ಚಿತ್ರದುರ್ಗ: ಎಫ್‌ಐಆರ್ ದಾಖಲಾದ ಬೆನ್ನಲ್ಲೇ ಸ್ವಾಮಿಜಿ ಬಳಿ ಓಡೋಡಿ ಬಂದ ಹಾಸ್ಯ ನಟ ಹುಲಿ ಕಾರ್ತಿಕ್
ಚಿತ್ರದುರ್ಗ, ಅಕ್ಟೋಬರ್, 11: ಗಿಚ್ಚಿಗಿಲಿಗಿಲಿ ವೇದಿಕೆ ಕಾರ್ಯಕ್ರಮದಲ್ಲಿ ಹಾಸ್ಯ ನಟ ಹುಲಿ ಕಾರ್ತೀಕ್ ಅವರು ಬೋವಿ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಎಫ್ಐಆರ್ ದಾಖಲಿಸಲಾಗದೆ. ಎಫ್‌ಐಆರ್ ದಾಖಲಾಗುತ್ತಿದ್ದಂತೆ ಚಿತ್ರದುರ್ಗ ನಗರದ ಬೋವಿ ಮಠಕ್ಕೆ ಕಾರ್ತಿಕ್ ಭೇಟಿ ನೀಡಿ ಸಮುದಾಯದ ಶ್ರೀಗಳ ಪಾದಕ್ಕೆ ಬಿದ್ದು ಕ್ಷಮೆ ಕೋರಿದ್ದಾರೆ.
ಜಿ ಕನ್ನಡದಲ್ಲಿ ಪ್ರಸಾರವಾಗುವ ಗಿಚ್ಚಿ ಗಿಲಿಗಿಲಿ ವೇದಿಕೆಯಲ್ಲಿ ಸ್ಕಿಟ್ ಮಾಡುವ ವೇಳೆ ಹುಲಿ ಕಾರ್ತಿಕ್ ಭೋವಿ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆ ಹುಲಿ ಕಾರ್ತಿಕ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈ ಬೆನ್ನಲ್ಲೇ ಕಾರ್ತಿಕ್ ಅವರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಜಿ ಬಳಿ ಬಂದು ಕ್ಷಮೆ ಕೇಳಿದ ಘಟನೆ ನಡೆದಿದೆ.

ಬಡವರ ಮಗ ನಾನು ಈಗ ಬೆಳೆಯುತ್ತಿದ್ದೇನೆ, ಈ ರೀತಿ ಎಫ್‌ಐಆರ್ ಆದ್ರೆ ಜೀವನ ಹಾಳಾಗುತ್ತದೆ ಅಂತಾ ಸ್ವಾಮಿಜಿ ಮುಂದೆ ಅಳಲು ತೋಡಿಕೊಂಡರು. ಆಗ "ಬಡವರ ಮಕ್ಕಳು ಎತ್ತರಕ್ಕೆ ಬೆಳೆಯಬೇಕು, ನಮ್ಮ ಮಠದ ಶಿಷ್ಯರಿಂದ ಯಾವುದೇ ತೊಂದರೆಯಾಗುವುದಿಲ್ಲ, ನಾವೂ ಆ ವೀಡಿಯೋ, ಆಡಿಯೋ ನೋಡೀದೀವಿ. ಅದರಲ್ಲಿ ತಾವು ಆ ರೀತಿ ಮಾತನಾಡಿಲ್ಲ ಎಂದು ನಮ್ಮ ಗಮನಕ್ಕೆ ಬಂದಿದೆ ಎಂದು ಸ್ವಾಮೀಜಿ ಹೇಳಿದರು.
ಈಗಾಗಲೇ ಈ ಕುರಿತು ನಮ್ಮ ಭಕ್ತರಿಗೆ ಹೇಳಿದ್ದೇವೆ. ನಿಮಗೆ ನಮ್ಮಿಂದ, ನಮ್ಮ ಭಕ್ತರಿಂದ ಯಾವುದೇ ತೊಂದರೆಯಾಗುವುದಿಲ್ಲ. ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಜಿ ಎಂದರು. ಅಲ್ಲದೆ, ಇದೇ ವೇಳೆ ಹುಲಿ ಕಾರ್ತಿಕ್ ಸೇರಿದಂತೆ ಕಲಾವಿದರನ್ನು ಹರಸಿ ಆಶೀರ್ವದಿಸಿ, ಕಲಾವಿದರು ನೀವು ಬೆಳೆಯಬೇಕು ಅಂತಾ ಹಾರೈಸಿದರು.
ಮುರುಘಾಶ್ರೀ ಬಿಡುಗಡೆ: ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿದ್ದ ಚಿತ್ರದುರ್ಗ ಮುರುಘಾಶ್ರೀ ಅವರನ್ನು ಅಕ್ಟೋಬರ್ 07ರಂದು ಕಾರಾಗೃಹದಿಂದ ಬಿಡುಗಡೆ ಮಾಡಲಾಯಿತು. ಶ್ರೀಗಳನ್ನು ಬಿಡುಗಡೆಗೊಳಿಸುವಂತೆ ಇಂದು ಚಿತ್ರದುರ್ಗದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿತ್ತು.
ಸಾಕ್ಷ್ಯಗಳ ವಿಚಾರಣೆ ಬಹುತೇಕ ಪೂರ್ಣಗೊಂಡ ಹಿನ್ನೆಲೆ ಚಿತ್ರದುರ್ಗದ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಈ ಆದೇಶವನ್ನು ಹೊರಡಿಸಿದ್ದರಿಂದ ಕೋರ್ಟ್‌ನಿಂದ ಜೈಲಿಗೆ ತೆರಳಿ ಅಲ್ಲಿಂದ ಹೊರ ಬಂದರು. ಶ್ರೀಗಳು ನೇರವಾಗಿ ದಾವಣಗೆರೆಗೆ ತೆರಳಿದರು. ದಾವಣಗೆರೆಯ ವಿರಕ್ತ ಮಠದಲ್ಲಿ ಶ್ರೀಗಳು ತಂಗಲಿದ್ದಾರೆ.
ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಘಾ ಶರಣರು ಜೈಲು ಪಾಲಾಗಿದ್ದರು. ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಜಾಮೀನು ಪ್ರಶ್ನೆ ಮಾಡಲಾಗಿತ್ತು. ಕೋರ್ಟ್‌ನಲ್ಲಿ ಸಾಕ್ಷ್ಯಗಳ ವಿಚಾರಣೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದರಿಂದ ಮುರುಘಾ ಶರಣರನ್ನು ಎರಡನೇ ಬಾರಿಗೆ ಬಂಧಿಸಿದ್ದರು. ಇಂದು ವಿಚಾರಣೆ ಮುಗಿದಿದೆ.












Click it and Unblock the Notifications