Naxals Surrender: ಶರಣಾದ 6 ನಕ್ಸಲರಿಗೆ ನ್ಯಾಯಾಂಗ ಬಂಧನ
ಚಿಕ್ಕಮಗಳೂರು, ಜನವರಿ 09: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಬುಧವಾರ ಶರಣಾದ ನಕ್ಸಲರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶವನ್ನು ಹೊರಡಿಸಿದೆ. ಪೊಲೀಸರು ಚಿಕ್ಕಮಗಳೂರು ಕೋರ್ಟ್ ಮುಂದೆ ನಕ್ಸಲರನ್ನು ಹಾಜರುಪಡಿಸಿದ್ದರು. ಸರ್ಕಾರದ ಪ್ಯಾಕೇಜ್ ಒಪ್ಪಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ. ಜಿ. ಪರಮೇಶ್ವರ ಮುಂದೆ 6 ನಕ್ಸಲರು ಶರಣಾಗಿದ್ದರು.
ಪೊಲೀಸರು ಗುರುವಾರ ಚಿಕ್ಕಮಗಳೂರು ಎನ್‌ಐಎ ವಿಶೇಷ ಕೋರ್ಟ್ ಮುಂದೆ ಪೊಲೀಸರು ಶರಣಾದ ನಕ್ಸಲರಾದ ಮುಂಡುಗಾರು ಲತಾ, ವನಜಾಕ್ಷಿ, ಸುಂದರಿ, ಮಾರಪ್ಪ ಅರೋಳಿ, ವಸಂತ, ಎನ್. ಜೀಶಾ ಅವರನ್ನು ಹಾಜರುಪಡಿಸಿದ್ದರು.

ಬೆಂಗಳೂರಿನಲ್ಲಿ ಶರಣಾದ ನಕ್ಸಲರ ಪೈಕಿ ನಾಲ್ವರನ್ನು ಡೈರಿ ಸರ್ಕಲ್ ಬಳಿಯ ಮಹಿಳಾ ಸಾಂತ್ವನ ಕೇಂದ್ರ ಮತ್ತು ಇಬ್ಬರು ಪುರುಷರನ್ನು ಮಡಿವಾಳದ ಎಫ್‌ಎಸ್‌ಎಲ್ ವಿಶೇಷ ಸೆಲ್‌ನಲ್ಲಿ ಇರಿಸಲಾಗಿತ್ತು. ಗುರುವಾರ ಎಲ್ಲರ ವೈದ್ಯಕೀಯ ಪರೀಕ್ಷೆಯನ್ನು ಮುಗಿಸಲಾಯಿತು.
ಬಳಿಕ ಪೊಲೀಸರು ಎಲ್ಲಾ ನಕ್ಸಲರ ಹೇಳಿಕೆಗಳನ್ನು ಪಡೆದುಕೊಂಡು ವಿಡಿಯೋ ಚಿತ್ರಣ ಮಾಡಿಕೊಂಡರು. ಶಸ್ತ್ರಾಸ್ತ್ರಗಳ ಕುರಿತು ಸಹ ಮಾಹಿತಿಗಳನ್ನು ಪಡೆದುಕೊಂಡರು. ಬಳಿಕ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಕರೆದುಕೊಂಡು ಬಂದರು.
ಜನವರಿ 30ರ ತನಕ ನ್ಯಾಯಾಂಗ ಬಂಧನ: ಚಿಕ್ಕಮಗಳೂರು ನಗರದಲ್ಲಿರುವ ಎನ್‌ಐಎ ವಿಶೇಷ ಕೋರ್ಟ್ ಮುಂದೆ ಪೊಲೀಸರು ಶರಣಾದ ನಕ್ಸಲರನ್ನು ಹಾಜರುಪಡಿಸಿದರು. ಕೋರ್ಟ್ ಶರಣಾದ ನಕ್ಸಲರಾದ ಮುಂಡುಗಾರು ಲತಾ, ವನಜಾಕ್ಷಿ, ಸುಂದರಿ, ಮಾರಪ್ಪ ಅರೋಳಿ, ವಸಂತ, ಎನ್. ಜೀಶಾ ಅವರನ್ನು ಕೋರ್ಟ್ ಜನವರಿ 30ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.
