ಚಿಕ್ಕಮಗಳೂರು; ತಹಶೀಲ್ದಾರ್ ಖರೀದಿಸಿದ್ದ ಭೂಮಿಯೇ ಅಕ್ರಮವಾಗಿ ಒತ್ತುವರಿ
ಚಿಕ್ಕಮಗಳೂರು, ಡಿಸೆಂಬರ್ 12; ಚಿಕ್ಕಮಗಳೂರು ಜಿಲ್ಲೆಯಲ್ಲಿನ ಅಕ್ರಮ ಭೂ ಮಂಜೂರಾತಿ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡಿತ್ತು. ಅಕ್ರಮದ ಸಂಬಂಧ ಭೂ ಕಬಳಿಕೆ ವಿಶೇಷ ನ್ಯಾಯಾಲಯದಲ್ಲಿ ಸ್ವಯಂ ಪ್ರೇರಿತ ದೂರು ದಾಖಲಾಗಿದೆ.
ಮೂಡಿಗೆರೆ ಮತ್ತು ಕಡೂರು ತಾಲೂಕಿನಲ್ಲಿ ನಡೆದಿದ್ದ ಅಕ್ರಮ ಭೂ ಮಂಜೂರಾತಿ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಅದಕ್ಕಾಗಿ ಸರ್ಕಾರ ವಿಶೇಷ ತಂಡ ರಚನೆ ಮಾಡಿ, ತನಿಖೆಗೆ ಸೂಚಿಸಿತ್ತು.

ತನಿಖಾಧಿಕಾರಿಗಳು ಸರ್ಕಾರಿ ಭೂಮಿಯನ್ನು ನಕಲಿ ದಾಖಲೆ ಸೃಷ್ಟಿಮಾಡಿ ಮಂಜೂರು ಮಾಡಿದ ಜಾಲವನ್ನು ಪತ್ತೆ ಹಚ್ಚಲು ಮುಂದಾಗಿದ್ದರು. ಅಕ್ರಮದ ಜಾಡು ಹಿಡಿದು ಹೊರಟ ಅಧಿಕಾರಿಗಳಿಗೆ ಸಿಕ್ಕಿದ್ದು ಅಧಿಕಾರಿಗಳು ಹಾಗೂ ಸ್ಥಳೀಯರು ಸರ್ಕಾರದ ಕಣ್ಣಿಗೆ ಮಣ್ಣೆರಚಿ ಸರ್ಕಾರಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿದ್ದವರ ಇತಿಹಾಸ.
ಎಕರೆಗಟ್ಟಲೇ ಭೂಮಿ ಒತ್ತುವರಿ; ಯಾವಾಗ ಪ್ರಕರಣ ಹೊರಬಂತೋ ಸರ್ಕಾರ 15 ಮಂದಿ ತಹಶೀಲ್ದಾರ್‌ಗಳ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿ, ತನಿಖೆಗೆ ಆದೇಶಿಸಿತ್ತು. ಅಧಿಕಾರಿಗಳು ತನಿಖೆ ನಡೆಸಿದ 245 ಕಡತಗಳಿಗೆ ಸಂಬಂಧಿಸಿದಂತೆ 750 ಎಕರೆ ಜಮೀನು ಮಂಜೂರಾತಿ ರದ್ದು ಮಾಡಿದ್ದಾರೆ.
ಇನ್ನಷ್ಟು ಕಡತಗಳ ಪರಿಶೀಲನೆ ಬಾಕಿ ಇದ್ದು ಮತ್ತಷ್ಟು ಭೂ ಮಂಜೂರಾತಿ ರದ್ದಾಗುವ ಆತಂಕ ಮನೆ ಮಾಡಿದೆ. 15 ತಹಶೀಲ್ದಾರ್‌ಗಳ ತಂಡ ಸುದೀರ್ಘ ತನಿಖೆ ನಡೆಸಿದ ಬಳಿಕ ರಾಜ್ಯ ಸರ್ಕಾರದ ಮುಂದೆ ಹಿರಿಯ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ.
ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರೀಯಗೆ 10500 ಪುಟಗಳ ವರದಿ ಸಲ್ಲಿಸಿದ್ದಾರೆ. ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿರುವ ಈ ಭೂ ಕಬಳಿಕೆ ವಿಶೇಷ ನ್ಯಾಯಾಲಯ ಕೂಡ ಪ್ರಕರಣದ ವಿಚಾರಣೆಯನ್ನು ಕೈಗೊಂಡಿದೆ.
