ವಿಧಾನಸಭೆ ಚುನಾವಣೆ 2023: ಹಿರಿಯೂರು ಕ್ಷೇತ್ರದಲ್ಲಿ ಗೆಲುವಿಗಾಗಿ ಮಾಜಿ ಸಚಿವ ಡಿ. ಸುಧಾಕರ್ ಅಬ್ಬರದ ಪ್ರಚಾರ
ಚಿತ್ರದುರ್ಗ, ಡಿಸೆಂಬರ್, 27: ಮುಂಬರುವ 2023ರ ವಿಧಾನಸಭಾ ಚುನಾವಣೆಗೆ ಕೆಲವು ತಿಂಗಳು ಬಾಕಿ ಉಳಿದಿದ್ದು, ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಪ್ರಚಾರದ ಚಂದುರಂಗದಾಟ ರಂಗೇರಿದೆ. ಹಾಗೆಯೇ ಕಾಂಗ್ರೆಸ್‌ನ ಮಾಜಿ ಸಚಿವ ಡಿ. ಸುಧಾಕರ್ ಅವರು ಕ್ಷೇತ್ರ ಪರ್ಯಟನೆಯಲ್ಲಿ ತೊಡಗಿದ್ದಾರೆ. 2008 ಮತ್ತು 2013ರಲ್ಲಿ ಎರಡು ಬಾರಿ ಜಯಗಳಿಸಿದ್ದು, ಹ್ಯಾಟ್ರಿಕ್ ಗೆಲುವಿನಲ್ಲಿ ಎಡವಿದ್ದರು. ಈ ಬಾರಿ ಕ್ಷೇತ್ರವನ್ನು ಹಿಡಿತಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಮಾಜಿ ಸಚಿವರು ಹುಮ್ಮಸ್ಸಿನಲ್ಲಿದ್ದಾರೆ.
ಮಾಜಿ ಸಚಿವ ಡಿ ಸುಧಾಕರ್ ಅವರು ಬಡವರ, ನಿರ್ಗತಿಕರ, ದೀನ- ದಲಿತರ ಹಾಗೂ ಹಿಂದುಳಿದ ವರ್ಗಗಳ ಬಡ ಜನತೆಗೆ ಆಪತ್ಭಾಂದವ ಎಂದು ಗುರುತಿಸಿಕೊಂಡಿದ್ದಾರೆ. ಸುಧಾಕರ್ ಅವರ ಬಳಿ ಕಷ್ಟದ ಸಮಯದಲ್ಲಿ ಯಾರೇ ಅವರನ್ನು ಭೇಟಿ ಮಾಡಿದರೆ ಉದಾರ ಮನಸ್ಸಿನಿಂದ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಾರೆ ಎಂದು ಅಲ್ಲಿನ ಜನರು ಹೇಳುತ್ತಿದ್ದಾರೆ. ಸಹಾಯ ಮಾಡುವ ಉದಾರ ಮನಸ್ಸು ಮಾಜಿ ಸಚಿವರಿಗಿದೆ. ಅಲ್ಲದೆ ಮಕ್ಕಳ ವಿದ್ಯಾಭ್ಯಾಸಕ್ಕೆ ತನ್ನ ಶಿಕ್ಷಣ ಸಂಸ್ಥೆಯಲ್ಲಿ ಉಚಿತವಾಗಿ ಶಿಕ್ಷಣ ನೀಡುವುದರ ಜೊತೆಗೆ, ಇನ್ನೀತರ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಆಸರೆಯಾಗುವ ಮೂಲಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು.
ಕ್ಷೇತ್ರ ಪ್ರವಾಸದಲ್ಲಿರುವ ಮಾಜಿ ಸಚಿವರು ತಾಲೂಕಿನಲ್ಲಿ ಆಕಸ್ಮಿಕವಾಗಿ ಮೃತಪಟ್ಟವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ, ಕುಟುಂಬದ ಸದಸ್ಯರಿಗೆ ಧೈರ್ಯ ತುಂಬುವ ಕೆಲಸವನ್ನು ಸಹ ಮಾಡುತ್ತಿದ್ದಾರೆ. ಈಗಾಗಲೇ ಹರಿಯಬ್ಬೆ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮೃತಪಟ್ಟವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಅಂತಿಮ ನಮನ ಸಲ್ಲಿಸುವ ಮೂಲಕ ಬಡವರಿಗೆ ಆಸರೆಯಾಗಿ ನಿಲ್ಲುವ ಮೂಲಕ ಗಮನ ಸೆಳೆದಿದ್ದಾರೆ.

