಮಾ ಶ್ರೀನಿವಾಸ್ ಪ್ರತಿನಿಧಿಸಿ, 2018ರಲ್ಲಿ ಪ್ರಥಮ ಬಾರಿಗೆ ಕೇಸರಿ ಬಾವುಟ ಹಾರಿಸಿದ ಕೀರ್ತಿ ಶಾಸಕಿ ಕೆ.ಪೂರ್ಣಿಮಾಗೆ ಸಲ್ಲುತ್ತದೆ.
ಇತ್ತೀಚೆಗೆ ನಡೆದ ವಾಣಿ ವಿಲಾಸ ಜಲಾಶಯ ಬಾಗಿನ ಅರ್ಪಣೆ ಕಾರ್ಯಕ್ರಮ ನೇರವೇರಿಸಿದ ನಂತರ ನಗರದ ನೆಹರೂ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿಯ ಜನಸಂಕಲ್ಪ ಯಾತ್ರೆಯಲ್ಲಿ ಮುಂದಿನ ಬಾರಿ 25 ಸಾವಿರ ಮತಗಳ ಅಂತರದಿಂದ ಪೂರ್ಣಿಮಾ ಅವರನ್ನು ಗೆಲ್ಲಿಸಿ ಎಂಬ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೇಳಿಕೆ ಪೂರ್ಣಿಮಾಗೆ ಬಿಜೆಪಿ ಟಿಕೆಟ್ ಬಹುತೇಕ ಖಚಿತವಾಗಿದ್ದರೂ, ಇದರ ಮಧ್ಯೆಯೂ ನಾನೇನು ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಶಾಸಕಿ ಕೆ ಪೂರ್ಣಿಮಾ ಪತಿ ಡಿಟಿ ಶ್ರೀನಿವಾಸ್ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ.ಆದರೆ ಯಾವ ಪಕ್ಷದಿಂದ ಎಂಬುದು ನಿರ್ಧಾರವಾಗಿಲ್ಲ.
ಕ್ಷೇತ್ರದಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಜೆಡಿಎಸ್ ಬಾಗಿಲು ತಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಶಾಸಕಿಯವರ ಪತಿಯ ಈ ನಡೆಯಿಂದ ಪತಿಯೋ ಅಥವಾ ಪತ್ನಿಯೋ ಎನ್ನುವುದು ಒಂದಿಷ್ಟು ಗೊಂದಲ ಮೂಡಿಸಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಹಿರಿಯೂರು 2018ರಲ್ಲಿ ಮೊದಲ ಬಾರಿಗೆ ಬಿಜೆಪಿ ಕಮಲ ಅರಳಿಸಿದ ಕೀರ್ತಿ ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ್‌ಗೆ ಸಲ್ಲುತ್ತದೆ.ಈ ಕ್ಷೇತ್ರದಲ್ಲಿ ಇದುವರೆಗೂ 15 ಚುನಾವಣೆ ನಡೆದಿದೆ. ಇದರಲ್ಲಿ ಕಾಂಗ್ರೆಸ್ 10 ಬಾರಿ ಗೆಲುವಿನ ನಗೆ ಬೀರಿದೆ. ಒಮ್ಮೆ ಬಿಜೆಪಿ ಗೆಲುವು ಸಾಧಿಸಲಿದೆ, ಉಳಿದಂತೆ ಜೆಡಿಎಸ್ ಇತರೆ ಪಕ್ಷಗಳು ಜಯ ಸಾಧಿಸಿವೆ.
ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಡಿ. ಸುಧಾಕರ್ ಅವರಿಗೆ ಚಳ್ಳಕೆರೆ ಎಸ್ಟಿ ಮೀಸಲು ಕ್ಷೇತ್ರ ಹಿನ್ನೆಲೆಯಲ್ಲಿ 2008ರಲ್ಲಿ ಹಿರಿಯೂರಿಗೆ ಕಾಲಿಟ್ಟ ಮಾಜಿ ಶಾಸಕ ಡಿ. ಸುಧಾಕರ್ ಪಕ್ಷೇತರವಾಗಿ ಸ್ಪರ್ಧಿಸಿ ಗೆಲುವು ಸಾಧಿಸಿ ಬಿಜೆಪಿ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಆಡಳಿತ ನಡೆಸಿದರು. ನಂತರ 2013ರಲ್ಲಿ ಕಾಂಗ್ರೆಸ್ ನಲ್ಲಿ ಟಿಕೆಟ್ ಪಡೆದು, ಮರು ಆಯ್ಕೆಯಾದರು. 2018ರಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದರು. ಆದರೆ ತಂದೆಯನ್ನು ಸೋಲಿಸಿದ್ದವರನೇ ಮಗಳು ಸೋಲಿಸುವ ಮೂಲಕ, ಸುಧಾಕರ್ ಹ್ಯಾಟ್ರಿಕ್ ಗೆಲುವಿಗೆ ಬ್ರೇಕ್ ಹಾಕಿದರು.
ಜೆಡಿಎಸ್ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲ
ಹಿರಿಯೂರು ಜೆಡಿಎಸ್ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲ ಉಂಟಾಗಿದೆ. ಈ ಕ್ಷೇತ್ರದಲ್ಲಿ ಪಾರಂಪರಿಕ ಮತಗಳನ್ನು ಹೊಂದಿರುವ ಜೆಡಿಎಸ್‌ನಿಂದ ಸ್ಥಳೀಯ ಒಕ್ಕಲಿಗ ಸಮುದಾಯದವರು ಅಖಾಡಕ್ಕೆ ಇಳಿಯಲಿದ್ದಾರೆ ಎನ್ನಲಾಗುತ್ತಿತ್ತು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪಿಲಾಜನಹಳ್ಳಿ ಜಯಣ್ಣ, ಲೋಕೋಪಯೋಗಿ ಇಲಾಖೆ ನಿವೃತ್ತ ಚೀಫ್ ಎಂಜಿನಿಯರ್ ಎಂ. ರವೀಂದ್ರಪ್ಪ, ಶಿವಪ್ರಸಾದ್ ಗೌಡ, ಹಾಗೂ ಮೂಡಲಗಿರಿಯಪ್ಪ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದರೆ ಯಾರಿಗೂ ಟಿಕೆಟ್ ಅಂತಿಮವಾಗಿಲ್ಲ.
ಟಿಕೆಟ್ ಆಯ್ಕೆ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಐದಾರು ಬಾರಿ ಸಭೆಗಳನ್ನು ನಡೆಸಿದರೂ ಅಭ್ಯರ್ಥಿ ಅಂತಿಮ ಆಗಿಲ್ಲ. ಕಾರಣ ನಾನು ನಾನು ಎಂಬ ಕಾರಣಗಳಿಂದ ಯಾರಿಗೆ ಟಿಕೆಟ್ ನೀಡಬೇಕು ಎಂಬುದು ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ. ಮತ್ತೊಂದು ಕಡೆ ಕ್ಯಾಸಿನೊ ದೊರೆ ವೀರೇಂದ್ರ ಪಪ್ಪಿ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಅವರು ಕಾಂಗ್ರೆಸ್ ಕದತಟ್ಟಿ, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಲೋಕೋಪಯೋಗಿ ನಿವೃತ್ತ ಚೀಫ್ ಇಂಜಿನಿಯರ್ ರವೀಂದ್ರಪ್ಪ ಅವರಿಗೆ ಟಿಕೆಟ್ ನೀಡಬಹುದು ಎನ್ನಲಾಗುತ್ತಿದೆ ಎನ್ನಲಾಗಿದೆ. ಒಂದು ವೇಳೆ ರವೀಂದ್ರಪ್ಪ ಅವರಿಗೆ ಟಿಕೆಟ್ ತಪ್ಪಿದರೆ ಪಕ್ಷ ಬೇರೆಯವರಿಗೆ ಮಣೆ ಹಾಕಲಿದೆ.