ನ್ಯಾಯಾಧೀಶರಾದ ಗಂಗಾಧರ್ ಅವರು ಶರಣಾದ ಎಲ್ಲಾ ನಕ್ಸಲರ ಬಗ್ಗೆ ಮಾಹಿತಿಯನ್ನು ಪಡೆದರು. ವಕಾಲತು ಪ್ರತಿಗಳಿಗೆ ನಕ್ಸಲರಿಂದ ಸಹಿಯನ್ನು ಪಡೆಯಲಾಯಿತು. ತಮ್ಮ ಪರವಾಗಿ ಕೇಸುಗಳನ್ನು ನಡೆಸಲು ನಕ್ಸಲರಿಗೆ ವಕೀಲರ ನೇಮಕವಾಯಿತು. ಅಂತಿಮವಾಗಿ ಕೋರ್ಟ್ ನಕ್ಸಲರನ್ನು ಜನವರಿ 30ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶವನ್ನು ಹೊರಡಿಸಿತು.
ಗೃಹ ಸಚಿವರ ಹೇಳಿಕೆ: ನಕ್ಸಲ್ ಶರಣಾಗತಿ ಬಳಿಕ ಮಾತನಾಡಿದ್ದ ಗೃಹ ಸಚಿವ ಡಾ. ಜಿ. ಪರಮೇಶ್ವರ, ನಕ್ಸಲ್ ಚಟುವಟಿಕೆಯನ್ನು ತೊರೆದ ಆರು ಜನರು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಕ್ಷಮದಲ್ಲಿ ಶರಣಾಗತಿಯಾದರು.
ಅನ್ಯಾಯ, ಶೋಷಣೆ, ದೌರ್ಜನ್ಯದ ವಿರುದ್ಧ ಶಾಂತಿಯುತವಾಗಿ ಹೋರಾಟ ನಡೆಸಲು ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದರು. ಶಸ್ತ್ರಾಸ್ತ್ರ ಮೂಲಕ ಹೋರಾಟ ಮಾಡಿ ನ್ಯಾಯ ಪಡೆಯಲು ಪ್ರಜಾಪ್ರಭುತ್ವದಲಿ, ಸಂವಿಧಾನದಲ್ಲಿ ಯಾವುದೇ ರೀತಿಯ ಅವಕಾಶವಿಲ್ಲ. ಇದನ್ನು ಅರಿತು ನಕ್ಸಲಿಸಂ ತೊರೆದು ಸಮಾಜದ ಮುಖ್ಯವಾಹಿನಿಗೆ ಬಂದಿರುವುದು ಸ್ವಾಗತಾರ್ಹ.
ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಯನ್ನು ಕೊನೆಗಾಣಿಸಲು, ಅವರ ಬೇಡಿಕೆಗೆ ಸ್ಪಂದಿಸಲು ಏನೆಲ್ಲಾ ಕಾರ್ಯಕ್ರಮ ಬೇಕೋ ಅದನ್ನು ಕಾನೂನು ಚೌಕಟ್ಟಿನಲ್ಲಿ ಮಾಡುತ್ತೇವೆ ಎಂಬುದಾಗಿ ತಿಳಿಸಲಾಯಿತು ಎಂದು ತಿಳಿಸಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, "ಅನ್ಯಾಯದ ವಿರುದ್ಧ, ಶೋಷಣೆ, ದೌರ್ಜನ್ಯದ ವಿರುದ್ಧ ನ್ಯಾಯಕ್ಕಾಗಿ ಹೋರಾಡುವುದು ತಪ್ಪಲ್ಲ. ವ್ಯವಸ್ಥೆಯ ಬದಲಾವಣೆಗೆ ಹೋರಾಟ ಮಾಡಲು ಸಂವಿಧಾನದಲ್ಲಿ ಅವಕಾಶವಿದೆ. ಆದರೆ ಹೋರಾಟ ಶಾಂತಿಯುತವಾಗಿ, ನ್ಯಾಯಯುತವಾಗಿ ಮಾಡಬೇಕು. ನಕ್ಸಲಿಸಂ, ಶಸ್ತ್ರಾಸ್ತ್ರ ಹೋರಾಟಕ್ಕೆ ಸಂವಿಧಾನದಲ್ಲಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಕಾಶವಿಲ್ಲ. ಈ ಹಿಂದೆಯೂ ಬಹಳ ನಕ್ಸಲೀಯರು ಶಸ್ತ್ರಾಸ್ತ ತ್ಯಜಿಸಿ ಮುಖ್ಯಧಾರೆಗೆ ಬಂದಿದ್ದಾರೆ. ಇವರ ಪುನರ್ ವಸತಿಗೆ ಸರ್ಕಾರ ನೆರವು ಒದಗಿಸಿದೆ' ಎಂದು ಹೇಳಿದ್ದರು.












Click it and Unblock the Notifications