ಚಿಕ್ಕಮಗಳೂರು; ಬರ ನಿರ್ವಹಣೆ ಕಾಮಗಾರಿ ಲೋಪವಾಗಂತೆ ಸೂಚನೆ
ಚಿಕ್ಕಮಗಳೂರು, ನವೆಂಬರ್ 30: "ಬಯಲುಸೀಮೆಯ ಭಾಗವಾದ ಕಡೂರು, ಅಜ್ಜಂಪುರ ಮತ್ತು ತರೀಕೆರೆ ತಾಲ್ಲೂಕುಗಳು ತೀವ್ರ ತರವಾದ ಬರ ಪರಿಸ್ಥಿತಿ ಎದುರಿಸುತ್ತಿದ್ದು, ಬರ ನಿರ್ವಹಣೆಯಲ್ಲಿ ಅಧಿಕಾರಿಗಳು ಯಾವುದೇ ಲೋಪ ಬರದಂತೆ, ರೈತರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು" ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಜೆ. ಜಾರ್ಜ್ ತಿಳಿಸಿದರು.
ಕಡೂರು ಪಟ್ಟಣದ ತಾಲೂಕು ಪಂಚಾಯಿತಿ 3 ತಾಲ್ಲೂಕುಗಳ ಬರ ನಿರ್ವಹಣೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, "ತೀವ್ರ ಬರಗಾಲದಿಂದ ಅಪಾರ ಬೆಳೆ ನಷ್ಟವಾಗಿದ್ದು ರೈತರು ಕಂಗಾಲಾಗಿದ್ದಾರೆ, ಬರಗಾಲ ನಿರ್ವಹಣೆ ಸಮರ್ಪಕವಾಗಿರಬೇಕೆಂಬ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕೆಂದು" ಅಧಿಕಾರಿಗಳಿಗೆ ಸೂಚಿಸಿದರು.

"ಅಮೃತಮಹಲ್ ಕಾವಲುಗಳಲ್ಲಿ 200 ಎಕರೆ ಭೂಮಿ ಯಿದ್ದು, ಅಲ್ಲಿ ಮೇವು ಬೆಳೆದು ಅಗತ್ಯವಿದ್ದೆಡೆ ಉಪಯೋಗಿಸಬಹುದಾಗಿದೆ. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಿ. ಬರಗಾಲದಲ್ಲಿ ಜಾನುವಾರುಗಳಿಗೆ ಮೇವು ಕೊರತೆಯಾಗದಂತೆ ಕ್ರಿಯಾಯೋಜನೆ ತಯಾರಿಸಿ ಸಿದ್ದವಾಗಿಟ್ಟುಕೊಳ್ಳಬೇಕು. ಕುಡಿಯುವ ನೀರಿನ ಬಾವಿಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು" ಎಂದರು.
"ಮುಂದಿನ ಸಭೆಯೊಳಗೆ ನಿಮ್ಮ ಶಾಸಕರೊಡನೆ ಮೊದಲೇ ಸಭೆ ನಡೆಸಿ ಎಲ್ಲ ವರದಿ ಮತ್ತು ಪ್ರಸ್ತಾವನೆಗಳನ್ನು ಸಿದ್ದಪಡಿಸಿಟ್ಟುಕೊಳ್ಳಬೇಕು. ಎಲ್ಲದಕ್ಕೂ ಗುತ್ತಿಗೆ ಕೊಡುವ ಮಾತು ಬಿಡಿ. ನಿಮಗೆ ಅದು ರೂಡಿಯಾಗಿದೆ. ಇದೇ ಮುಂದುವರೆದರೆ ನಿಮಗೇನು ಕೆಲಸ?. ನೀವು ರಾಜೀನಾಮೆ ನೀಡಿ ಮನೆಯಲ್ಲಿ ಅರಾಮವಾಗಿರಿ" ಎಂದು ಸಚಿವ ಜಾರ್ಜ್ ಅಸಮಾಧಾನ ವ್ಯಕ್ತಪಡಿಸಿದರು.
ಕಡೂರಿನಲ್ಲಿ 5020 ಜನರು ಬೆಳೆ ಪರಿಹಾರಕ್ಕಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಬೆಳೆ ಕಟಾವಿನ ನಂತರ ನಷ್ಟ ಪ್ರಮಾಣ ಅಂದಾಜು ಮಾಡಿ ಪರಿಹಾರ ನಿಗದಿಯಾಗುತ್ತದೆ ಎಂದು ಅಧಿಕಾರಿಗಳು ಹೇಳಿದರು. ಬೆಳೆ ಪೂರ್ಣ ನಷ್ಟವಾಗಿದೆ ಎಂದು ವರದಿಯಾಗಿದೆ. ಆದರೆ ನಷ್ಟವಾಗಿರುವ ಬೆಳೆ ಕಟಾವು ಮಾಡಲು ಹೇಗೆ ಸಾಧ್ಯ?. ನಷ್ಟ ಪರಿಹಾರ ಮೊತ್ತ ನಿಗದಿ ಹೇಗೆ ಮಾಡುತ್ತೀರಿ?. ಎಂದು ಸಚಿವರು ಪ್ರಶ್ನಿಸಿದರು.
ಮೂರೂ ತಾಲ್ಲೂಕುಗಳಲ್ಲಿ ಶೇ 23ರಷ್ಟು ಮಳೆ ಕೊರತೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು ರಾಗಿ 44924 ಹೆಕ್ಟೇರ್ ರಾಗಿ, 8648 ಭತ್ತ, 6475 ಹೆಕ್ಟೇರ್ ಮೆಕ್ಕೆ ಜೋಳ, 846 ಹೆಕ್ಟೇರ್ ಹತ್ತಿ, ಈರುಳ್ಳಿ 5054 ಹೆಕ್ಟೇರ್ ನಷ್ಟವಾಗಿದೆ ಎಂದು ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದರು.
ಶಾಸಕ ಕೆ. ಎಸ್. ಆನಂದ್ ಮಾತನಾಡಿ, ತಾಲ್ಲೂಕಿನಲ್ಲಿ ಬಹುತೇಕ ಎಲ್ಲ ಬೆಳೆಗಳು ನಾಶವಾಗಿವೆ. ಬರ ಪೀಡಿತ ಎಂದು ಘೋಷಣೆಯಾಗಿದೆ. ಬೆಳೆ ನಷ್ಟ ಪರಿಹಾರಕ್ಕೆ ಅಗತ್ಯ ಮಾಹಿತಿ ಸಿದ್ದಗೊಳಿಸಬೇಕು. ಪ್ರತಿ ರೈತರಿಗೆ ಫ್ರೂಟ್ ನಂಬರ್ ಕೊಡುವ ಕಾರ್ಯವಾಗಿಲ್ಲ. ಇನ್ನೂ ನಷ್ಟದ ಅಂದಾಜು ಮುಗಿದಿಲ್ಲ ಎಂದರೆ ಪರಿಹಾರದ ಮೊತ್ತ ಎಷ್ಟು ಬೇಕೆಂದು ಕೇಳುವುದು ಹೇಗೆ?. ಹತ್ತು ದಿನದೊಳಗೆ ಬರ ಪರಿಹಾರದ ಅಂದಾಜು ಮೊತ್ತದ ವರದಿ ಕಡ್ಡಾಯವಾಗಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮೆಸ್ಕಾಂ ಅಧಿಕಾರಿಗಳು ಸಚಿವರ ಸಭೆಗೆ ಮಾತ್ರ ಹಾಜರಾಗುತ್ತಾರೆ. ಮತ್ತೆ ಅವರು ಯಾರೂ ಸಭೆಗೆ ಬರುವುದಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದರು. ಆದರೆ ಅಧಿಕಾರಿಗಳನ್ನು ಸಮರ್ಥಿಸಿಕೊಂಡ ಸಚಿವ ಜಾರ್ಜ್ ಬರಗಾಲದಲ್ಲಿ ಮೆಸ್ಕಾಂ ಇಲಾಖೆಯವರು ಮನಸ್ಸಿಟ್ಟು ಕೆಲಸ ಮಾಡಿ. ಉಳಿದೆಲ್ಲಾ ಸಮಸ್ಯೆಗಳಿಗಾಗಿ ಪ್ರತ್ಯೇಕ ಸಭೆ ನಡೆಸುತ್ತೇನೆ ಎಂದರು.
ಕಡೂರು ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಕೊರತೆಯಿಲ್ಲ ಎಂದು ಗ್ರಾಮೀಣ ಕುಡಿಯುವ ನೀರಿನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದಾಗ ಕೂಡಲೇ ಗರಂ ಆದ ಚಿಕ್ಕಮಗಳೂರು ಶಾಸಕ ಎಚ್. ಡಿ. ತಮ್ಮಯ್ಯ ಸಭೆಗೆ ತಪ್ಪು ಮಾಹಿತಿ ನೀಡಬೇಡಿ. ದೇವನೂರು ಭಾಗದಲ್ಲಿ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಅದನ್ನು ಬಗೆಹರಿಸಲು ಕ್ರಮ ಕೈಗೊಳ್ಳಿ. ಕೊಳವೆ ಬಾವಿ ಕೊರೆಸಿ ಅದಕ್ಕೆ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಿ ಎಂದರು.