ಅನ್ಯ ಪಕ್ಷಗಳತ್ತ ಮುಖ ಮಾಡಿದ ಜೆಡಿಎಸ್ ಕಾರ್ಯಕರ್ತರು
ಪಕ್ಷದಲ್ಲಿ ಅಧಿಕೃತ ಅಭ್ಯರ್ಥಿ ಘೋಷಣೆ ಮಾಡದಿರುವುದು ಜೆಡಿಎಸ್ ಕಾರ್ಯಕರ್ತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಯಾಕೆಂದರೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಯಾರಿಗೆ ಬೆಂಬಲ ನೀಡಬೇಕು ಎನ್ನುವ ಗೊಂದಲದಲ್ಲಿದ್ದಾರೆ. ಒಂದು ಕಡೆ ಕಾಂಗ್ರೆಸ್, ಬಿಜೆಪಿ, ಕೆಆರ್.ಪಿ ಹಾಗೂ ಎಎಪಿ ಪ್ರಚಾರದಲ್ಲಿ ತೊಡಗಿದ್ದರೆ, ಜೆಡಿಎಸ್ ಮಾತ್ರ ಸ್ಥಬ್ಧವಾಗಿದೆ.
ಈ ನಿಟ್ಟಿನಲ್ಲಿ ಈಗಾಗಲೇ ಧರ್ಮಪುರ ಭಾಗದಲ್ಲಿ ಒಕ್ಕಲಿಗರ ಸಮುದಾಯ ಹೆಚ್ಚಿದೆ. ಒಕ್ಕಲಿಗರ ನಡೆ, ಡಿಕೆ ಶಿವಕುಮಾರ್ ಕಡೆ ಎಂಬ ಶೀರ್ಷಿಕೆ ಅಡಿಯಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಳ್ಳುತ್ತಿದ್ದಾರೆ. ಇದಲ್ಲದೆ ಬಿಜೆಪಿ, ಕೆಆರ್‌ಪಿ ಸೇರಿದಂತೆ ಇತರ ಪಕ್ಷಗಳ ಕಡೆ ಜೆಡಿಎಸ್ ಕಾರ್ಯಕರ್ತರು ಮುಖ ಮಾಡಿದ್ದಾರೆ ಎನ್ನಬಹುದು. ಟಿಕೆಟ್ ಹಂಚಿಕೆ ಫೈನಲ್ ಆಗದಿದ್ದರೆ ಮತ್ತೊಷ್ಟು ಕಾರ್ಯಕರ್ತರು ಬೇರೆ ಬೇರೆ ಪಕ್ಷ ಸೇರಲಿದ್ದಾರೆ. ಅಭ್ಯರ್ಥಿ ಆಯ್ಕೆ ವಿಳಂಬವಾದಷ್ಟು ಅಭ್ಯರ್ಥಿ ಗೆಲುವಿಗೆ ಕಠಿಣವಾಗಲಿದೆ.
ಒಟ್ಟಾರೆಯಾಗಿ ಈ ಬಾರಿ ಹಿರಿಯೂರು ವಿಧಾನಸಭಾ ಚುನಾವಣೆ ರಂಗಿರುತ್ತಿದ್ದು, ಬಿಜೆಪಿ, ಕಾಂಗ್ರೆಸ್, ಕೆಆರ್‌ಪಿ ಪಕ್ಷ ಹಾಗೂ ಎಎಪಿ ಬಿರುಸಿನ ಪ್ರಚಾರದಲ್ಲಿ ತೊಡಗಿವೆ. ಜೆಡಿಎಸ್ ಪಕ್ಷ ಯಾವ ನಿರ್ಧಾರ ಕೈಗೊಂಡು, ಯಾರಿಗೆ ಟಿಕೆಟ್ ನೀಡುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications