Karantaka election 2023: ರಾಜ್ಯದಲ್ಲೇ ಅತಿ ಹೆಚ್ಚು ಅಕ್ರಮ ಮದ್ಯ, ನಗದು, ಹಣ ಸೀಜ್ ಆಗಿರೋದು ಇದೇ ಜಿಲ್ಲೆಯಲ್ಲಿ, ಮಾಹಿತಿ
ಚಿಕ್ಕಮಗಳೂರು, ಮೇ, 05: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಮತದಾರರನ್ನು ಸೆಳೆಯಲು ರಾಜಕಾರಣಿಗಳು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅಲ್ಲದೆ ಮದ್ಯ, ನಗದು ಹಂಚಿಕೆ ಕೂಡ ಹಲವೆಡೆ ನಡೆಯುತ್ತಿದೆ. ಹಾಗೆಯೆ ಇಂತಹ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಕೂಡ ಪೊಲೀಸರು ಕೂಡ ಸಜ್ಜಾಗಿದ್ದಾರೆ. ಅದರಲ್ಲೂ ಕಾಫಿನಾಡಲ್ಲಿ ರಾಜ್ಯದಲ್ಲೇ ಅತಿ ಹೆಚ್ಚುಅಕ್ರಮ ವಸ್ತು, ಮದ್ಯ, ನಗದು ವಶಪಡಿಸಿಕೊಳ್ಳಲಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿಯಾದ ದಿನದಿಂದ ಈವರೆಗೆ ಅತಿ ಹೆಚ್ಚು ಅಕ್ರಮ ವಸ್ತು, ಮದ್ಯ ನಗದು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ ಇದುವರೆಗೂ ಚಿನ್ನಾಭರಣ ಸೇರಿ 36 ಕೋಟಿ ರೂಪಾಯಿ ಮೌಲ್ಯದ ಅಕ್ರಮ ವಸ್ತುಗಳು, ಮಧ್ಯ, ಹಣ ಜಪ್ತಿ ಮಾಡಲಾಗಿದೆ.

ಇದೀಗ ಎರಡು ದಿನದ ಕಾರ್ಯಚರಣೆಯಲ್ಲಿ 35 ಲಕ್ಷ ಮೌಲ್ಯದ ಅಕ್ರಮ ಮದ್ಯ, 1 ಕೋಟಿ ಮೌಲ್ಯದ ಅಕ್ರಮ ಮದ್ಯದ ಬ್ಯಾಕ್ಸ್, 30 ಲಕ್ಷ ಮೌಲ್ಯದ ರಸಗೊಬ್ಬರ, 2 ಕೋಟಿ ನಗದು, 66 ಲಕ್ಷ ಮೌಲ್ಯದ ಕುಕ್ಕರ್, 32 ಕೋಟಿ ಮೌಲ್ಯದ ಚಿನ್ನ-ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚಿಕ್ಕಮಗಳೂರು ಎಸ್‌ಪಿ ಉಮಾ ಪ್ರಶಾಂತ್ ಮಾಹಿತಿ ನೀಡಿದರು.
ಅಲ್ಲದೆ ಅಕ್ರಮ ಮದ್ಯ ರಾಜಕೀಯ ಪಕ್ಷವೊಂದಕ್ಕೆ ಸೇರಿದ್ದು, ಈ ಸಂಬಂಧ ಓರ್ವನ ಬಂಧನ ಮತ್ತು ನಗರಸಭೆ ಸದಸ್ಯರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.
ರಾಜ್ಯದಲ್ಲಿ ಜಪ್ತಿ ಮಾಡಿದ ವಸ್ತುಗಳ ವಿವರ
ಚುನಾವಣೆ ದಿನಾಂಕ ಘೋಷಣೆ ಆದಾಗಿನಿಂದಲೇ (ಮಾರ್ಚ್ 29) ಸರ್ಕಾರದ ಇತರ ಇಲಾಖೆಗಳ ಅಧಿಕಾರಿಗಳು ಸಹಕಾರದಲ್ಲಿ ರಾಜ್ಯ ಚುನಾವಣೆ ಆಯೋಗ ಅಗತ್ಯ ತಪಾಸಣೆ ನಡೆಸುತ್ತಿದೆ. ರಾಜ್ಯಾದ್ಯಂತ ಹದ್ದಿನ ಕಣ್ಣಿಟ್ಟಿದ್ದು, ಆ ಮೂಲಕ ಪಾರದರ್ಶಕ ಚುನಾವಣೆಗೆ ಮುಂದಾಗಿದೆ.
ಇತ್ತೀಚೆಗಷ್ಟೇ ಚುನಾವಣಾಧಿಕಾರಿಗಳು 17.36 ಕೋಟಿ ರೂಪಾಯಿ ದಾಖಲೆ ಇಲ್ಲದ ನಗದು ಹಾಗೂ ಉಡಗೊರೆ ನೀಡಲು ಸಾಗಿಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮಾರ್ಚ್ 29 ನೀತಿ ಸಂಹಿತೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ ಚುನಾವಣೆ ಆಯೋಗದ ಅಧಿಕಾರಿಗಳು ಒಟ್ಟು 126.14 ಕೋಟಿ ರೂ.ನಗದು ಹಣ ಮತ್ತಿತರ ವಸ್ತುಗಳನ್ನು ಜಪ್ತಿ ಮಾಡಿದ್ದರು.
ರಾಜ್ಯದೆಲ್ಲೆಡೆ ಚುನಾವಣಾ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದರೂ, ಚುನಾವಣಾ ಅಕ್ರಮಗಳು ಮುಂದುವರಿದಿವೆ. ಬೆಂಗಳೂರುವೊಂದರಲ್ಲೇ ಸುಮಾರು 100 ಚೆಕ್‌ಪೋಸ್ಟ್ ನಿರ್ಮಿಸಿದ್ದಾರೆ. ರಾಜ್ಯದಲ್ಲಿ ಒಟ್ಟು 126.14 ಕೋಟಿ ರೂ.ನಗದು ಹಣ ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆದುದರಲ್ಲಿ ಬೆಂಗಳೂರಿನದ್ದೇ ಸಿಂಹಪಾಲು ಇದೆ ಎನ್ನುವ ಮಾಹಿತಿಯೂ ಲಭ್ಯವಾಗಿತ್ತು.
ಆದರೆ ಇದೀಗ ಅಕ್ರಮ ಮದ್ಯ, ನಗದು, ವಸ್ತುಗಳನ್ನು ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸೀಜ್ ಮಾಡಲಾಗಿದೆ ಎನ್ನುವ ಮಾಹಿತಿ ಬಹಿರಂಗಗೊಂಡಿದೆ.












Click it and Unblock the Notifications