ಸಚಿವರಿಂದ ಬೆಳೆ ಪರಿಶೀಲನೆ; "ಬರಗಾಲದಿಂದ ತತ್ತರಿಸಿರುವ ರೈತ ಸಮುದಾಯಕ್ಕೆ ಪರಿಹಾರ ನೀಡುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶೇಷ ಆಸಕ್ತಿ ವಹಿಸಿದ್ದಾರೆ" ಎಂದು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ. ಜೆ. ಜಾರ್ಜ್ ಹೇಳಿದ್ದಾರೆ.
ಮಳೆ ಕೊರತೆಯಿಂದ ಬೆಳೆ ಹಾನಿಯಾದ ಜಿಲ್ಲೆಯ ಕಡೂರು ತಾಲ್ಲೂಕಿನ ಬ್ರಹ್ಮ ಸಮುದ್ರ ಹಾಗೂ ರಾಮನಹಳ್ಳಿ ಗ್ರಾಮದ ರೈತರಾದ ಪ್ರಕಾಶ್ ಮತ್ತು ಚಿಕ್ಕಣ್ಣ ಇವರ ರಾಗಿ ಹಾಗೂ ಜೋಳ ಬೆಳೆದ ಜಮೀನುಗಳಿಗೆ ಬುಧವಾರ ಭೇಟಿ ನೀಡಿದ ನಂತರ ಮಾಧ್ಯಮದವರೊಂದಿಗೆ ಸಚಿವರು ಮಾತನಾಡಿದರು.
"ರಾಜ್ಯ ಸರ್ಕಾರ ರೈತರಿಗೆ ಸಾಧ್ಯವಾದ ಎಲ್ಲ ರೀತಿಯ ನೆರವು ನೀಡಲು ಸಿದ್ದತೆ ಮಾಡಿಕೊಳ್ಳುತ್ತಿದೆ. ಬರದಿಂದ ನಷ್ಟ ಅನುಭವಿಸುತ್ತಿರುವ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಿಗುವ ಸೌಲಭ್ಯ ಕೊಡಿಸಲು ಪ್ರಯತ್ನ ಮಾಡಲಾಗುತ್ತಿದೆ. ಮುಖ್ಯಮಂತ್ರಿಗಳ ಸೂಚನೆ ಹಿನ್ನೆಲೆಯಲ್ಲಿ ಬರದ ವಾಸ್ತವ ಚಿತ್ರಣ ಅರಿಯಲು ರೈತರ ಜಮೀನುಗಳಿಗೆ ಭೇಟಿ ನೀಡಲಾಗುತ್ತಿದೆ" ಎಂದರು.
"ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ ವಾಸ್ತವ ಮಾಹಿತಿಯನ್ನು ಸರ್ಕಾರಕ್ಕೆ ನೀಡಬೇಕು. ರೈತರು ಸಹ ಬೆಳೆ ನಷ್ಟದ ಮಾಹಿತಿಯನ್ನು ತಾವೇ ಆನ್‌ಲೈನ್ ಮೂಲಕ ಚಿತ್ರ ಸಹಿತ ಕೃಷಿ ಇಲಾಖೆಗೆ ಸಲ್ಲಿಸಬಹುದು. ಸರಿಯಾದ ಮಾಹಿತಿ ನೀಡದ ಅಧಿಕಾರಿಗಳ ಮೇಲೆ ಅಗತ್ಯ ಕ್ರಮಕೈಗೊಳ್ಳಲಾಗುವುದು" ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
"ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ನಾಲ್ಕು ತಾಲ್ಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲಾಗಿದೆ. ಉಳಿದ ಕೆಲ ಹೋಬಳಿಯನ್ನು ಪಟ್ಟಿಗೆ ಸೇರಿಸಲಾಗುವುದು. ಕೇಂದ್ರಕ್ಕೆ ರಾಜ್ಯ ಸರ್ಕಾರ ಪಾವತಿಸಿರುವ 4.5 ಲಕ್ಷ ಕೋಟಿ ರೂ. ಎನ್‌ಡಿಆರ್‌ಎಫ್ ನಿಧಿಯಲ್ಲಿ ಕೇವಲ 35-40 ಸಾವಿರ ಕೋಟಿ ರೂ. ಮಾತ್ರ ನೀಡಲಾಗುತ್ತಿದೆ" ಎಂದು ಸಚಿವರು ಹೇಳಿದರು.












Click it and Unblock the Notifications