ಕಾಫಿನಾಡಿನಲ್ಲಿ ವರುಣನ ಅಬ್ಬರ: ವಿದ್ಯುತ್ ಇಲ್ಲದೇ ಚುನಾವಣಾ ಸಿಬ್ಬಂದಿ ಪರದಾಟ
ಚಿಕ್ಕಮಗಳೂರು, ಮೇ 09: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಚಿಕ್ಕಮಗಳೂರು ನಗರ ಹಾಗೂ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗಿದೆ.
ಮೂಡಿಗೆರೆ, ಕೊಪ್ಪ, ಶೃಂಗೇರಿ, ಕಳಸ, ಎನ್.ಆರ್.ಪುರದಲ್ಲಿ ವರುಣನ ಅಬ್ಬರ ಜೋರಾಗಿದೆ. ಗುಡುಗು-ಮಿಂಚು ಸಹಿತ ಭಾರೀ ಮಳೆಯಾದ ಪರಿಣಾಮ ಮಲೆನಾಡ ಕೆಲ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಏಕಾಏಕಿ ಅಬ್ಬರಿಸಿದ ವರುಣನಿಂದ ಮಲೆನಾಡು ಭಾಗದಲ್ಲಿ ಚುನಾವಣಾ ಕರ್ತವ್ಯಕ್ಕೆ ಅಡ್ಡಿಯಾಗಿದೆ.

ವಿದ್ಯುತ್ ಸಂಪರ್ಕ ಇಲ್ಲದೇ ಚುನಾವಣಾ ಕರ್ತವ್ಯದ ಸಿಬ್ಬಂದಿ ಹಾಗೂ ಅಧಿಕಾರಿಗಳ ತಂಡ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಚಿಕ್ಕಮಗಳೂರಿನ ವಿವಿಧ ಭಾಗಗಳಲ್ಲಿ ಮಳೆ ಮುಂದುವರಿದಿದ್ದು, ವಾಹನ ಸವಾರರು ಹಾಗೂ ಜನರು ಪರದಾಡುವಂತಾಗಿದೆ. ಇತ್ತ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ತಮ್ಮ ಊರುಗಳತ್ತ ತೆರಳುತ್ತಿರುವರಿಗೂ ಕೂಡ ಮಳೆಯಲ್ಲಿ ಸಿಲುಕಿಕೊಂಡು ಪರದಾಡಿದ್ದಾರೆ.
ಈಗಾಗಲೇ ಕಳೆದ 10 ದಿನಗಳಿಂದ ರಾಜ್ಯಾದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮೇ 10 ರಿಂದ 12 ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೇ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆ
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕೂಡ ಏಕಾಏಕಿ ಭಾರೀ ಮಳೆಯಾಗಿದೆ. ನಗರದ ಬಹುತೇಕ ಕಡೆಗಳಲ್ಲಿ ರಸ್ತೆಯು ಸಂಪೂರ್ಣ ಜಲಾವೃತವಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಅಲ್ಲದೇ ನವನಗರದ ಭಾಗದಲ್ಲಿ ಮಳೆಯಿಂದ ಭಾರಿ ಪ್ರಮಾಣದ ನೀರು ಹರಿಯುತ್ತಿದ್ದು, ಜನರು ಆತಂಕಗೊಂಡಿದ್ದಾರೆ. ಅಕಾಲಿಕ ಮಳೆಯಿಂದ ಜನ ಜೀವನ ಹಾಗೂ ಸಂಚಾರ ಅಸ್ತವ್ಯಸ್ತಗೊಂಡಿದೆ. ಹುಬ್ಬಳ್ಳಿಯ ಕೇಶ್ವಾಪೂರದಲ್ಲಿ ವರುಣನ ಅಬ್ಬರಕ್ಕೆ ಮರವೊಂದು ಧರೆಗೆ ಉರುಳಿದ್ದು, ಸಂಚಾರ ಬಂದ್ ಆಗಿದೆ.












Click it and Unblock the Notifications