ಕಾರು ಆಫರ್..ಆನ್‌ಲೈನ್ ಗೇಮ್: ಬರೋಬ್ಬರಿ 29 ಲಕ್ಷ ಹಣ ಕಳೆದುಕೊಂಡ ಪೆಟ್ರೋಲ್ ಬಂಕ್ ಸಿಬ್ಬಂದಿ
ಚಿಕ್ಕಮಗಳೂರು, ಆಗಸ್ಟ್ 18: ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುವ ಚಿಕ್ಕಮಗಳೂರಿನ ಯುವಕನೊಬ್ಬ ಆನ್ಲೈನ್ ಕಾಲ್ ಹಾಗೂ ಕ್ಯಾಸಿನೋ ಆಡಿ ಬರೋಬ್ಬರಿ 29 ಲಕ್ಷ ಹಣ ಕಳೆದುಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ನಗರದ ಹೊರಹೊಲಯದಲ್ಲಿರುವ ಪೆಟ್ರೋಲ್ ಬಂಕ್‌ವೊಂದರಲ್ಲಿ ಕೆಲಸ ಮಾಡುವ ಯುವಕ ವಂಚನೆಗೊಳಗಾಗಿದ್ದಾನೆ ಎನ್ನುವ ಮಾಹಿತಿ ಬಹಿರಂಗವಾಗಿದೆ. ಯುವಕನಿಗೆ ಕರೆ ಮಾಡಿದ್ದ ಆನ್‌ಲೈನ್ ವಂಚಕರ ಗುಂಪಿನ ಯುವತಿ ಲಕ್ಕಿ ಡಿಪ್‌ನಲ್ಲಿ ನಿಮ್ಮ ನಂಬರ್ ಡ್ರಾ ಆಗಿದೆ. 25 ಲಕ್ಷದ ಎಸ್.ಯು.ವಿ 500 ಕಾರು ನಿಮಗೆ ಕೇವಲ 11 ಲಕ್ಷಕ್ಕೆ ಸಿಗಲಿದೆ ಎಂದು ಮಾತಿನಲ್ಲಿ ನಂಬಿಸಿದ್ದಾಳೆ. ವಂಚಕರ ಮಾತಿಗೆ ಮರುಳಾದ ಯುವಕ ಪೆಟ್ರೋಲ್ ಬಂಕ್ ಹಣದಲ್ಲಿ 11 ಲಕ್ಷ ರೂಪಾಯಿ ಹಣವನ್ನು ಆನ್‌ಲೈನ್ ಮೂಲಕ ಟ್ರಾನ್ಸ್‌ಫರ್ ಮಾಡಿದ್ದಾನೆ.

ಕೆಲ ದಿನಗಳ ಬಳಿಕ ತಾನು ವಂಚನೆಗೊಳಗಾಗಿರುವುದು ಯುವಕನಿಗೆ ತಿಳಿದು ಬಂದಿದ್ದು, ಕಾರಿನಲ್ಲಿ ಹೋದ 11 ಲಕ್ಷ ರೂಪಾಯಿ ಹಣ ದುಡಿಯಲು ಹೋಗಿ ಮತ್ತೆ 18 ಲಕ್ಷ ರೂಪಾಯಿ ಹಣವನ್ನು ಆನ್‌ಲೈನ್ ಗೇಮ್ ಕ್ಯಾಸಿನೋ ಆಡಿ ಕಳೆದುಕೊಂಡಿದ್ದಾನೆ. ಇದೀಗ, ಆ ಹುಡುಗಿ ಫೋನ್ ಮಾಡಿದ್ದ ನಂಬರ್‌ಗೆ ಎಷ್ಟೇ ಕರೆ ಮಾಡಿದರೂ ಉಪಯೋಗ ಇಲ್ಲದಂತಾಗಿದೆ. ಪೆಟ್ರೋಲ್ ಬಂಕ್‌ನ ದುಡ್ಡು ಬಳಸಿಕೊಂಡು ಕಾರಿನ ದಾರಿ ಕಾಯುತ್ತಿದ್ದ ಯುವಕ ಕಂಗಾಲಾಗಿದ್ದು, ಅತ್ತ ಕಾರು ಇಲ್ಲ. ಇತ್ತ ಹಣವೂ ಇಲ್ಲದೇ ತಲೆ ಮೇಲೆ ಕೈಹೊತ್ತು ಕುಳಿತಿದ್ದಾನೆ.
ಕಾರಿನಲ್ಲಿ ಹೋದ 11 ಲಕ್ಷ ರೂಪಾಯಿ ದುಡಿಯಲು ಆನ್‌ಲೈನ್ ಗೇಮ್ ಮೊರೆ ಹೋಗಿದ್ದಾನೆ. ಅಲ್ಲಿಯೂ ಆತನಿಗೆ ಅದೃಷ್ಟ ಕೈಕೊಟ್ಟಿದ್ದು, ಕಾರು ಹಾಗೂ ಕ್ಯಾಸಿನೋದಿಂದ ಬರೋಬ್ಬರಿ 29 ಲಕ್ಷ ರೂಪಾಯಿ ಹಣವನ್ನು ಯುವಕ ಕಳೆದುಕೊಂಡಿದ್ದಾನೆ.

