ವಿದ್ಯಾರ್ಥಿಗಳಿಗೆ 6 ದಿನವೂ ಸಮವಸ್ತ್ರ ಕಡ್ಡಾಯ: ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜು ಆಡಳಿತ ಮಂಡಳಿ ಆದೇಶ, ಏಕೆ ಈ ನಿರ್ಧಾರ?
ಚಿಕ್ಕಮಗಳೂರು, ಆಗಸ್ಟ್, 11: ಕಳೆದ ವರ್ಷ ಹಿಜಾಬ್ ವಿವಾದ ಇಡೀ ರಾಜ್ಯಾದ್ಯಂತ ಸದ್ದು ಮಾಡಿದ್ದು, ಆಗ ಕೋರ್ಟ್ ಶಾಲೆ, ಕಾಲೇಜುಗಳಿಗೆ ವಿದ್ಯಾರ್ಥಿನಿಯರು ಕಡ್ಡಾಯವಾಗಿ ಸಮವಸ್ತ್ರದಲ್ಲೇ ಬರಬೇಕೆಂದು ಆದೇಶ ನೀಡಿತ್ತು. ಆಗಿನಿಂದ ರಾಜ್ಯದಲ್ಲಿ ಈ ವಿಚಾರ ತಣ್ಣಗಾಗಿತ್ತು. ಆದರೆ ಮತ್ತೆ ಇದೀಗ ಚಿಕ್ಕಮಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕುಳಿತಿದ್ದು, ಈ ವಿಡಿಯೋ ಎಲ್ಲಡೆ ಸದ್ದು ಮಾಡಿತ್ತು. ತಕ್ಷಣ ಎಚ್ಚೆತ್ತ ಆಡಳಿತ ಮಂಡಳಿ ವಿವಾದಕ್ಕೆ ತೆರೆ ಎಳೆದಿದೆ.
ಕಾಫಿನಾಡಿನ ಪ್ರತಿಷ್ಠಿತ ಐ.ಡಿ.ಎಸ್.ಜಿ. ಸರ್ಕಾರಿ ಕಾಲೇಜಿನಲ್ಲಿ ಹಿಜಬ್ ವಿವಾದ ಮತ್ತೆ ಮುನ್ನೆಲೆ ಬಂದಿದ್ದು, ಕೂಡಲೇ ಎಚ್ಚೆತ್ತುಕೊಂಡ ಕಾಲೇಜು ಆಡಳಿತ ಮಂಡಳಿ ವಿವಾದಕ್ಕೆ ತೆರೆ ಎಳೆದಿದೆ.

ನಿನ್ನೆ (ಆಗಸ್ಟ್ 10) ಪ್ರಥಮ ವರ್ಷದ ಪದವಿ ವಿದ್ಯಾರ್ಥಿನಿ ಹಿಜಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದು, ತರಗತಿಗೂ ಹಾಜರಾಗಿದ್ದರು. ಕಾಲೇಜಿನಲ್ಲಿ ಬುರ್ಖಾ, ಹಿಜಬ್ ಧರಿಸಲು ಅವಕಾಶವಿಲ್ಲ ಎಂಬ ಕೋರ್ಟ್ ಸೂಚನೆ ಇದ್ದರೂ ಹಿಜಬ್ ಧರಿಸಿ ವಿದ್ಯಾರ್ಥಿನಿ ಕಾಲೇಜಿಗೆ ಬಂದ ಹಿನ್ನೆಲೆ ಆ ವಿಡಿಯೋ ಎಲ್ಲಡೆ ವೈರಲ್ ಆಗಿತ್ತು. ಕಾಲೇಜಿನಲ್ಲಿ ಕೆಲಕಾಲ ಗೊಂದಲದ ವಾತಾವರಣ ಕೂಡ ನಿರ್ಮಾಣವಾಗಿತ್ತು. ತಕ್ಷಣ ಸ್ಥಳಕ್ಕೆ ಪೊಲೀಸರು ಕೂಡ ಭೇಟಿ ನೀಡಿದ್ದರು.
ಬಳಿಕ ಎಚ್ಚೆತ್ತುಕೊಂಡ ಕಾಲೇಜು ಆಡಳಿತ ಮಂಡಳಿ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಸೋಮವಾರದಿಂದ ಶನಿವಾರದವರೆಗೆ ವಾರದ 6 ದಿನವೂ ಕಾಲೇಜಿನ ಸಮವಸ್ತ್ರ ಧರಿಸಿ ಬರುವುದು ಕಡ್ಡಾಯ ಎಂದು ಆದೇಶ ಮಾಡಿದೆ. ಅಲ್ಲದೆ ವಿದ್ಯಾರ್ಥಿಗಳು ಕಡ್ಡಾಯವಾಗಿ ಐಡಿ ಕಾರ್ಡನ್ನು ಧರಿಸಿಯೇ ಕಾಲೇಜಿಗೆ ಬರಬೇಕೆಂದು ಸೂಚನೆ ನೀಡಿದೆ.
ಸಮವಸ್ತ್ರ ಹಾಗೂ ಐಡಿ ಕಾರ್ಡ್ ಧರಿಸದೆ ಬರುವ ವಿದ್ಯಾರ್ಥಿಗಳಿಗೆ ಕಾಲೇಜಿನ ಆವರಣಕ್ಕೆ ಪ್ರವೇಶವಿಲ್ಲ. ಹಾಗಾಗಿ ಕಡ್ಡಾಯವಾಗಿ ಎಲ್ಲಾ ವಿದ್ಯಾರ್ಥಿಗಳು ವಾರದ 6 ದಿನವೂ ಸಮವಸ್ತ್ರ ಹಾಗೂ ಐಡಿ ಕಾರ್ಡ್ ಧರಿಸಿಯೇ ಕಾಲೇಜಿಗೆ ಬರಬೇಕೆಂದು ಕಟ್ಟುನಿಟ್ಟಿನ ಆದೇಶವನ್ನ ಕಾಲೇಜು ಆಡಳಿತ ಮಂಡಳಿ ಮಾಡಿದೆ.
ಕಾಲೇಜಿನಲ್ಲಿ ಹಿಜಾಬ್ ಧರಿಸಿ ಕುಳಿತ ವಿದ್ಯಾರ್ಥಿನಿಯರು
ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಯಲ್ಲಿ ಕುಳಿತಿರುವ ವಿಡಿಯೋ ಸದ್ಯ ವೈರಲ್ ಆಗಿತ್ತು. ವಿದ್ಯಾರ್ಥಿನಿಯರು ಬುರ್ಖಾ ಧರಿಸಿ ತರಗತಿಯಲ್ಲಿ ಪಾಠ ಕೇಳುತ್ತಿರುವುದು ಮತ್ತು ಕಾಲೇಜು ಕಾರಿಡಾರ್ನಲ್ಲಿ ಓಡಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸ್ಥಳಕ್ಕೆ ಎಎಸ್ಪಿ ಹಾಗೂ ಡಿವೈಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.












Click it and Unblock the Notifications