ಈ ವೇಳೆ ನಮೂನೆ 50, 53, 57ರ ಅಡಿಯಲ್ಲಿ ಅರ್ಜಿ ಸಲ್ಲಿಸದೆ ಇದ್ದರೂ ಸರ್ಕಾರಿ ಜಾಗ ಹೇಗೆ ಮಂಜೂರಾಯಿತು? ಅನ್ನೋದು ಸ್ಥಳೀಯರು, ರೈತರ ಆಕ್ರೋಶಕ್ಕೆ ಕಾರಣವಾಗಿದೆ. ನಕಲಿ ದಾಖಲೆ ಸೃಷ್ಟಿಸಿ ಬೇಕಾಬಿಟ್ಟಿಯಾಗಿ ಭೂಮಿ ದೋಚಿದವರ ಬಣ್ಣ ಈಗ ಬಯಲಾಗುತ್ತಿದೆ. ತಹಶೀಲ್ದಾರ್ ಖರೀದಿ ಮಾಡಿದ್ದ ಭೂಮಿಯನ್ನೇ ನಕಲಿ ದಾಖಲೆ ಸೃಷ್ಟಿಸಿ ಅಕ್ರಮಿಸಿರುವ ಪ್ರಕರಣವೂ ಬೆಳಕಿಗೆ ಬಂದಿದೆ.
ಭೂ ಅಕ್ರಮದ ತನಿಖೆ ಇನ್ನಷ್ಟು ವೇಗ ಪಡೆದರೆ ಮತ್ತಷ್ಟು ಅಕ್ರಮಗಳು ಬಯಲಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. 2019 ರಿಂದ 2021ರವರೆಗೆ ನಡೆದಿರುವ ಕಡತಗಳ ವಿಚಾರಣೆ ನಡೆಸಿದ ಅಧಿಕಾರಿಗಳೇ ಸ್ವತಃ ಈ ಪರಿಯ ಒತ್ತುವರಿ ನೋಡಿ ಬೆಚ್ಚಿಬಿದ್ದಿದ್ದಾರೆ.
ಇನ್ನೂ 227 ಕಡತಗಳ ವಿಚಾರಣೆ ಬಾಕಿ ಇದ್ದು, ಇನ್ನಷ್ಟು ಅಕ್ರಮ ಬಯಲಾಗುತ್ತೋ? ಎಂದು ಕಾದು ನೋಡಬೇಕಿದೆ. ಅಕ್ರಮವಾಗಿ ಭೂ ಒತ್ತುವರಿ ಮಾಡಿಕೊಂಡವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುತ್ತದೆ? ಎಂದು ಕಾದು ನೋಡಬೇಕಿದೆ.
ಗಂಭೀರವಾಗಿ ಪರಿಗಣಿಸಿದ ಸರ್ಕಾರ; ಕರ್ನಾಟಕ ಸರ್ಕಾರವೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಧಿಕಾರಿಗಳು ನಡೆಸಿರುವ ಅಕ್ರಮ ಭೂಮಂಜೂರಾತಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ನಕಲಿ ದಾಖಲೆ ಮಾಡಿ ಅರಣ್ಯ ಭೂಮಿಯನ್ನು ವಿದೇಶಿಯರಿಗೆ ಸಹ ಮಂಜೂರು ಮಾಡಲಾಗಿದೆ.
ನವೆಂಬರ್‌ನಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾದ ರಾಜೇಂದ್ರ ಕುಮಾರ್ ಕಟಾರಿಯಾ ಚಿಕ್ಕಮಗಳೂರು ಪ್ರೆಸ್‍ಕ್ಲಬ್‍ವತಿಯಿಂದ ಹಮ್ಮಿಕೊಂಡಿದ್ದ ತಿಂಗಳ ಅತಿಥಿ ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭೂ ಅಕ್ರಮಗಳ ಬಗ್ಗೆ ಮಾತನಾಡಿದ್ದರು.
"ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ತಪ್ಪುಮಾಡಿರುವ ಅಧಿಕಾರಿ ವಿರುದ್ಧ ಕಂದಾಯ ಕಾಯ್ದೆ, ಕ್ರಿಮಿನಲ್‍ಕಾಯ್ದೆ ದಾಖಲಾಗುವುದರೊಂದಿಗೆ ಕಾನೂನು ಬಾಹಿರವಾಗಿ ಮಂಜೂರು ಮಾಡಿದ್ದ ಭೂಮಿಯನ್ನು ರದ್ದುಗೊಳಿಸಿ ಕಂದಾಯ ಇಲಾಖೆಗೆ ವಾಪಸ್ ಪಡೆದುಕೊಳ್ಳಲಾಗುವುದು" ಎಂದು ಹೇಳಿದ್ದರು.
"ಜಿಲ್ಲೆಯಲ್ಲಿ ನಡೆದಿರುವ ಅಕ್ರಮ ಭೂಮಂಜೂರಾತಿಗೆ ಸಂಬಂಧಿಸಿದಂತೆ ತಪ್ಪುಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಸೇರಿದಂತೆ ಮೂರು ರೀತಿಯ ಕ್ರಮ ಜರುಗಿಸಲಾಗುವುದು" ಎಂದು ತಿಳಿಸಿದ್ದರು.












Click it and Unblock the Notifications