ಇದೀಗ ನನನಗೆ ಕಾರು ಕೊಡುತ್ತೇವೆ ಎಂದು ಲಕ್ಷ ಲಕ್ಷ ಮೋಸ ಮಾಡಿದ್ದಾರೆ ಎಂದು ಚಿಕ್ಕಮಗಳೂರು ನಗರದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಅಲ್ಲಿ ಪೊಲೀಸರು ತನಿಖೆ ವೇಳೆ ಬಿಡಿಸಿ-ಬಿಡಿಸಿ ಕೇಳಿದಾಗ ಎಲ್ಲೆಲ್ಲಿ ಎಷ್ಟೆಷ್ಟು ಕಳೆದುಕೊಂಡಿದ್ದಾನೆ ಎನ್ನುವುದನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟಿದ್ದಾನೆ.
ಅತ್ತ ಸಂಬಂಧಿಕರಿಗೆ ಹುಷಾರಿಲ್ಲ ಎಂದು ಹೋಗಿದ್ದ ಬಂಕ್ ಮಾಲೀಕ ವಾಪಸ್ ಬಂದಾಗ ಪೆಟ್ರೋಲ್ ಬಂಕ್ ಸ್ಥಿತಿ ನೋಡಿ ಕಂಗಾಲಾಗಿದ್ದಾರೆ. ಆದರೆ ಈ ರೀತಿಯ ಹತ್ತಾರು ಪ್ರಕರಣ ನೋಡಿರುವ ಪೊಲೀಸರು ಸಾರ್ವಜನಿಕರು ಇಂತಹ ಆಫರ್ ಕರೆಗಳ ಬಗ್ಗೆ ಎಚ್ಚರ ಅಂತ ಮನವಿ ಮಾಡಿದ್ದಾರೆ.
ಒಟ್ಟಾರೆ, ಕೊಟ್ಟೋನು ಕೋಡಂಗಿ ಇಸ್ಕಂಡೋನು ವೀರಭದ್ರ ಎಂಬಂತಾಗಿದೆ ಈ ನಗರ ನಿವಾಸಿ ಪಾಡು. ಹೊಸ ಕಾರಿನ ಆಸೆಗೆ ಪೆಟ್ರೋಲ್ ಬಂಕ್‌ನಲ್ಲಿ ದುಡಿದ ಹಣವನ್ನೆಲ್ಲಾ ವಂಚಕರ ಪಾಲಾಗಿದೆ. ಈ ರೀತಿ ಆಫರ್ ಮೇಲೆ ಆಫರ್ ನೀಡುವ ಕರೆಗಳ ಬಗ್ಗೆ ಜನ ಎಚ್ಚರದಿಂದಿರಬೇಕು. ಕುಲ-ಗೊತ್ರ ಇಲ್ಲದ ಆನ್‌ಲೈನ್ ಕರೆ ಬಗ್ಗೆ ಎಚ್ಚರ ವಹಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.












Click it and Unblock the Notifications