2008ರಲ್ಲಿ ಅಮೋಘ ಗೆಲುವು
ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ 2008ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಮೋಘ ಗೆಲುವು ಸಾಧಿಸಿ, ಮೊದಲ ಬಾರಿಗೆ ಸಮ್ಮಿಶ್ರ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬದಲಾದ ಬೆಳವಣಿಗೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸಚಿವ ಸ್ಥಾನ ತಪ್ಪಿ ಹೋಯ್ತು ಎಂದು ಎದೆಗುಂದದೇ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಕಗಳನ್ನು ಮಾಡುವ ಮೂಲಕ ಗುರುತಿಸಿಕೊಂಡಿದ್ದಾರೆ. ನಂತರ 2013ರಲ್ಲಿ ಮಾಜಿ ಸಚಿವ ಎ. ಕೃಷ್ಣಪ್ಪ ವಿರುದ್ಧ ಜಯಭೇರಿ ಬಾರಿಸಿ ಆಯ್ಕೆಯಾದರು. ಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯ, ಕೃಷಿಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಕೋಟಿಗಟ್ಟಲೇ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುದ್ದರು. 2016-2017 ರಲ್ಲಿ ತಾಲೂಕಿನಲ್ಲಿ ಬರಗಾಲ ಬಂದಂತಹ ಸಂದರ್ಭದಲ್ಲಿ ಉಡುವಳ್ಳಿ ಕೆರೆಯಲ್ಲಿ ಮೇವು ಬೆಳೆದು ತಾಲೂಕಿನ ಪಶುಗಳಿಗೆ ಉಚಿತವಾಗಿ ವಿತರಿಸಿದ್ದರು.

ವಿವಿಧ ಸಭೆ, ಸಮಾರಂಭಗಳಲ್ಲಿ ಭಾಗಿ
ಕ್ಷೇತ್ರವನ್ನು ಪುನಃ ಹಿಡಿತಕ್ಕೆ ತೆಗೆದುಕೊಳ್ಳುವ ಹಿನ್ನೆಲೆಯಲ್ಲಿ ಮಾಜಿ ಸಚಿವರು ಕ್ಷೇತ್ರದಲ್ಲಿ ಹಗಲು ರಾತ್ರಿ ಎನ್ನದೆ ಸುತ್ತಾಡುತ್ತಿದ್ದಾರೆ. ಮದುವೆ, ನಾಮಕರಣ, ದೇವರ ಉತ್ಸವ ಹೀಗೆ ವಿವಿಧ ಸಭೆ ಸಮಾರಂಭಗಳಲ್ಲಿ ಭಾಗವಹಿಸುವ ಮೂಲಕ ಪಕ್ಷ ಸಂಘಟನೆಯನ್ನು ಬಲಗೊಳಿಸುತ್ತಿದ್ದಾರೆ. ಜೊತೆಗೆ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಾ ಬರುತ್ತಿದ್ದಾರೆ. ಎರಡು ಬಾರಿ ಶಾಸಕರಾಗಿ ಆಯ್ಕೆಯಾದ ಸಂದರ್ಭದಲ್ಲಿ ಅಭಿವೃದ್ಧಿ ಆಡಳಿತವನ್ನು ನೋಡಿ ಮತ್ತೊಮ್ಮೆ ಅವಕಾಶ ನೀಡಿ ಎನ್ನುತ್ತಿದ್ದಾರೆ.

ಚುನಾವಣೆಗೆ ಭರ್ಜರಿ ತಯಾರಿ
ಅಲ್ಲದೆ ವಿವಿಧ ಸಮುದಾಯಗಳ ಜೊತೆ ಹಲವಾರು ಸಭೆ, ಸಮಾರಂಭಗಳನ್ನು ನಡೆಸಿದ್ದಾರೆ. ಪ್ರಮುಖವಾಗಿ ಕಾಡುಗೊಲ್ಲರು, ಒಕ್ಕಲಿಗರು, ಪರಿಶಿಷ್ಟ ಪಂಗಡದ ಹಾಗೂ ಪರಿಶಿಷ್ಟ ಜಾತಿಗೆ ಸೇರಿದ ಸಮುದಾಯದ ಮುಖಂಡರ ಜೊತೆ ಸಮಾಲೋಚನೆ ನಡೆಸಿ ಚುನಾವಣೆಗೆ ತಯಾರಿ ನಡೆಸುತ್ತಿದ್ದಾರೆ.

ಕ್ಷೇತ್ರದಲ್ಲಿ ಸೋಲು, ಗೆಲುವಿನ ಲೆಕ್ಕಾಚಾರ ಶುರು
ಒಟ್ಟಾರೆಯಾಗಿ ಈ ಬಾರಿ ಹಿರಿಯೂರು ವಿಧಾನಸಭಾ ಕ್ಷೇತ್ರ ತ್ರಿಕೋನ ಸ್ಪರ್ಧೆಯಿಂದ ಏರ್ಪಡಿಸುತ್ತಿದ್ದು, ಮತದಾರರು ಯಾರ ಕಡೆ ಹೆಚ್ಚು ಒಲವು ತೋರುತ್ತಾರೆ ಅನ್ನುವುದನ್ನು ಕಾದುನೋಡಬೇಕಿದೆ. ಆದರೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದ್ದು, ಸಧ್ಯದ ಪರಿಸ್ಥಿತಿಯಲ್ಲಿ ಮಾಜಿ ಸಚಿವ ಡಿ. ಸುಧಾಕರ್ ಅವರಿಗೆ ಗೆಲುವು ದೊರಕಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.












Click it and Unblock the Notifications